ಗ್ರಾಮೀಣ ಮಹಿಳಾ ಸ್ವಾವಲಂಬನೆ
ಕೇಂದ್ರದಲ್ಲಿ ಆಳುವ ಸಂಯುಕ್ತ ಪ್ರಗತಿ ಪರ ಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಗ್ರಾಮೀಣ ಮಹಿಳಾ ಸ್ವಾವಲಂಬನೆಯ ಆಂದೋಲನಕ್ಕೆ ತಮ್ಮ ಬೆಂಬಲವನ್ನು ನೀಡಿ, ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಕರೆ ನೀಡಿರುವುದು ಸಾಮಯಿಕವಾಗಿದೆ.
ಗ್ರಾಮೀಣ ಬಡ ಮಹಿಳೆಯರ ಸ್ವಾವಲಂಬನೆ ಯೋಜನೆಯ ಮೂಲಕ ಅವರಲ್ಲಿ ಸಂಘಟನೆಯ ಶಕ್ತಿ ಹಾಗೂ ವ್ಯಕ್ತಿ ಸ್ವಾತಂತ್ರ್ಯದ ಅರಿವನ್ನು ಮೂಡಿಸುವ ಯೋಜನೆ ಇದು. ಸ್ವಸಹಾಯ ಗುಂಪುಗಳ ಮೂಲಕ ಈ ಯೋಜನೆಯನ್ನು ಹಲವಾರು ವರ್ಷಗಳಿಂದಲೂ ಕಾರ್ಯಗತಗೊಳಿಸಲಾಗುತ್ತಿದೆ. ಆದರೂ ಅದು ಸಾಕಷ್ಟು ಪರಿಣಾಮಕಾರಿಯಾಗಿಲ್ಲ. ಈಗಿನ ವ್ಯವಸ್ಥೆಯಲ್ಲಿ ಬಡ ಮಹಿಳೆಯರು ಶೋಷಣೆಯಿಂದ ನರಳುತ್ತಿದ್ದಾರೆನ್ನುವುದು ನಿಜ. ಅದರಲ್ಲೂ ಪರಿಶಿಷ್ಟ ಜಾತಿ - ಪಂಗಡಗಳು, ಧಾರ್ಮಿಕ ಅಲ್ಪ ಸಂಖ್ಯಾತರಲ್ಲಂತೂ ಬಡ ಮಹಿಳೆಯರ ಪಾಡು ಶೋಚನೀಯ. ಅವರಿಗಾಗಿಯೇ ಈಗ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಮುಂಬರಲಿರುವ ಲೋಕಸಭೆ ಚುನಾವಣೆಯಲ್ಲಿ ಬಡ ಮಹಿಳೆಯರ ಮತಬ್ಯಾಂಕನ್ನು ಗಮನದಲ್ಲಿಟ್ಟುಕೊಂಡೇ ಸೋನಿಯಾ ಗಾಂಧಿ ಈ ಯೋಜನೆಗೆ ಬೆಂಬಲ ನೀಡಿದ್ದರೂ ಪರವಾಗಿಲ್ಲ. ಸರ್ಕಾರಗಳು ಅದನ್ನು ಗಂಭೀರವಾಗಿ ಪರಿಗಣಿಸಿದರೆ ಸಾಕು.
ಈಗಾಗಲೇ ಪ್ರಕಟವಾಗಿರುವ ಯೋಜನೆಯಂತೆ, ದೇಶದ ಆರುನೂರು ಜಿಲ್ಲೆಗಳ, ಆರು ಲಕ್ಷ ಹಳ್ಳಿಗಳಲ್ಲಿನ ಏಳು ಕೋಟಿ ಬಡ ಮಹಿಳೆಯರಿಗೆ ಅಗತ್ಯವಾದ ಸಾಲದ ಸೌಲಭ್ಯವನ್ನು ಒದಗಿಸುವ ಕಾರ್ಯಕ್ರಮ ಆರಂಭವಾಗಿದೆ. ಈ ವಿಶೇಷ ಸಾಲದ ಬಡ್ಡಿ ದರ ವಾರ್ಷಿಕ ಲೆಕ್ಕದಲ್ಲಿ ಶೇಕಡಾ 7 ರಷ್ಟು. ಸಾಲವನ್ನು ಸಕಾಲದಲ್ಲಿ ಹಿಂದಕ್ಕೆ ಕೊಟ್ಟರೆ, ಬಡ್ಡಿದರ ಶೇಕಡಾ 4.
ಮಹಿಳೆಯರಿಗಾಗಿಯೇ ಒಂದು ಪ್ರತ್ಯೇಕ ರಾಷ್ಟ್ರೀಯ ಬ್ಯಾಂಕಿನ ರಚನೆಗೆ ಸಾವಿರ ಕೋಟಿ ರುಪಾಯಿಗಳ ಮೂಲ ಧನವನ್ನು ಒದಗಿಸಲು ಕೇಂದ್ರ ಸರ್ಕಾರ ಒಪ್ಪಿದೆ. ಈ ವರ್ಷದ ಬಜೆಟ್ನಲ್ಲಿ ಇಂತಹ ಯೋಜನೆಗಳಿಗೆ ಒದಗಿಸಲಾಗಿರುವ ಹಣದ ಪ್ರಮಾಣ ನಾಲ್ಕು ಸಾವಿರ ಕೋಟಿ ರುಪಾಯಿಗಳು.
ಈ ಯೋಜನೆಯ ಪ್ರಸ್ತಾಪ ಸೋಮವಾರ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದಲ್ಲೂ ಇದೆ. 1999 ರಲ್ಲಿ ವಾಜಪೇಯಿ ಸರ್ಕಾರವೂ ಇಂತಹ ಒಂದು ಯೋಜನೆಯನ್ನು ರೂಪಿಸಿತ್ತು. ಇಂತಹ ಮಹಾನ್ ಯೋಜನೆ ಕೇವಲ ಚುನಾವಣೆ ಸಮಯದ ಘೋಷಣೆಯಾಗಿ ಉಳಿಯಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

