ನರೇಂದ್ರ ಮೋದಿ: ಸಹಜ ಆಯ್ಕೆ
ಈಚಿನ ವರ್ಷಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಭವಿಷ್ಯದ ಮುಖ ಎಂದೇ ಪ್ರಚಾರ ಪಡೆದಿರುವ ನರೇಂದ್ರ ಮೋದಿ ಅವರಿಗೆ ಪಕ್ಷದ ರಾಷ್ಟ್ರೀಯ ವೇದಿಕೆಯಲ್ಲಿ ಪ್ರಮುಖವಾದ ಸ್ಥಾನವನ್ನು ನಿರಾಕರಿಸುವುದು ಈಗ ಸಾಧ್ಯವೇ ಇರಲಿಲ್ಲ.
ಹೇಳಿಕೇಳಿ ಬಿಜೆಪಿ ಒಂದು ಕಾರ್ಯಕರ್ತರ ಆಧರಿತ ಪಕ್ಷ. ಈಗಿನ ವಾತಾವರಣದಲ್ಲಿ ಕಾರ್ಯಕರ್ತರ ಬೆಂಬಲ ಸಂಪೂರ್ಣವಾಗಿ ಮೋದಿ ಅವರ ಕಡೆಗೇ ಇತ್ತು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಸತತವಾಗಿ ಮೂರನೆಯ ಹ್ಯಾಟ್ರಿಕ್ ವಿಜಯವನ್ನು ಸಾಧಿಸಿದ ಮೋದಿ, ಗೋವಾದಲ್ಲಿನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಮುನ್ನ ನಡೆದ ಆರು ವಿಧಾನ ಸಭೆ ಕ್ಷೇತ್ರಗಳಲ್ಲೂ ಗೆದ್ದು ಬಿಜೆಪಿಯ ಭರವಸೆಯ ನಾಯಕರಾಗಿಯೇ ಹೊರಹೊಮ್ಮಿದ್ದರು. ಕರ್ನಾಟಕದಲ್ಲಿ ಪಕ್ಷದ ಅತಿ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಹುಮ್ಮಸ್ಸನ್ನು ಮೂಡಿಸಲು ಏನಾದರೊಂದು ರೀತಿಯ ದೊಡ್ಡ ಬದಲಾವಣೆ ಬೇಕಾಗಿತ್ತು.
ನರೇಂದ್ರ ಮೋದಿ ಅವರಿಗೆ ಪಕ್ಷದ ಕೇಂದ್ರ ಚುನಾವಣೆ ಸಮಿತಿಯ ಅಧ್ಯಕ್ಷತೆಯ ಪಟ್ಟವನ್ನು, ಹಲವು ತಿಂಗಳ, ತೀವ್ರ ತೊಳಲಾಟದ ಅನಂತರ ಪಕ್ಷದ ಪ್ರಮುಖ ರಾಜನಾಥ ಸಿಂಗ್ ಕಟ್ಟಿದ್ದೇ ಆ ಬದಲಾವಣೆಯಾದರೂ ಆಗಬಹುದು.
ಭಾರತೀಯ ಜನತಾ ಪಾರ್ಟಿಯ ಪೂರ್ವಾಶ್ರಮವಾದ ಭಾರತೀಯ ಜನ ಸಂಘದ ಕಾಲದಿಂದಲೂ ಮೇಲಿನ ಮಟ್ಟದಲ್ಲೇ ವಿಜೃಂಭಿಸಿದ್ದ ಲಾಲ್ ಕೃಷ್ಣ ಆಡ್ವಾಣಿ ಹಾಗೂ ಅವರ ಕೆಲವು ಸಂಗಾತಿಗಳಿಗೆ ಇಷ್ಟವಿಲ್ಲದೇ ಹೋದರೂ, ಪಕ್ಷದ ಎಲ್ಲ ವರ್ಗಗಳ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದ ಅನಂತರ, ಮೋದಿ ಅವರನ್ನು ಪಕ್ಷದ ಪ್ರಧಾನಿ ಸ್ಥಾನದ ಅಭ್ಯರ್ಥಿಯಾಗಿ ಬಿಂಬಿಸಬೇಕೆನ್ನುವ ಒತ್ತಾಯಕ್ಕೆ ಮಣಿಯದೇ, ಅವರಿಗೆ ಬೇರೆ ಸ್ಥಾನವನ್ನು ಕೊಡಬಾರದೆನ್ನುವವರ ಅಭಿಪ್ರಾಯವನ್ನು ಒತ್ತರಿಸಿ, ಪಕ್ಷದ ಪ್ರಮುಖ ರಾಜನಾಥ ಸಿಂಗ್ ಕೇಂದ್ರ ಚುನಾವಣೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದು ನಾಯಕತ್ವದಲ್ಲಿ ತಲೆಮಾರಿನ ಬದಲಾವಣೆಗೆ ನಾಂದಿಯಾಗಿರುವುದಂತೂ ನಿಜ.
