ತಪ್ಪಾಯ್ತು ತಿದ್ತೋತೀವಿ
ಸಾಗರದಿಂದ ಬೊ.ನಾ. ಕೃಷ್ಣಮೂರ್ತಿಯವರು ಬರೆಯುತ್ತಾರೆ- 'ಜೂ.28ರಂದು ಸಂಪಾದಕೀಯದ 'ನರೇಂದ್ರ ಮೋದಿ-ನೆರೆ ಪರಿಹಾರ' ಎಂಬ ಬರಹದ ಮೊದಲ ಸಾಲಿನ ಮೂರನೇ ಪದವನ್ನು ಓದಿ, 'ಉತ್ತರಾಖಂಡ ರಾಜ್ಯದಲ್ಲಿ ಘರವಾಲ ಎಂಬ ಹೆಸರಿನ ಸೀಮೆ ಇದೆಯೇ' ಎಂಬ ಪ್ರಶ್ನೆಯನ್ನು ಕೇಳಿದರೆ, ಕೊಡಬಹುದಾದ ಒಂದು ಸರಳ ಸಮರ್ಪಕ ಉತ್ತರವೆಂದರೆ- ಇಲ್ಲ!'
'ಈ ಉತ್ತರವನ್ನು ಕೊಡುವವರಿಗೆ ತಲೆಸರಿಯಿಲ್ಲ ಎಂದು ಅನೇಕರಿಗೆ ಅನ್ನಿಸಬಹುದು. ಆದರೆ ಇದು ಅಕ್ಷರಶಃ ಸತ್ಯ. ಕಾರಣ, ಸಂಪಾದಕೀಯದಲ್ಲಿ ಹೇಳಿರುವ ಸೀಮೆಯ ನಿಜವಾದ ಹೆಸರು 'ಘರವಾಲ' ಅಲ್ಲ. ಇದು ಗಢವಾಲ್. ಈ ಸೀಮೆಯಲ್ಲಿರುವ ಎರಡು ಜಿಲ್ಲೆಗಳೆಂದರೆ ಟೆಹರಿ ಗಢವಾಲ್ ಮತ್ತು ಪೌಡೀ ಗಢವಾಲ್.'
'ನಮ್ಮ ದೇಶದ ಹಲವಾರು ಊರುಗಳ, ಪ್ರದೇಶಗಳ ಹೆಸರುಗಳನ್ನು ಇಂಗ್ಲಿಷ್ ಬರವಣಿಗೆಯಲ್ಲಿ ಹೆಗಿರುತ್ತದೆಯೋ ಅದೇ ಸರಿ ಎಂದು ತಪ್ಪಾಗಿ ಗ್ರಹಿಸುವ ಬೆಪ್ಪರಾಗಿರುವ ನಮ್ಮಿಂದ ಇಂಥಾ ಪ್ರಮಾದಗಳಾಗುವುದು ಸಹಜ. ಆದರೆ, ಪತ್ರಿಕೆಗಳು ಸರಿಯಾದ ಹೆಸರು ಏನೆಂಬುದನ್ನು ಜನರಿಗೆ ತಿಳಿಸುವ ಕೆಲಸವನ್ನು ಸುಲಭವಾಗಿ ಮಾಡಬಹುದು. ಕನ್ನಡದಲ್ಲಿ 'ಬೆಂಗಳೂರು' ಎಂದು ಬರೆಯುವುದನ್ನು ಹಾಗೆಯೇ ಓದಲು ಕಲಿತಿರುವ ಹಿಂದಿ, ಇಂಗ್ಲಿಷ್ ಪತ್ರಕರ್ತರೂ, ಆ ಭಾಷೆಯಲ್ಲಿ 'ಳ', ಲಿಪಿ. ಉಚ್ಛಾರಣೆ ಇಲ್ಲದ ಕಾರಣ ಕನಿಷ್ಠ 'ಬೆಂಗಲೂರು' ಎಂದು ' ಉಚ್ಛರಿಸುವಂತಾದರೂ ಬರೆಯದೇ, ಇಂಗ್ಲಿಷ್ ಬರವಣಿಗೆಯ ಅನುಸಾರ 'ಬಂಗಲೋರ್' ಎಂದೋ, 'ಬ್ಯಾಂಗಲೋರ್' ಎಂದೋ ಬರೆದರೆ ಹೇಗೋ ಅದೇ ರೀತಿ ಹಿಂದಿ ಬರವಣಿಗೆಯನ್ನು ಓದಬಲ್ಲ ಕನ್ನಡ ಪತ್ರಕರ್ತರೂ ಉತ್ತರ ಭಾರತದ ಹಲವು ಹೆಸರುಗಳನ್ನು ಇಂಗ್ಲಿಷ್ ಬರವಣಿಗೆಯಲ್ಲಿರುವುದೇ ಸರಿಯಾದುದೆಂದು ನಂಬಿ ಹಾಗೆಯೇ ಬರೆಯುವುದೂ ತಪ್ಪು ಹೌದೋ, ಅಲ್ಲವೋ?
