ಸಮಿತಿಗಳ ರಚನೆ ಸಂಭ್ರಮ
ಕಾಂಗ್ರೆಸ್ಸಿನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಪಕ್ಷದ ಕರ್ನಾಟಕದ ವ್ಯವಹಾರಗಳ ಉಸ್ತುವಾರಿಯ ಅಧಿಕಾರವನ್ನು ವಹಿಸಿಕೊಂಡ ಅನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದು ಮಾಡಿದ ದೊಡ್ಡ ಸಾಧನೆ ಎಂದರೆ ಸಮಿತಿಗಳ ರಚನೆಯ ಉದ್ದೇಶವನ್ನು ಪ್ರಕಟಿಸಿದ್ದು.
ಇದುವರೆಗೆ ಬೇಡಿಕೆ ಕೇಳಿ ಬಂದಿದ್ದು ಪ್ರದೇಶ ಕಾಂಗ್ರೆಸ್ಸಿನ ಸಂಘಟನಾಂಗ ಹಾಗೂ ಶಾಸಕಾಂಗಗಳ ನಡುವೆ ಹೆಚ್ಚಿನ ಹೊಂದಾಣಿಕೆಯನ್ನು ರೂಪಿಸಿ, ಪಕ್ಷದ ಹಾಗೂ ಸರ್ಕಾರದ ನಡುವೆ ಸಮನ್ವಯ ವ್ಯವಸ್ಥೆಯನ್ನು ರೂಪಿಸಲು, ಒಂದು ಸಮನ್ವಯ ಸಮಿತಿಯ ರಚನೆಗೆ. ಇದೇನೂ ಹೊಸದಲ್ಲ, ಹಿಂದೆ ಇದ್ದ ವ್ಯವಸ್ಥೆಯೇ ಅದು. ಪಕ್ಷಕ್ಕೆ ಹಿಂದೆ ಇಂತಹ ಸಮಿತಿಯ ರಚನೆಯ ಕಲ್ಪನೆ ಮೂಡಿದ್ದು, ಅನೇಕ ರಾಜ್ಯಗಳಲ್ಲಿ ಪಕ್ಷದ ಮುಖ್ಯಮಂತ್ರಿಯ ವಿರುದ್ಧ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಖಡ್ಗ ಹಿಡಿದು ನಿಂತಾಗ. ಅದಕ್ಕೆ ಮಜಬೂತಾದ ಉದಾಹರಣೆ ಎಂದರೆ ದೇವರಾಜ ಅರಸು ಮತ್ತು ಕೆ.ಎಚ್. ಪಾಟೀಲರ ನಡುವೆ ನಡೆದಿದ್ದ ಕಾಳಗ. ಆಗ ಕೊನೆಗೆ ಕಾಂಗ್ರೆಸ್ಸೇ ಹೋಳಾಯಿತು.
ಈಗ ಅಂತಹ ಪರಿಸ್ಥಿತಿ ಏನೂ ಇಲ್ಲ. ಆದರೂ ದಿಗ್ವಿಜಯ ಸಿಂಗ್ ಅವರ ಭೇಟಿಯ ಉದ್ದೇಶವೇ ಈ ಸಮನ್ವಯ ಸಮಿತಿಯ ರಚನೆಯ ಉದ್ದೇಶದ ಪ್ರಕಟಣೆ ಎನ್ನುವ ರೀತಿಯಲ್ಲಿ ಅವರು ವರ್ತಿಸಿದ್ದಾರೆ. ಸಂಘಟನೆಯ ಹಲವಾರು ಸಮಿತಿಗಳಲ್ಲಿ ಶಾಸಕರೂ ಇರುತ್ತಾರೆ. ಸಮನ್ವಯ ಅಥವಾ ಸಂಪರ್ಕದ ಕೊರತೆ ಕಂಡು ಬಂದಾಗ ಅದರ ನಿವಾರಣೆಗೆ ಈ ವೇದಿಕೆ ಸಾಲದೇ? ಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ನಡುವೆ ಯಾವ ಸಮಸ್ಯೆಯೂ ಇಲ್ಲದಿದ್ದರೆ ಸಮಿತಿಯ ಅಗತ್ಯವಿಲ್ಲ. ಅಲ್ಲಿ ಸಂಘರ್ಷವಿದ್ದರೆ, ಇಂತಹ ಸಮಿತಿ ಸಂಘರ್ಷಕ್ಕೆ ಒಂದು ವೇದಿಕೆಯಾಗುತ್ತದೆ ಅಷ್ಟೇ.
ಪಕ್ಷದ ಅಂಗರಚನೆಯಲ್ಲೇ ಅಳವಡಿಸಲಾಗಿರುವ ಪ್ರಾತಿನಿಧಿಕ ಸಮಿತಿಗಳಲ್ಲಿ ಮುಖ್ಯಮಂತ್ರಿ ಇದ್ದೇ ಇರುತ್ತಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಇರುತ್ತಾರೆ. ಇದಕ್ಕಿಂತ ಇನ್ಯಾವ ವಿಶೇಷ ಸಮನ್ವಯ ಸಾಧನೆ ಕ್ರಮ ಸಾಧ್ಯ? ಈ ಸಮನ್ವಯ ಸಮಿತಿಗಳು ಜಿಲ್ಲಾ ಮಟ್ಟದಲ್ಲೂ ರಚನೆಯಾಗುವ ಸ್ಪಷ್ಟವಾದ ಸೂಚನೆಗಳನ್ನೂ ದಿಗ್ವಿಜಯ ಸಿಂಗ್ ಅವರು ನೀಡಿದ್ದಾರೆ. ಅಧಿಕಾರವಿರುವವರು, ಅಧಿಕಾರವಿಲ್ಲದೇ ಇರುವವರ ಜತೆ ಕಡ್ಡಾಯವಾಗಿ ವಿಚಾರ ವಿನಿಮಯ ನಡೆಸಲೇಬೇಕೆನ್ನುವ ಒತ್ತಾಯವನ್ನು ಮೇಲಿನಿಂದ ಹೇರಿದರೆ ಈ ಸಮಿತಿಗಳು ನಾಯಕರ ಪ್ರತಿಷ್ಠೆಯನ್ನು ಹೆಚ್ಚಿಸುವ ಸಾಧನಗಳಾಗಿ ಪರಿವರ್ತನೆಯಾಗುವ ಅಪಾಯವೂ ಇದ್ದಿದ್ದೇ.
