ಭೂ ಗರ್ಭ ಸಂಪತ್ತಿನ ವಿಚಾರ
ಅನೇಕ ವರ್ಷಗಳಿಂದಲೂ ಜನಸಾಮಾನ್ಯರಲ್ಲಿ ಭೂಮಿಯ ಗರ್ಭದಲ್ಲಿ ಅಡಗಿರುವ ಸಂಪತ್ತೆಲ್ಲವೂ ಸರ್ಕಾರದ ಆಸ್ತಿ ಎನ್ನುವ ಭಾವನೆ ಬೆಳೆದಿದೆ. ಅಂದರೆ ಖಾಸಗಿಯವರ ಜಮೀನಿನಲ್ಲಿರುವ ಖನಿಜದ ಮೇಲೂ ಸರ್ಕಾರದ ಸ್ವಾಮ್ಯವಿದೆ ಎನ್ನುವ ಅರ್ಥ ಬರುವ ತೀರ್ಪನ್ನು ಕೆಲವು ಹೈಕೋರ್ಟ್ಗಳಲ್ಲೂ ನೀಡಲಾಗಿದೆ.
ಈಗ ಅಂತಹ ಒಂದು ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಮ್ ಕೋರ್ಟ್ನ ವಿಭಾಗೀಯ ಪೀಠ ಖಾಸಗಿ ಜಮೀನಿನಲ್ಲಿರುವ ಖನಿಜದ ಸ್ವಾಮ್ಯದ ಹಕ್ಕು ಭೂ ಮಾಲೀಕರದ್ದೇ ಎಂದು ತೀರ್ಪು ನೀಡಿದೆ.
ಕೇಂದ್ರದ ಕಾಯಿದೆಯೊಂದರ ಪ್ರಕಾರ, ಭೂಮಿಯಿಂದ ಖನಿಜವನ್ನು ಅಗೆದು ತೆಗೆದು ಮಾರಲು ಸರ್ಕಾರದ ಪರವಾನಗಿ ಬೇಕು. ಅದಕ್ಕೆ ಸಂಬಂಧಪಟ್ಟವರು ಶುಲ್ಕವನ್ನು ಕೊಡಬೇಕು. ಅದು ನಿಜ. ಅದು ಖನಿಜದ ವ್ಯಾಪಾರಕ್ಕೆ ಸಂಬಂಧಿಸಿದ್ದು. ಸ್ಯಾಮ್ಯಕ್ಕಲ್ಲ. ಸರ್ಕಾರಕ್ಕೆ ಸಂವಿಧಾನದಂತೆ ಲಭ್ಯವಾಗಿರುವ ಸಾರ್ವಭೌಮಾಧಿಕಾರವನ್ನು ಬಳಸಿ ಖನಿಜದ ವ್ಯಾಪಾರ, ವ್ಯವಹಾರವನ್ನು ನಿಯಂತ್ರಿಸುವ ಅಧಿಕಾರ ಸರ್ಕಾರಕ್ಕೆ ಇದೆ. ಆದರೆ ಆ ಕಾಯಿದೆಯಿಂದ ಸರ್ಕಾರಕ್ಕೆ ಖನಿಜದ ಮೇಲಿನ ಸ್ವಾಮ್ಯದ ಹಕ್ಕು ಬರುವುದಿಲ್ಲ. ಖನಿಜ ಪ್ರದೇಶಗಳಲ್ಲಿನ ಭೂ ಮಾಲೀಕರ ದೃಷ್ಟಿಯಿಂದ ಸುಪ್ರೀಮ್ ಕೋರ್ಟ್ನ ಈ ತೀರ್ಪು ನಿಜಕ್ಕೂ ಮಹತ್ವವಾದದ್ದು. ಅವರ ಭೂಮಿಯಲ್ಲಿರುವ ಖನಿಜದ ವಿಲೇವಾರಿಯಲ್ಲಿ ಅವರು ಸರ್ಕಾರದ ಪರವಾನಗಿ ಪಡೆದು ಶುಲ್ಕ ಕಟ್ಟಿ ವ್ಯವಹಾರ ನಡೆಸಬೇಕೆನ್ನುವ ಆದೇಶ ನ್ಯಾಯ ಸಮ್ಮತವಾದದ್ದು.
ಸಾಮಾನ್ಯವಾಗಿ ಖನಿಜಗಳು ಲಭ್ಯವಾಗುವುದು ಅರಣ್ಯದಲ್ಲಿ ಹಾಗೂ ಸರ್ಕಾರಕ್ಕೇ ಸೇರಿದ ಜಾಗಗಳಲ್ಲಿ. ಆ ಖನಿಜವನ್ನು ಸರ್ಕಾರ ಯಾವ ರೀತಿ ಬೇಕಾದರೂ ಬಳಸಬಹುದು. ಭೂ ಮಾಲೀಕರಿಗೆ ಸೇರಿದ ಸ್ವತ್ತಿಗೆ ಕೈ ಹಾಕುವಂತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