'(ಉದಾಹರಣೆಗೆ- ಡೆಹ್ರಾಡೂನ್, ಅಲಾಹಾಬಾದ್, ತಿಹಾರ್ ಇತ್ಯಾದಿ) ಈ ದುರವಸ್ಥೆಯನ್ನು ನಮ್ಮ ನೆರೆ ರಾಜ್ಯಗಳ ಊರುಗಳ ಹೆಸರುಗಳನ್ನು ಬರೆಯುವಲ್ಲಿ ಕೂಡಾ ಗಮನಿಸಬಹುದಾಗಿದೆ. ಸಾಮಾನ್ಯವಾಗಿ ಈಗ ಪತ್ರಿಕೆಗಳೂ, ಪತ್ರಕರ್ತರೂ ಅಂತರ್ಜಾಲದ ಸಂಪರ್ಕವನ್ನು ಹೊಂದಿರುವಾಗ ಯಾವುದೇ ಊರಿನ, ಪ್ರದೇಶದ ಸರಿಯಾದ ಹೆಸರು (ಅಂದರೆ ಆ ಊರಿನ, ಪ್ರದೇಶದ ಹೆಸರು ಸ್ಥಳೀಯ ಭಾಷೆಯಲ್ಲಿರುವಂತೆ) ಏನೆಂಬುದನ್ನು ಬರೆಯುವ ಮೊದಲು ಅರಿಯಲು ಕಷ್ಟಪಡಬೇಕಾಗಿಲ್ಲ. ಬರೆಯುವವರ ಮನಸ್ಸು ಸಿದ್ಧವಿರಬೇಕಷ್ಟೇ' ಎಂದಿದ್ದಾರೆ.
ಉತ್ತರಾಖಂಡ ರಾಜ್ಯದಲ್ಲಿ ಗಢವಾಲ್ ಮತ್ತು ಕುಮೊವೊ ಎಂಬ ಎರಡು ವಿಭಾಗಗಳಿವೆ. ಉತ್ತರಾಖಂಡದಲ್ಲಿ ಒಟ್ಟು 13 ಜಿಲ್ಲೆಗಳಿದ್ದು, 6 ಜಿಲ್ಲೆಗಳು ಕುಮಾವೊ ವಿಭಾಗಕ್ಕೂ, 7 ಜಿಲ್ಲೆಗಳು ಗಢವಾಲ್ ವಿಭಾಗಕ್ಕೆ ಸೇರುತ್ತವೆ. ಬೊ.ನಾ. ಕೃಷ್ಣಮೂರ್ತಿ ಅವರು ಹೇಳಿದ ಟೆಹರಿ ಜಿಲ್ಲೆಯಲ್ಲ. ಗಢವಾಲ್ ವಿಭಾಗದಲ್ಲಿ ಅವರು ಹೇಳಿದಂತೆ ಎರಡು ಜಿಲ್ಲೆಗಳಲ್ಲ, 7 ಜಿಲ್ಲೆಗಳಿವೆ. ಇಂಗ್ಲಿಷ್ನಲ್ಲಿ ಎಝ್ಠಢಿಛಟ ಎಂದಿರುವುದರಿಂದ ಸಂಪಾದಕೀಯ ಬರೆಯುವವರು 'ಘರವಾಲ' ಎಂದು ಬರೆದಿದ್ದಾರೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

