ತಪ್ಪಾಯ್ತು ತಿದ್ಕೋತೀವಿ
ಕೃಷ್ಣ ಕುಲಕರ್ಣಿ ಅವರು ಬರೆಯುತ್ತಾರೆ- 'ಸರ್, ತಪ್ಪು ಕಂಡು ಹಿಡೀಲಿ ಅಂತಾನೇ ತಪ್ಪು ಮುದ್ರಣ ಮಾಡ್ತಿರೋ ಹಾಗಿದೆ. ಕೆಲವು ದಿನಗಳ ಹಿಂದೆ ಕ್ರೀಡಾ ಪುಟದಲ್ಲಿ 'ಫೈನಲ್ ಪ್ರವೇಶಿಸಿದ ಮುಂಬೈ' ಶೀರ್ಷಿಕೆಯ ಸುದ್ದಿ ಓದಿ ನಗು ಬರ್ತಿತ್ತು.'
'ಯಾಕೆಂದರೆ 'ಮುಂಬೈ ತಂಡದ ಪರ ಆರಂಭಿಕರಾಗಿ ಇಳಿದ ಸ್ಮಿತ್ (62), ತಾರೆ (35) ರನ್ ಗಳಿಸಿದರು. ಕೂಪರ್ಗೆ ತಾರೆ ವಿಕೆಟ್ ಒಪ್ಪಿಸಿದರು. ನಂತರ ಬ್ಯಾಂಟಿಂಗ್ಗೆ ಬಂದ ದಿನೇಶ್ ಕಾರ್ತಿಕ್ 22 ರನ್ ಗಳಿಸಿದರು' ಎಂದಿದೆ.'
'ನಂತರದ ಪ್ಯಾರಾದಲ್ಲಿ ಮತ್ತೆ 'ಆರಂಭಿಕರಾಗಿ ಇಳಿದ ಸ್ಮಿತ್ (35), ತಾರೆ (35) ರನ್ಗಳಿಸಿ ಕೂಪರ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ದಿನೇಶ್ ಕಾರ್ತಿಕ್ 1 ಗಳಿಸಿದರು' ಎಂದಿದೆ. ಈ ತಪ್ಪು ಕಣ್ಣಿಗೆ ಕಂಡರೂ ಮುದ್ರಿಸಿದ್ದೀರಾ ಎಂಬುದು ನನ್ನ ಅನುಮಾನ' ಎಂದಿದ್ದಾರೆ.
ಈ ತಪ್ಪನ್ನು ನಾನು ಕೂಡಾ ಅಂದೇ ಗಮನಿಸಿ, ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇನೆ. ಇಲ್ಲಿ ಎರಡು ತಪ್ಪಾಗಿದೆ. ಒಂದೇ ಪ್ಯಾರಾವನ್ನು ಎರಡು ಸಾರಿ ಮುದ್ರಿಸಿದ್ದು ಮೊದಲ ತಪ್ಪಾದರೆ, ಅದೇ ಪ್ಯಾರಾದಲ್ಲಿ ಸಂಖ್ಯೆಗಳು ತಪ್ಪಾಗಿರುವುದು ಎರಡನೇ ತಪ್ಪು. ಮೊದಲ ಪ್ಯಾರಾ ಸರಿಯಾಗಿದೆ. ಇಷ್ಟು ದೊಡ್ಡ ಪ್ಯಾರಾ ಎರಡು ಬಾರಿ ತಪ್ಪಾಗಿ ಪ್ರಕಟಗೊಂಡಾಗ 'ಪುಟಗಳನ್ನು ಸರಿಯಾಗಿ ನೋಡುತ್ತಿಲ್ಲ' ಎಂಬ ಭಾವನೆ ಓದುಗರಲ್ಲಿ ಬರುವುದು ಸಹಜ.
ಆದರೆ ಬೇಕಂತಲೇ ಯಾರೂ ತಪ್ಪು ಮಾಡುವುದಿಲ್ಲ. ತಪ್ಪು ಕಂಡರೆ ತಿದ್ದದೇ ಬಿಡುವುದಿಲ್ಲ. ಆದರೆ ಪುಟವನ್ನು ಸರಿಯಾಗಿ ಓದದೇ ಇದ್ದಾಗ ಇಂತಹ ತಪ್ಪುಗಳು ನುಸುಳುತ್ತವೆ.
ಮಂಡ್ಯಜಿಲ್ಲೆ ಪಾಂಡವಪುರದಿಂದ ಹರಳಹಳ್ಳಿ ಪುಟ್ಟರಾಜು ಅವರು ಬರೆಯುತ್ತಾರೆ- 'ಇದು ಕಣ್ತಪ್ಪಿನಿಂದಾದ ಪ್ರಮಾದವೋ ಅಥವಾ ನಿಜಕ್ಕೂ 'ಕನ್ನಡಪ್ರಭ'ಕ್ಕೆ ಸುದ್ದಿಯ ಬರವಿದೆಯೋ ನಾ ಕಾಣೆ. ಏಕೆಂದರೆ ಮೇ 24ರಂದು ಕ್ರೀಡಾಪುಟದಲ್ಲಿ 'ನಟರ ವಿಚಾರಣೆ ಸದ್ಯಕ್ಕಿಲ್ಲ' ಎಂಬ ಸುದ್ದಿಯು ಒಂದೇ ಪುಟದಲ್ಲಿ ಎರಡು ಬಾರಿ ಪ್ರಕಟವಾಗಿದೆ. 'ಕನ್ನಡಪ್ರಭ'ಕ್ಕೆ ಖಂಡಿತ ಸುದ್ದಿಯ ಕೊರತೆಯಿಲ್ಲ ಎಂಬುದು ಗೊತ್ತು. ಹೀಗಿರುವಾಗ ಒಂದೇ ಸುದ್ದಿಯನ್ನು ಎರಡು ಬಾರಿ ಪ್ರಕಟಿಸಿ, ಜಾಗ ಹಾಳು ಮಾಡುವ ಬದಲು, ಓದುಗರಿಗೆ ಬೇರೆ ಸುದ್ದಿ ನೀಡಬಹುದು. ಇನ್ಮುಂದೆ ಈ ರೀತಿಯ ತಪ್ಪುಗಳಾಗದಿರಲಿ ಎಂಬುದು ನನ್ನ ಆಶಯ.'
'ತಾವು 'ಬೈಟು ಕಾಫಿ'ಯಲ್ಲಿ ನಿತ್ಯ ಭವಿಷ್ಯವನ್ನು ಸಂಕ್ಷಿಪ್ತವಾಗಿ ಪ್ರಕಟಿಸುತ್ತೀರಿ. ಆದರೆ 'ಬೈಟು ಕಾಫಿ' ಇರದ ಶುಕ್ರವಾರದಂದು ನಿತ್ಯ ಭವಿಷ್ಯವನ್ನು 'ಕನ್ನಡಪ್ರಭ'ದ ಪುಟ 11ರಲ್ಲಿ ದೊಡ್ಡದಾಗಿ ಪ್ರಕಟಿಸುವ ಅಗತ್ಯವೇನಿದೆ? ಅದನ್ನೂ ಎಂದಿನಂತೆ ಚುಟುಕಾಗಿ ಪ್ರಕಟಿಸಿ, ಹೆಚ್ಚಿನ ಸುದ್ದಿಗೆ ಅವಕಾಶ ಕಲ್ಪಿಸಬಹುದು' ಎಂದಿದ್ದಾರೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

