ಸಂಪಾದಕೀಯ

ಸಿಬಿಐ V/s ಗುಜರಾತ್ ಪೊಲೀಸ್

Published On :

ಒಂಬತ್ತು ವರ್ಷಗಳ ಹಿಂದೆ ಇಶ್ರತ್ ಜಹಾನ್ ಆಕೆಯ ಸಂಗಾತಿ ಜಾವೆದ್ ಷೇಕ್ ಮತ್ತು ಇನ್ನಿಬ್ಬರನ್ನು ಗುಜರಾತ್ ಪೊಲೀಸ್ ಅಧಿಕಾರಿಗಳು ನಕಲಿ ಎನ್‌ಕೌಂಟರ್‌ನಲ್ಲಿ ಗುಂಡಿಟ್ಟು ಕೊಂದರೆಂದು ಸಿಬಿಐ ನ್ಯಾಯಾಲಯದಲ್ಲಿ ಹೂಡಿದ ಆರೋಪ ಪಟ್ಟಿಯಲ್ಲಿ ತಿಳಿಸಿರುವುದು ಇಡೀ ದೇಶವನ್ನು ಒಂದು ಕೆಟ್ಟ ವಾದ-ವಿವಾದದ ಮಡುವಿನಲ್ಲಿ ಮುಳುಗಿಸುವುದು ಖಚಿತ.
ಇಶ್ರತ್ ಜಹಾನ್ ಹಾಗೂ ಇತರ ಮೂವರ ಮೇಲೆ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗೆ ಪಿತೂರಿ ನಡೆಸಿದ್ದರೆನ್ನುವ ಆರೋಪವನ್ನು ಗುಜರಾತ್ ಪೊಲೀಸರು ಹೊರಿಸಿ, ಅವರು ಎನ್‌ಕೌಂಟರ್‌ನಲ್ಲಿ ಸತ್ತರೆಂದು ತಿಳಿಸಿದ್ದರು. ಈ ಪ್ರಕರಣವನ್ನು ವಿಶೇಷ ತನಿಖೆಗೆ ಸಿಬಿಐಗೆ ವಹಿಸಲಾಗಿತ್ತು.
ಸಿಬಿಐ ಹೊರಿಸಿದ ಆರೋಪ ಪಟ್ಟಿಯಲ್ಲಿ ಏಳು ಮಂದಿ ಗುಜರಾತ್ ಪೊಲೀಸ್ ಅಧಿಕಾರಿಗಳು ಹಾಗೂ ಗುಪ್ತಚಾರ ದಳದ ನೌಕರರ ಹೆಸರುಗಳಿವೆ. ಗುಜರಾತ್ ಪೊಲೀಸರ ವಿರದ್ಧ ಸಿಬಿಐ ಹೂಡಿರುವ ಆರೋಪಪಟ್ಟಿಯ ವಿವರಗಳು ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿಯ ಅಧ್ಯಕ್ಷ ರಾಜನಾಥಸಿಂಗ್ ಅವರು ಸಿಬಿಐ ಕೇಂದ್ರದ ಕೈಗೊಂಬೆಯಂತೆ ವರ್ತಿಸಿದೆ ಎಂದು ಆರೋಪಿಸಿದರೆ, ಕೇಂದ್ರ ಸಚಿವ ಕಪಿಲ ಸಿಬಲ್ ರಾಜ್ಯ ಪೊಲೀಸರು ಅಲ್ಲಿನ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದರೆಂದು ಆರೋಪಿಸಿದ್ದಾರೆ.
ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದಂತೆ, ಕ್ರಿಮಿನಲ್ ಪ್ರಕರಣಗಳ ತನಿಖೆಯ ಕಾಲದಲ್ಲಿ ಇಂತಹ ಆರೋಪಗಳು ಪ್ರಕಟವಾಗುತ್ತಿರುವುದು ಇದೇ ಮೊದಲಲ್ಲ. ಆದರೆ ಇಶ್ರತ್ ಜಹಾನ್ ಪ್ರಕರಣದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೆಸರು ಪ್ರಸ್ತಾಪವಾಗಿರುವುದರಿಂದ ಇಲ್ಲಿ ರಾಜಕೀಯ ಪ್ರೇರಿತ ಆರೋಪ - ಪ್ರತ್ಯಾರೋಪಗಳ ತೀವ್ರತೆ ಹೆಚ್ಚು.
