ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಮೈಸೂರಿನ ಜೆ.ಪಿ. ನಗರದಿಂದ ಬ್ಯಾಂಕ್ ಶಿವಕುಮಾರ ಅವರು ತುಂಬ ದಿನಗಳ ನಂತರ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ- 'ದಿನಾಂಕ 08-06-2013 ರ ಕ.ಪ್ರ. ಪುಟ 5ರಲ್ಲಿ 'ಕೇಂದ್ರದ ಹಗರಣದಿಂದ ದೇಶಕ್ಕೆ ಗೌರವ ಬಂದಿದೆಯಾ?' ಶೀರ್ಷಿಕೆ ಅಡಿಯಲ್ಲಿ ಛಾಯಾಚಿತ್ರವೊಂದು ಪ್ರಕಟಗೊಂಡಿದ್ದು ಅದರಲ್ಲಿ ಸಚಿವ ಆರ್.ವಿ. ದೇಶಪಾಂಡೆ ಮತ್ತು ರಮಾನಾಥ ರೈಯವರು ನಿಂತಿರುವ ದೃಶ್ಯವಿರುತ್ತದೆ. ಆ ಚಿತ್ರದಡಿಯಲ್ಲಿ 'ಮೇಲ್ಮನೆಯಲ್ಲಿ ಸಭಾತ್ಯಾಗ ಮಾಡುತ್ತಿರುವ ಸಚಿವರಾದ ಆರ್.ವಿ. ದೇಶಪಾಂಡೆ, ರಮಾನಾಥ ರೈ' ಎಂದಿರುತ್ತದೆ. ಬಹುಶಃ ವರದಿಗಾರರಿಗೆ ಅರಿವಿಲ್ಲದೆ ಈ ರೀತಿ ಬರೆದಿದ್ದಾರೆಂದು ಕಾಣುತ್ತದೆ. ಆಳುವ ಪಕ್ಷಗಳು ಅಥವಾ ಸರ್ಕಾರ ನಡೆಸುವ ಪಕ್ಷಗಳ ಮಂತ್ರಿಗಳು ಅಥವಾ ಹಾಲಿ ಪಕ್ಷದ ಸದಸ್ಯರು ಸಭಾ ತ್ಯಾಗ ಮಾಡುವುದಿಲ್ಲ. ಸಭಾತ್ಯಾಗ ಮಾಡುವ ಕಾಯಕವೇನಿದ್ದರೂ, ವಿರೋಧ ಪಕ್ಷದಲ್ಲಿ ಕುಳಿತಿರುವ ಸದಸ್ಯರು ಮಾತ್ರ.'
"ತಪ್ಪಾಯ್ತು ತಿದ್ಕೋತೀವಿ' ವಿಭಾಗಕ್ಕೆ ನಾನೂ ಕೂಡ ಬರೆಯುತ್ತಿದ್ದೆ. ಒಂದು ಪತ್ರಿಕೆಯೆಂದರೆ ಹಲವಾರು ಸಣ್ಣ ಸಣ್ಣ ಕಾಗುಣಿತದ ತಪ್ಪುಗಳು ಸಾಮಾನ್ಯ. ಕೇವಲ ಒಂದು ಲಗ್ನಪತ್ರಿಕೆ, ಕರೆಯೋಲೆಯಲ್ಲಿಯೇ ಅಥವಾ ಒಂದೆರಡು ಪುಟಗಳಿರುವ ಯಾವುದಾದರೂ ವಿಷಯ ಪ್ರಸ್ತಾಪವಾಗಿರುವ ಪತ್ರಿಕೆ ಅಥವಾ ಆಹ್ವಾನ ಪತ್ರಿಕೆಯಲ್ಲಿ ಪ್ರೆಸ್‌ನವರು ಮತ್ತು ಆರ್ಡರ್ ನೀಡಿದವರು ಇಬ್ಬರೂ ಕೂಡ ಪ್ರೂಫ್ ನೋಡಿರುತ್ತಾರೆ. ಆದರೆ ಪತ್ರಿಕೆ ಅಚ್ಚಾದಾಗ ಒಂದೆರಡು ತಪ್ಪುಗಳಿದ್ದೇ ಇರುತ್ತವೆ. ಅಂತಹುದ್ದರಲ್ಲಿ ಹಲವಾರು ಪುಟಗಳಿರುವ ಒಂದು ಪತ್ರಿಕೆಯಲ್ಲಿ ಕಾಗುಣಿತದ ದೋಷ ಸಾಮಾನ್ಯ.'
'ಒಂದು ವಿಷಯ ತಪ್ಪಾಗಿ ಅಚ್ಚಾಗಿದ್ದಲ್ಲಿ ಅಥವಾ ಅಭಾಸವಾಗುವಂತಹ ವಿಷಯಗಳಿದ್ದರೆ ಅಂಥಹವುಗಳನ್ನು ಎತ್ತಿ ತೋರಿಸಬೇಕು, ಅದನ್ನು ಬಿಟ್ಟು 'ನೀವು ಏನ್ ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನಲ್ಲಿ ಬರೀಬೇಡಿ' ಎಂಬ ಗೋಡೆ ಬರಹದ ಅಂಕಣದಲ್ಲಿ ಪ್ರಕಟಿಸಿರುವ ನೀವು ಕಾಗುಣಿತದ ತಪ್ಪನ್ನು ಪ್ರಕಟಿಸುವುದಿಲ್ಲವೆಂದು ತಿಳಿಸಿರಿ. ಹಾಗೆಯೇ ಒಂದು ಪತ್ರಿಕೆಯಲ್ಲಿ ವರದಿ ತಯಾರು ಮಾಡುವಾಗ ಎಲ್ಲವನ್ನೂ 'ವ್ಯಾಕರಣ' ಬದ್ಧವಾಗಿ ಬರೆಯಲು ಸಾಧ್ಯವಿಲ್ಲ.'
'ಅಷ್ಟಕ್ಕೂ ಇಂದಿನ ದಿನಗಳಲ್ಲಿ 'ವ್ಯಾಕರಣ' ಎಂದರೆ ವಿದ್ಯಾರ್ಥಿಗಳು ಅದೇನು ಎನ್ನುವ ಹಂತದಲ್ಲಿರುವ ಸಮಯದಲ್ಲಿ, ಕೊಕ್ಕಡ ವೆಂಕಟ್ರಮಣಭಟ್ಟರು ವ್ಯಾಕರಣದ ತಪ್ಪನ್ನು ಎತ್ತಿ ತೋರಿಸುತ್ತಾರೆ. ಅವರ ಈ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಆದರೆ ಈಗ 'ವ್ಯಾಕರಣ'ದ (ಶಾಲೆ ಮತ್ತು ಕಾಲೇಜುಗಳಲ್ಲಿ) ತರಗತಿಗಳೇ ಇರುವುದಿಲ್ಲ. ಅಂಥಹ ಸ್ಥಿತಿ ನಿರ್ಮಾಣವಾಗಿದೆ. ಆದರೂ ಪಾಪ ಭಟ್ಟರು ಬರೆಯುತ್ತಾರೆ. ಅದರ ಬದಲು ಸರ್ಕಾರದ ಮಟ್ಟದಲ್ಲಿ ಪಠ್ಯಗಳಲ್ಲಿ ವ್ಯಾಕರಣ ಅಳವಡಿಸುವಂತೆ ಒತ್ತಾಯಿಸಲಿ. ಅದಕ್ಕೆ ಮಾಧ್ಯಮಗಳು ಸಹಕರಿಸಲಿ' ಎಂದಿದ್ದಾರೆ.

 ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.