ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ರಾಜಾಜಿನಗರದಿಂದ ನಾಗೇಶ್ ಎಂಬುವರು ಬರೆಯುತ್ತಾರೆ- 'ಜು.24ರಂದು 'ಬೈಟು ಕಾಫಿ'ಯ ಕೊನೆಯ ಪುಟದ 'ಟಾಪ್ಗೇರ್' ವಿಭಾಗದಲ್ಲಿ ಒಂದು ಸುದ್ದಿ ಓದಿ ಅಚ್ಚರಿಯಾಯಿತು. 'ವೆಸ್ಪಾ ವಿಕ್ಸ್' ಎಂಬ ಶೀರ್ಷಿಕೆಯಲ್ಲಿ ವೆಸ್ಪಾ ಕಂಪನಿಯ ಹೊಸ ಸ್ಕೂಟರ್ ಕುರಿತು ಸುದ್ದಿ ಪ್ರಕಟಿಸಿದ್ದೀರಿ. ಹೆಸರು ಓದಿ ಅಚ್ಚರಿಯಾಯಿತು.'
'ವೆಸ್ಪಾ ಸಂಸ್ಥೆಯವರು ಕೇವಲ ತಲೆನೋವು ಇರುವವರಿಗಾಗಿ ಮಾತ್ರ ವಿಶೇಷವಾಗಿ 'ವೆಸ್ಪಾ ವಿಕ್ಸ್' ಮಾದರಿಯ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೇನೋ ಅಂದುಕೊಂಡೆ. ಆಸಕ್ತಿಯಿಂದ ಸುದ್ದಿ ಓದಿದರೆ, ಸುದ್ದಿಯಲ್ಲಿ ಎಲ್ಲೂ ಇದರ ಪ್ರಸ್ತಾಪವೇ ಇಲ್ಲ. ಆದರೆ ಸುದ್ದಿಯುದ್ದಕ್ಕೂ ವೆಸ್ಪಾ ವಿಕ್ಸ್ ಎಂದೇ ಬರೆಯಲಾಗಿದೆ.'
'ನಂತರ ಅಂತರ್ಜಾಲದಲ್ಲಿ ಹುಡುಕಾಡಿದೆ. ಆಗ ತಿಳಿಯಿತು ಅದು 'ವೆಸ್ಪಾ ವಿಕ್ಸ್' ಅಲ್ಲ 'ವೆಸ್ಪಾ ವಿಎಕ್ಸ್' ಅಂತ. ವೆಸ್ಪಾ ವಿಎಕ್ಸ್ ಎಂಬುದನ್ನು ವೆಸ್ಪಾ ವಿಕ್ಸ್ ಎಂದು ಬರೆದ ನಿಮ್ಮ ಪತ್ರಿಕೆ ಸಿಬ್ಬಂದಿಗೆ ನಮೋ ನಮಃ. ವೆಸ್ಪಾ ವಿಕ್ಸ್ ಸುದ್ದಿ ಓದಿ, ಅದಕ್ಕಾಗಿ ತಲೆಕೆಡಿಸಿಕೊಂಡು ತಲೆನೋವು ಬಂದು ವಿಕ್ಸ್ನ ಮೊರೆ ಹೋಗಬೇಕಾಯಿತು' ಎಂದಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಪತಂಗಿ ಹೇಮಲತಾ ಮುರಳಿ ಅವರು ಬರೆಯುತ್ತಾರೆ- 'ಜು.21ರಂದು ಪುಟ 2ರಲ್ಲಿ 'ಯಶವಂತಪುರ-ಬಿಐಇಎಲ್ ನೂತನ ವಾಯುವಜ್ರ ಸೇವೆ' ಎಂಬ ಶೀರ್ಷಿಕೆಯಲ್ಲಿ 'ಬಿಐಇಎಲ್' ಎಂದಿದೆ. ಅದು ಬಿಐಎಲ್ ಎಂದಿರಬೇಕಿತ್ತು.'