ಸಿಬಿಐ ತನಿಖಾ ವರದಿಯಂತೆ ಗುಜರಾತ್ ಪೊಲೀಸ್ ಅಧಿಕಾರಿಗಳು ಇಷ್ರತ್‌ಜಹಾನ್‌ರ ಅಪಹರಣ ಹಾಗೂ ಅವರ ಬಳಿ ಸಿಕ್ಕಿದ ಶಸ್ತ್ರಾಸ್ತ್ರಗಳನ್ನು ಒದಗಿಸುವುದರಲ್ಲಿನ ಪಿತೂರಿಯಲ್ಲಿ ಪಾಲುಗೊಂಡಿದ್ದರು. 2004 ಜನವರಿ 12ರಂದು ಆನಂದ್‌ನ ವಲ್ಸಾರ್ ಪ್ರದೇಶದಿಂದ ಅವರನ್ನು ಅಪಹರಿಸಲಾಗಿತ್ತು. ಅವರನ್ನು ಮೂರು ದಿನಗಳ ಕಾಲ ಅಹಮದಾಬಾದ್ - ಗಾಂಧಿನಗರಗಳಲ್ಲಿ ಅಕ್ರಮವಾಗಿ ಬಂಧಿಸಿ, ಅನಂತರ ಒಂದು ನಿರ್ಜನ ಪ್ರದೇಶದಲ್ಲಿ ಗುಂಡಿಟ್ಟು ಕೊಲ್ಲಲಾಯಿತು. ಇದು ಆರೋಪ ಪಟ್ಟಿಯಲ್ಲಿ ದಾಖಲಾಗಿದೆ. ಇಶ್ರತ್ ಜಹಾನ್ ಲಷ್ಕರಿ ತೊಯಿಬಾದ "ಆತ್ಮಹತ್ಯಾ ಬಾಂಬರ್‌" ಎಂದೂ ಗುಜರಾತ್ ಪೊಲೀಸರು ಹೇಳಿದ್ದರು.
ಈ ಪ್ರಕರಣದ ಇನ್ನೊಂದು ವಿಚಿತ್ರ ಎಂದರೆ ಕೇಂದ್ರ ಗುಪ್ತಚಾರದಳದ ವಿಶೇಷ ನಿರ್ದೇಶಕ ರಾಜೇಂದ್ರ ಕುಮಾರ್ ಅವರೂ (ಆಗ ಅಹಮದಾಬಾದ್‌ನಲ್ಲಿದ್ದರು) ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನುವ ವರದಿ. ಆದರೆ ಆರೋಪ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರ ಹೆಸರು ಪರೋಕ್ಷವಾಗಿ ಪ್ರಸ್ತಾಪವಾದರೂ, ಅವರ ವಿರುದ್ಧ ನೇರವಾದ ಯಾವ ಸಾಕ್ಷ್ಯವೂ ಇಲ್ಲ. ಆದ್ದರಿಂದ ಅವರ ಹೆಸರು ಆರೋಪ ಪಟ್ಟಿಯಲ್ಲಿಲ್ಲ. ಮುಂದೆ ಪೂರಕ ಆರೋಪ ಪಟ್ಟಿಯನ್ನು ಸಲ್ಲಿಸುವ ಸಂಭವವೂ ಇದೆ.
ರಾಜಕೀಯ ಶಕ್ತಿ ಹಾಗೂ ಪೊಲೀಸರ ಅಧಿಕಾರವನ್ನು ಅದು ಬಳಸುವ ರೀತಿ-ನೀತಿಗೆ ಸಂಬಂಧಿಸಿದಂತೆ ಇಂತಹ ಆರೋಪ - ಪ್ರತ್ಯಾರೋಪಗಳು ಕೇಳಿ ಬರುತ್ತಿರುವುದು ಈಚೆಗೆ ಹೆಚ್ಚಾಗಿದೆ. ಇದರಿಂದ ರಾಜಕೀಯಸ್ಥರ ಹೆಸರು ಕೆಡುವುದರ ಜತೆಯಲ್ಲೇ ಸಾಮಾನ್ಯ ಜನರಿಗೆ ಪೊಲೀಸ್ ವ್ಯವಸ್ಥೆಯ ವಿಶ್ವಾಸಾರ್ಹತೆಯಲ್ಲೇ ನಂಬಿಕೆ ಕಡಿಮೆಯಾಗುತ್ತಿರುವುದು ನಿಜಕ್ಕೂ ದುರಂತವೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.