ಈ ಸುಸಂದರ್ಭ ಕೈ ಜಾರದಿರಲಿ!
ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ತರಲಾಗುವುದೆಂಬ ಕೇಂದ್ರ ಮಾಹಿತಿ ಆಯೋಗದ ಆದೇಶ ಸ್ವಾಗತಾರ್ಹ. ಇದರ ಜತೆ ರಾಜಕಾರಣಿಗಳ ಚುನಾವಣಾ ಖರ್ಚು-ವೆಚ್ಚಗಳ ಲೆಕ್ಕ ಬಹಿರಂಗಪಡಿಸುವುದು ರಾಜಕೀಯದಲ್ಲೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇಟ್ಟ ದಿಟ್ಟ ಹೆಜ್ಜೆ ಎನ್ನಬಹುದು. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಯಾವ ಪರಿಶೀಲನೆಗೂ ಒಳಪಡದೆ, ದೇಶದ ಆರ್ಥಿಕ ಪರಿಸ್ಥಿತಿ ವರ್ಷ ವರ್ಷಕ್ಕೆ ಕುಗ್ಗುತ್ತಿದ್ದರೂ, ರಾಜಕೀಯ ಪಕ್ಷಗಳ ಹಾಗೂ ರಾಜಕಾರಣಿಗಳ ಆಸ್ತಿ ಮೊತ್ತ ಹೆಚ್ಚುತ್ತಲೇ ಇರುತ್ತದೆ! ಒಂದಲ್ಲ ಒಂದು ನೆಪವೊಡ್ಡಿ ಯಾವುದೇ ಹಿಡಿತಕ್ಕೆ ಸಿಗದೇ ವ್ಯವಹರಿಸುವ ಈ ಸಂದರ್ಭದಲ್ಲಿ ಹೊಸ ಕಾಯಿದೆ, ಮನಸೋ ಇಚ್ಛೆ ಹಣ ಸಂಗ್ರಹಿಸುವ ವೇಗಕ್ಕೆ ಕಡಿವಾಣ ಹಾಕಿದಂತಾದೀತು. ಇದರಿಂದ ಸಾಮಾಜಿಕ ಸಮತೋಲನ ಕಾಪಾಡುವಲ್ಲಿ ಸಹಾಯಕಾರಿಯೂ ಆದೀತು. ಇದರ ಜತೆ, ಬಿಸಿಸಿಐ, ಐಪಿಎಲ್ನಂತಹ ಕ್ರೀಡಾ ಸಂಸ್ಥೆಗಳನ್ನು ಆರ್.ಟಿ.ಐ. ಕಾಯಿದೆ ಅಡಿ ಸೇರಿಸುವುದರಿಂದ ಯಾವುದೇ ರೀತಿಯ ದಬ್ಬಾಳಿಕೆಯ ಚಟುವಟಿಕೆ ನಡೆಯದೆ ಕ್ರೀಡಾ ಕ್ಷೇತ್ರದಲ್ಲಿ ಪಾರದರ್ಶಕತೆ ಉಳಿದೀತು. ಕಳ್ಳನಿಗೆ ಅಳ್ಳೆದೆ ಇರಬೇಕೇ ಹೊರತು ಪ್ರಾಮಾಣಿಕರೆಂದು ಕೊಚ್ಚಿ ಕೊಳ್ಳುವವರಿಗೆ ಎಲ್ಲಿಯ ಭಯ? ಆದರೂ ಹೆಚ್ಚಿನ ರಾಜಕೀಯ ಪಕ್ಷಗಳು ಸಿಐಸಿ ಆದೇಶವನ್ನು ಯಾಕೆ ತಿರಸ್ಕರಿಸುತ್ತಿದ್ದಾರೆಂದೇ ತಿಳಿಯದು. ಪಟ್ಟಭದ್ರ ಹಿತಾಸಕ್ತರು ಇಲ್ಲಸಲ್ಲದ ಆರೋಪ ಮಾಡುತ್ತ ತಮ್ಮ ವರ್ಚಸ್ಸನ್ನು ಕುಗ್ಗಿಸುತ್ತಿದ್ದಾರೆ ಎಂದೆಲ್ಲ ಹಲುಬುವ ರಾಜಕಾರಣಿಗಳಿಗೆ ಇದೊಂದು ಸುವರ್ಣಾವಕಾಶವಲ್ಲವೇ? ಆದಾಗ್ಯೂ ಯಾಕೀ ಹಿಂಜರಿತ? ತುಂಬು ಹೃದಯದಿಂದ ಸ್ವಾಗತಿಸಿ ಜನರ ನಂಬಿಕೆಗೆ ಪಾತ್ರವಾಗುವ ಈ ಸುಸಂದರ್ಭ ಕೈಜಾರದಂತೆ ನೋಡಿಕೊಳ್ಳುವುದೇ ಜಾಣರ ಲಕ್ಷಣ.
-ಶಂಕರನಾರಾಯಣ ಭಟ್, ಮಾಡಗೇರಿ, ಹೊನ್ನಾವರ
ಸಿಗ್ನಲ್ ಲೈಟ್ ಅಳವಡಿಸಿ
ಕರ್ನಾಟಕ ರಾಜ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ರವರ ತವರಿನ ಸನಿಹ ಇರುವ ತಾಲ್ಲೂಕು ಕೇಂದ್ರ ಮಾಲೂರು(ಕೋಲಾರ ಜಿಲ್ಲೆ). ಸುಮಾರು 05 ಲಕ್ಷಕ್ಕಿಂತ ಅಧಿಕ ಮಂದಿ ವಾಸಿಸುತ್ತಿರುವ ಈ ತಾಲೂಕಿನಲ್ಲಿ ದಟ್ಟಣೆಯಿಂದಾಗಿ ಪ್ರಯಾಣಿಕರು ಪ್ರತಿನಿತ್ಯ ಪರದಾಡುವ ಜೊತೆಯಲ್ಲಿ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಪಟ್ಟಣದ ಮೂರು ಕಡೆ ಸಿಗ್ನಲ್ ಲೈಟ್ ಅಳವಡಿಸಬೇಕಾಗಿದೆ. ಹೊಸಕೋಟೆ ಹಾಗೂ ಕೋಲಾರ ರಸ್ತೆಯಲ್ಲಿನ ಬಾಲಾಜಿ ವೃತ್ತದಲ್ಲಿ, ಅರಳೇರಿ ರಸ್ತೆ ಹಾಗೂ ಹೊಸೂರು ರಸ್ತೆಯಲ್ಲಿ ಹಾಗೂ ಬಸ್ ನಿಲ್ದಾಣದ ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಸುವ ಮೂಲಕ ತಾಲೂಕು ಕೇಂದ್ರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು. ಪಟ್ಟಣದಲ್ಲಿ ಸಿಗ್ನಲ್ ಲೈಟ್ ಇಲ್ಲದ ಕಾರಣ ಪ್ರತಿನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಿರುವುದರಿಂದ ಅನೇಕ ಸಾವು ನೋವುಗಳಿಗೆ ರಹದಾರಿ ಆಗಿದೆ. ಈ ಒಂದು ದೊಡ್ಡ ಕಂಟಕದಿಂದ ಮಾಲೂರಿನ ಜನತೆಯನ್ನು ಪಾರು ಮಾಡಲು ಈ ಕೂಡಲೇ ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಸಂಬಂಧಪಟ್ಟ ಸಚಿವರು ಮುಂದೆಬರಬೇಕು.
-ಲಕ್ಕೂರು ಎಂ. ನಾಗರಾಜ್, ಮಾಲೂರು, ಕೋಲಾರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