ನರೇಂದ್ರ ಮೋದಿಗೆ ಪಕ್ಷದ ರಾಷ್ಟ್ರೀಯ ವೇದಿಕೆಯಲ್ಲಿ ಒಂದು ಪ್ರಮುಖ ಸ್ಥಾನವನ್ನು ನೀಡಿರುವುದರಿಂದ ಈ ತಲೆಮಾರಿನ ಬದಲಾವಣೆಗೆ ಕಾರ್ಯಕಾರಿಣಿಯ ಒಪ್ಪಿಗೆಯಂತೂ ಸಿಕ್ಕಿದೆ. ಆಡ್ವಾಣಿಯವರಿಗೆ 85 ವರ್ಷ. ಮೋದಿಗೆ 63 ವರ್ಷ. ಇಬ್ಬರ ನಡುವೆ ಎರಡು ತಲೆಮಾರುಗಳ ಅಂತರವಿರುವುದನ್ನು ಗುರ್ತಿಸಲೇ ಬೇಕು.
ನಿಜ. ಚುನಾವಣೆ ಪ್ರಚಾರ ಸಮಿತಿಯ ಅಧ್ಯಕ್ಷರ ಆಯ್ಕೆ ಬಿಜೆಪಿಯ ಹಕ್ಕು. ಅದರಲ್ಲಿ ರಾಷ್ಟ್ರೀಯ ಜನತಾಂತ್ರಿಕ ಕೂಟದ ಇತರ ಪಕ್ಷಗಳಿಗೆ ಪಾಲೂ ಇಲ್ಲ, ಪಾತ್ರವೂ ಇಲ್ಲ. ಮೋದಿ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನವಂತೂ ಸಿಕ್ಕಿದೆ. ಅವರ ಸ್ವಭಾವ, ಒಂದು ರೀತಿಯಲ್ಲಿ ಆಕ್ರಮಣಕಾರಿ ಮನೋಧರ್ಮದ ಪ್ರದರ್ಶನ. ಅದನ್ನು ಯುವ ಜನಾಂಗ ಸ್ವಾಗತಿಸಬಹುದು.
ಬಿಜೆಪಿಯ ರಾಷ್ಟ್ರೀಯ ನಾಯಕರೆಂದು ಹೇಳಿಕೊಳ್ಳುವ ದೀರ್ಘ ಕಾಲದ ದೆಹಲಿ ನಿವಾಸಿಗಳಿಗೆ ಪ್ರಾದೇಶಿಕ ನಾಯಕನೊಬ್ಬ ದೆಹಲಿಯಲ್ಲಿ ಪಕ್ಷದ ಕೂಟಗಳಲ್ಲಿ ಅವರಿಗಿಂತ ಉನ್ನತ ಸ್ಥಾನದಲ್ಲಿ ಕೂಡುವಂತಾದಾಗ ಸ್ವಲ್ಪ ಕಿರಿಕಿರಿ- ಕಿರುಕುಳ ಆಗಲೂಬಹುದು. ಅದು ಅನಿವಾರ್ಯ.
ನರೇಂದ್ರ ಮೋದಿ ಅವರನ್ನು ರಾಷ್ಟ್ರೀಯ ನಾಯಕರ ಪೀಠಕ್ಕೆ ಏರಿಸಿದ್ದು ಭಾರತೀಯ ಜನತಾ ಪಾರ್ಟಿಯ ಆಂತರಿಕ ವಿಚಾರ ಎನ್ನುವುದು ನಿಜ. ಆದರೆ ಅಂತಹ ಪ್ರಕಟಣೆ ಹೊರಬೀಳುವುದಕ್ಕೆ ಮುನ್ನ ನಡೆದ ಪಕ್ಷದ ಆಂತರಿಕ ಬೆಳವಣಿಗೆಗಳು ಹಾಗೂ ಮೋದಿಯ ಆಯ್ಕೆಯ ಪ್ರಕ್ರಿಯೆ ನಡೆದ ರೀತಿ- ನೀತಿ ಜನರಿಗೂ ಸಂಬಂಧಿಸಿದ ವಿಚಾರವೇ. ಎಷ್ಟಾದರೂ ರಾಜಕೀಯ ಪಕ್ಷಗಳೂ ಸಾರ್ವಜನಿಕ ಸಂಘಟನೆಗಳೇ ಅಲ್ಲವೇ. ಅವೇನೂ ಪ್ರೈವೇಟ್ ಲಿಮಿಟೆಡ್ ಕಂಪನಿಗಳಲ್ಲವಲ್ಲ.
