ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರು ಜಿಲ್ಲೆ ಬೆಟ್ಟದಪುರದಿಂದ ಬಿ.ಕೆ. ಶ್ರೀಕಾಂತ್ ಅವರು ಬರೆಯುತ್ತಾರೆ- 'ಜು.14ರಂದು ಪತ್ರಿಕೆಯ ಪುಟ 8ರಲ್ಲಿ 'ಅವಿವಾಹಿತೆಯ ಮೇಲೆ ಅತ್ಯಾಚಾರ- ಆರೋಪಿ ಬಂಧನ' ಶೀರ್ಷಿಕೆಯ ಉಪಶೀರ್ಷಿಕೆಯಲ್ಲಿ 'ಹೊಲಕ್ಕೆ ದನ ಮೇಯಿಸಲು ಹೋದವಳ ಮೇಲೆ ಈ ಕೃತ್ಯ' ಎಂದಿದೆ. ಹೊಲಕ್ಕೆ ದನ ಮೇಯಿಸಲು ಅಂದ್ರೆ ಅರ್ಥ ಏನು ಸಾರ್? ಹೊಲದಲ್ಲಿ ದನ ಮೇಯಿಸಲು ಎಂದಿರಬೇಕಿತ್ತು ಅಲ್ಲವೇ?'
'ಆರನೇ ಪುಟದ ನಿಮ್ಮದೇ ಬರಹ 'ನಂಗೆ ಇಷ್ಟಾನೋ' ಕಾಲಂ ನಂಗೂ ಇಷ್ಟ. ಆದರೆ ಒಂದು ಪವಾಡ ಪತ್ತೆ ಹಚ್ಚಿದೀನಿ. ಏನು ಅಂದ್ರೆ, 'ಎರಡನೇ ಸೂಟ್‌ಕೇಸ್‌ನಲ್ಲೇನಿದೆ' ಶಿರ್ಷೀಕೆಯಲ್ಲಿ 'ಆ ವ್ಯಕ್ತಿ ತನ್ನಲ್ಲಿದ್ದ ಒಂದು ಸೂಟ್‌ಕೇಸ್ ತೆಗೆದ. ಅದರಲ್ಲಿ ದಪ್ಪಗಾತ್ರದ ಚೂಪಾದ ಹಲ್ಲುಗಳಿದ್ದವು. ಅವುಗಳನ್ನು ಒಂದರ ಹಿಂದೊಂದರಂತೆ ಮೇಲೆಸೆದ ನಂತರ ಎಲ್ಲ ಕಲ್ಲುಗಳನ್ನು ಹಿಡಿಯಲು ತಲೆಯನ್ನು ಬಳಸಿಕೊಂಡ.' ತಲೇನಾದ್ರೂ ಬಳಸಲಿ, ನೆತ್ತಿನಾದ್ರೂ ಬಳಸಲಿ. ಚೂಪಾದ ಹಲ್ಲುಗಳು- ಕಲ್ಲುಗಳಾದದ್ದೇ ಒಂದು ಪವಾಡ!'
'ಜು.13ರಂದು ಪತ್ರಿಕೆಯ ಮುಖಪುಟದ 'ಯಾರ್ಯಾರಿಗೆ ಏನೇನು?' ಶೀರ್ಷಿಕೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಫಲಾನುಭವಿಗಳಿಗೆ 'ಸಿಎಲ್‌ಎಫ್ ಬಲ್ಬ್‌'ಎಂದಿದೆ. ಇದು 'ಸಿಎಫ್‌ಎಲ್ ಬಲ್ಬ್‌' ಅಲ್ಲವೇ? ಅಥವಾ ಹಾಗೂ ಹೇಳಬಹುದೇ?'