ಅನುಭವಕ್ಕೆ ಬಂದಿರುವ ವಿಚಾರ ಎಂದರೆ, ಪಕ್ಷದ ಶಾಸಕಾಂಗ ವಿಭಾಗದ ಸಭೆಗಳು, ಕಾರ್ಯಕಾರಿಣಿಯ ಆಯ್ಕೆ ಸಂಬಂಧದಲ್ಲಿ ಪಕ್ಷದ ಅಂಗರಚನೆಯಲ್ಲಿರುವ ವಿಧಿಗಳು ಜಾರಿಗೆ ಬರುವುದು ಅಪರೂಪ. ಬಂದರೂ ಅದು ಕಾಟಾಚಾರಕ್ಕೆ ಮಾತ್ರ. ಅದೇ ರೀತಿ ಕಾಲಕಾಲಕ್ಕೆ ನಡೆಯಲೇ ಬೇಕಾದ ಪ್ರದೇಶ ಕಾಂಗ್ರೆಸ್ ಅಧಿವೇಶನ, ಕಾರ್ಯಕಾರಿ ಸಮಿತಿಯ ಸಭೆಗಳು ನಡೆದರೆ ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯ ಅನಿವಾರ್ಯವಾಗುತ್ತದೆ. ಇವೆಲ್ಲವೂ ದಿಗ್ವಿಜಯ ಸಿಂಗ್ ಅವರಿಗೆ ಗೊತ್ತಿಲ್ಲದೇ ಇರುವ ವಿಚಾರವಲ್ಲ. ಆದರೂ ಅವರು ಸಮನ್ವಯ ಸಮಿತಿಯ ರಚನೆಗೆ ಇಷ್ಟೊಂದು ಮಹತ್ವವನ್ನು ಕೊಟ್ಟಿದ್ದೇಕೋ ಗೊತ್ತಾಗುತ್ತಿಲ್ಲ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಟಿಸಿದ ಇನ್ನೊಂದು ವಿಚಾರ ಎಂದರೆ ಕೋರ್ ಕಮಿಟಿಯ ರಚನೆಯ ಉದ್ದೇಶ. ಪ್ರಾದೇಶಿಕ ಮಟ್ಟದಲ್ಲಿ ಇದೊಂದು ಹೊಸ ಕಲ್ಪನೆ. ಕೇಂದ್ರದಲ್ಲಿ ಇಂತಹ ಸಮಿತಿ ಇದೆ. ಅಲ್ಲಿ ಅಗತ್ಯವಿರಬಹುದು. ರಾಜ್ಯದಲ್ಲಿ ಪಕ್ಷದ ಪ್ರಣಾಳಿಕೆಯ ಅಂಶಗಳನ್ನು ಜಾರಿಗೊಳಿಸುವ ಕೆಲಸದ ಉಸ್ತುವಾರಿಗೆಂದೇ ಕೋರ್ ಕಮಿಟಿಯನ್ನು ರಚಿಸುವುದಾದರೆ, ಮಂತ್ರಿಮಂಡಲದ ಬಹುಮುಖ್ಯವಾದ ಕೆಲಸವನ್ನೇ ಕಸಿದುಕೊಂಡಂತೆಯೇ ಆಗುವುದಿಲ್ಲವೇ? ದಿಗ್ವಿಜಯ ಸಿಂಗ್ ಅವರು ಈ ಎಲ್ಲ ವಿಚಾರಗಳನ್ನು ಒಟ್ಟಿಗೇ ಪ್ರಕಟಿಸಿದ್ದರಿಂದ, ರಾಜ್ಯದ ಮುಖ್ಯಮಂತ್ರಿಯ ಅಧಿಕಾರ ನಿರಂಕುಶವಾದದ್ದಲ್ಲ ಎನ್ನುವುದನ್ನು ಪ್ರತಿಪಾದಿಸುವುದೇ ವರಿಷ್ಠರ ಉದ್ದೇಶ ಎನ್ನುವ ಭಾವನೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಕೆಲವರಲ್ಲಿ ಮೂಡಿರುವುದು ಸಹಜವೇ. ಮುಖ್ಯಮಂತ್ರಿಯ ಸಂವಿಧಾನದತ್ತ ಸ್ಥಾನಮಾನ, ಅಧಿಕಾರವನ್ನೇ ಮೊಟಕುಗೊಳಿಸುವುದು ವರಿಷ್ಠರ ಉದ್ದೇಶವಾಗಿರಲಾರದು. ಅಂತಹ ಉದ್ದೇಶವೇ ಸಂವಿಧಾನ ಬಾಹಿರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