'ಹಾಗೆಯೇ ಸುದ್ದಿಯ ಜತೆ ಪ್ರಕಟಿಸಿದ ವಿವರಣೆಯಲ್ಲಿ 'ಯಲಹಂಕ ಬಸ್ ನಿಲ್ದಾಣದಿಂದ ಬಿಎಂಟಿಸಿ ಆರಂಭಿಸಿದ ನೂತನ ವಾಯುವಜ್ರ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಸಿರುನಿಶಾನೆ ತೋರಿದರು' ಎಂದಿದೆ. ಸುದ್ದಿ ವಿವರಣೆ 2ನೇ ಪ್ಯಾರಾದಲ್ಲಿ, 'ಯಶವಂತಪುರದಿಂದ ಶನಿವಾರ ನೂತನ ವಾಯುವಜ್ರ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು' ಎಂದಿದೆ. ಯಲಹಂಕವೋ? ಯಶವಂತಪುರವೋ? ಯಾವುದು ಸರಿ? ಮಂತ್ರಿಗಳ ಸುದ್ದಿ ಪ್ರಕಟಿಸುವಾಗಲೂ ಅಚಾತುರ್ಯವೇ?'
'ಜು.14ರ ಪತ್ರಿಕೆಯ ಪುಟ 5ರಲ್ಲಿ ಒಂದು ಸುದ್ದಿ ಪ್ರಕಟವಾಗಿದೆ. 'ಬೇಕಾಗಿದ್ದಾರೆ ಸಹೃದಯ ಅಂಗಾಂಗ ದಾನಿಗಳು' ಎಂಬ ಸುದ್ದಿಯಲ್ಲಿ ಎದ್ದು ಕಾಣುವಂತೆ ದೊಡ್ಡ ಅಕ್ಷರದಲ್ಲಿ ಮುದ್ರಿತವಾಗಿರುವ 'ಮೃತ ವ್ಯಕ್ತಿಯ ಮನವೊಲಿಸುವಲ್ಲಿ ವಿಫಲರಾಗುತ್ತಿರುವ ಕಿರಿಯ ವೈದ್ಯರು' ಎಂದಿದೆ. ಸ್ವಾಮಿ ಹಿರಿಯ ವೈದ್ಯರಾದರೆ ಮೃತ ವ್ಯಕ್ತಿಯ ಮನವೊಲಿಸುವರೇ? ಯಾರಾದರೂ ಮೃತ ವ್ಯಕ್ತಿಯ ಮನವೊಲಿಸುವ ಹಾಗಿದ್ದರೆ, ಅವರನ್ನು ಮನವೊಲಿಸಿ ಅವರ ವಿಲ್ ಬದಲಾಯಿಸಿ, ನಂತರ ಅವರು ಚಿತೆಯಲ್ಲಿ ಮಲಗುವಂತೆ ಮಾಡಬಹುದು. ಇನ್ನು ಅನೇಕ ಘಟನಾವಳಿಗಳು ಸಂಭವಿಸುತ್ತಿದ್ದವು. ಒಂದು ತಪ್ಪಾದ ವಾಕ್ಯ ಎಷ್ಟು ಅಪಾರ್ಥ ಸೃಷ್ಟಿಸುತ್ತದೆ ನೋಡಿ.'
'ಅದು ಬಹುಶಃ ಮೃತ ವ್ಯಕ್ತಿಯ ಸಂಬಂಧಿಕರ ಮನವೊಲಿಸಲು ಎಂದಿರಬೇಕಿತ್ತು. ಇಂತಹ ತಪ್ಪುಗಳು ಕಂಡಾಗ ನಕ್ಕು ಸುಮ್ಮನಾಗಬಹು ದಾದದ್ದಷ್ಟೇ ನಾವು ಮಾಡಬಹುದಾದ ಕೆಲಸ' ಎಂದಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಯುವಜ್ರ ಸೇವೆ ಆರಂಭವಾಗಿದ್ದು ಯಶವಂತಪುರ ಬಸ್ ನಿಲ್ದಾಣದಿಂದ. ಯಶವಂತಪುರ ಮತ್ತು ಯಲಹಂಕ ಹೆಸರಿನ ನಡುವೆ ಗೊಂದಲ ಮಾಡಿಕೊಂಡು ವರದಿಗಾರರು ಈ ತಪ್ಪೆಸಗಿದ್ದಾರೆ. ಅವರು ಹೇಳಿದ ಎರಡನೇ ತಪ್ಪುಗಳು ಕಂಡಾಗ ನಾವು ಕೂಡ ನಕ್ಕು ಹಗುರಾಗುತ್ತೇವೆ. ಯಾಕೆಂದರೆ ತಪ್ಪು ಮುದ್ರಣಗೊಂಡ ಮೇಲೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