'ಪುಟ 12ರ 'ದೇಶವಿದೇಶ'ದಲ್ಲಿ 'ಮಾಹಿತಿ ಪ್ರಭ' 'ಸಿಗರೇಟ್ ಲೋಕದ ಸುತ್ತ' ಶೀರ್ಷಿಕೆಯಲ್ಲಿ 'ಅನೇಕರು ಸಿಗರೇಟ್ ಸೇದುವ ಮೂಲಕ ತಮ್ಮ ಆರೋಗ್ಯ ಮಾಡಿಕೊಳ್ಳುವುದಷ್ಟೇ ಅಲ್ಲದೆ (ಹಾಳು ಎಂಬ ಪದ ಹಾಳಾಗಿದೆ ಅಥವಾ ಕಳೆದುಹೋಗಿದೆ) ಇತರರ ಆರೋಗ್ಯದ ಮೇಲೂ..' ಎಂದಿದೆ.'
'ಪುಟ 13ರ 'ಕ್ರೀಡೆ/ರಾಜ್ಯ' ಪುಟದಲ್ಲಿ 'ಟಾಪ್‌ಲೆಸ್ ಅಭಿಮಾನಿಗಳಿಗೆ ನಿರ್ಬಂಧ' ಶೀರ್ಷಿಕೆಯಲ್ಲಿ ಬ್ರೆಜಿಲ್‌ನ ಹುಚ್ಚು ಫುಟ್ಬಾಲ್ ಅಭಿಮಾನಿಗಳ ಅಡ್ಡ ಎಂದೇ ಪ್ರಸಿದ್ಧವಾದ ಇಲ್ಲಿನ 'ಮಾರಾಕಾನಾ' ಫುಟ್ಬಾಲ್ ಕ್ರೀಡಾಂಗಣ ಇನ್ನು ಮುಂದೆ... ಓದುತ್ತಾ ಹೋದಂತೆ ಕ್ರೀಡಾಗಂಣ ಹೆಸರು 'ಮಾಕಾರಾಕಾ' ಎಂದಿದೆ. ಯಾವುದು ಸರಿ?' ಎಂದಿದ್ದಾರೆ.
'ಅವಿವಾಹಿತೆಯ ಮೇಲೆ ಅತ್ಯಾಚಾರ- ಆರೋಪಿ ಬಂಧನ' ಸುದ್ದಿಯಲ್ಲಿ 'ಹೊಲಕ್ಕೆ ದನ ಮೇಯಿಸಲು ಹೋಗಿದ್ದ' ಎಂಬುದರ ಬದಲು 'ದನ ಮೇಯಿಸಲು ಹೊಲಕ್ಕೆ ಹೋಗಿದ್ದ' ಎಂದು ಬರೆದಿದ್ದರೆ ಯಾವುದೇ ಗೊಂದಲ ಇರುತ್ತಿರಲಿಲ್ಲ.
'ಸಿಗರೇಟ್ ಲೋಕದ ಸುತ್ತ' ಸುದ್ದಿಯಲ್ಲಿ ತಪ್ಪಾಗಿರುವ ಕುರಿತು ಮೈಸೂರಿನಿಂದ ಕೊ.ಸು. ನರಸಿಂಹಮೂರ್ತಿ ಅವರು ಕೂಡ ಪತ್ರಬರೆದಿದ್ದಾರೆ. ಅದು 'ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದರ ಜತೆಗೆ' ಎಂದಾಗಬೇಕಿತ್ತು. ಇನ್ನು ಸಿಎಲ್‌ಎಫ್ ಬಲ್ಬ್ ಎಂಬುದನ್ನು ನಾನೂ ಕೇಳಿಲ್ಲ. ಸಿಎಫ್‌ಎಲ್ ಬಲ್ಬ್ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಬ್ರೆಜಿಲ್ ಫುಟ್ಬಾಲ್ ಅಭಿಮಾನಿಗಳ ಅಡ್ಡಾ (ಅಡ್ಡ ಅಲ್ಲ) ಎಂದೇ ಖ್ಯಾತಿಗಳಿಸಿರುವ ಮೈದಾನದ ಹೆಸರು ಮಾರಾಕಾನಾ ಎಂದಿದೆ. ಅದು ರಿಯೋ ಡಿ ಜನೈರೋದಲ್ಲಿದೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.