ಜನತಾಂತ್ರಿಕ ವಿಧಿ- ವಿಧಾನವನ್ನು ತನ್ನ ಅಂಗ ರಚನೆಯಲ್ಲೇ ಅಳವಡಿಸಿಕೊಂಡಿರುವ ಬಿಜೆಪಿ, ತನ್ನ ಅಧ್ಯಕ್ಷರ ಆಯ್ಕೆಯಲ್ಲಿ ಹಾಗೂ ಕೇಂದ್ರ ಚುನಾವಣಾ ಸಮಿತಿಯ ಅಧ್ಯಕ್ಷರ ನೇಮಕದಲ್ಲಿ ಅನುಸರಿಸಿರುವ ರೀತಿ ಯಾವುದು? ಎಲ್ಲ ಜನತಾಂತ್ರಿಕ ಪಕ್ಷಗಳಲ್ಲೂ ಹಲವಾರು ವಿಚಾರಗಳಲ್ಲಿ ಅಭಿಪ್ರಾಯ ಭೇದಗಳು ಕಂಡುಬರುವುದು ಸಹಜ. ಆ ಭಿನ್ನಾಭಿಪ್ರಾಯಗಳನ್ನು ಪರಸ್ಪರ ಮಾತುಕತೆ, ವಿಚಾರ ವಿನಿಮಯದ ಮೂಲಕ ಬಗೆಹರಿಸಿಕೊಳ್ಳುವುದು ಸಾಧ್ಯವಾಗದೇ ಹೋದರೆ ಬಹುಮತದ ಅಭಿಪ್ರಾಯಕ್ಕೆ ಶರಣಾಗುವುದು ಅಪ್ಪಟ ಜನತಂತ್ರದ ವಿಧಾನ. ಆ ಸಂಸ್ಕೃತಿಯೇ ನಮ್ಮ ರಾಜಕೀಯ ಪಕ್ಷಗಳಿಗೆ ಅಪರಿಚಿತವಾಗಿರುವಂತಿದೆ.
ಪಕ್ಷದ ಅಂಗರಚನೆಯಲ್ಲಿ ನಾಯಕರ ಆಯ್ಕೆಗೆ ಸ್ಪಷ್ಟವಾದ ವಿಧಾನವಿದೆ. ಚುನಾಯಿತ ಪ್ರತಿನಿಧಿಗಳ ಪ್ರತಿನಿಧಿ ಸಭೆಯಲ್ಲಿ ಚುನಾವಣೆ ನಡೆಸುವುದೇ ಜನತಾಂತ್ರಿಕ ರಾಜ ಮಾರ್ಗ. ಅದನ್ನು ಬಿಟ್ಟು ಹಿರಿಯರು ದೆಹಲಿಯಲ್ಲಿ, ಕಾರ್ಯಕಾರಿಣಿ ಸಭೆ ನಡೆದಿದ್ದು ಗೋವಾದಲ್ಲಿ ಎನ್ನುವ ಸ್ಥಿತಿಯಲ್ಲಿ ಹಲವು ವದಂತಿಗಳ ನಡುವೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದೇಶದಂತೆ, ರಾಜನಾಥ ಸಿಂಗ್ ಒಟ್ಟಾರೆ ಅಭಿಪ್ರಾಯದ ಮೂಲಕ ಮೋದಿ ನೇಮಕವನ್ನು ಪ್ರಕಟಿಸುವಂತಾಗಿದ್ದು, ಭಾರತೀಯ ಜನತಾ ಪಾರ್ಟಿಯ ಪ್ರತಿಷ್ಠೆಯನ್ನು ಹೆಚ್ಚಿಸಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

