ಪಂಚಾಯತ್ ರಾಜ್ಗೆ ಮಾರಕ ಮಸೂದೆ
ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ-2013, ರಾಜ್ಯದ ಗ್ರಾಮ ಪಂಚಾಯತ್ಗಳ ಸಂವಿಧಾನಬದ್ಧ ಅಧಿಕಾರದ ಮೇಲೆ ಮತ್ತೊಂದು ಗದಾ ಪ್ರಹಾರ ಆಗಿದೆ. ವಿರೋಧ ಪಕ್ಷಗಳ ತೀವ್ರ ವಿರೋಧ ಹಾಗೂ ಮಾನ್ಯ ಸಭಾಪತಿಗಳ ಅಸಮಾಧಾನದ ನಡುವೆಯೂ ತರಾತುರಿಯಲ್ಲಿ ಮಸೂದೆಗೆ ಅಂಗೀಕಾರ ಪಡೆದುಕೊಳ್ಳುವುದು ಖಂಡನೀಯ. ತನ್ಮೂಲಕ, ದೇಶದಲ್ಲಿ ಭಾಗವಹಿಸುವಿಕೆಯ ಪ್ರಜಾಪ್ರಭುತ್ವಕ್ಕೆ ಬುನಾದಿಯಾಗಿರುವ ಗ್ರಾಮ ಪಂಚಾಯತ್ಗಳ ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ನಿರ್ಲಕ್ಷಿಸಿರುವುದು ಕಣ್ಣಿಗೆ ಹೊಡೆದು ಕಾಣುತ್ತದೆ.
ಸತತವಾಗಿ 2 ವಾರ್ಡ್/ಗ್ರಾಮ ಸಭೆಗಳನ್ನು ನಡೆಸದ ಗ್ರಾಮ ಪಂಚಾಯತ್ಗಳ ಚುನಾಯಿತ ಸದಸ್ಯರು ಹಾಗೂ ಅಧ್ಯಕ್ಷರನ್ನು ಅನರ್ಹಗೊಳಿಸಲು ಅಥವಾ ಅವರನ್ನು ತೆಗೆದು ಹಾಕಲು ಪ್ರಾದೇಶಿಕ ಕಮಿಷನರ್ ಅವರಿಗೆ ಅಧಿಕಾರ ನೀಡಿರುವ ಈ ಮಸೂದೆ ದೇಶದ ಸಂವಿಧಾನಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ.
ಅರ್ಥಪೂರ್ಣವಾಗಿ ಗ್ರಾಮ, ವಾರ್ಡ್ ಸಭೆಗಳನ್ನು ನಡೆಸುವುದು ಸೇರಿ, ಗ್ರಾಮ ಪಂಚಾಯತ್ಗಳಲ್ಲಿ ತಮ್ಮ ಅಧಿಕಾರ ಚಲಾಯಿಸಲು ಸಮಾಜದಲ್ಲಿ ಅವಕಾಶ ವಂಚಿತರಿಗೆ ಈಗಾಗಲೇ ಅನೇಕ ಅಡ್ಡಿ ಆತಂಕಗಳು ಇವೆ. ಪಂಚಾಯತ್ ರಾಜ್ ಕಾನೂನಿನಲ್ಲಿ ಸಹ ಗ್ರಾಮ/ವಾರ್ಡ್ ಸಭೆಗಳನ್ನು ನಡೆಸಲು ಸಾಕಷ್ಟು ಅವಕಾಶ ಇವೆ.
ಅವುಗಳು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ನ ಚುನಾಯಿತ ಪ್ರತಿನಿಧಿಗಳು ತಮ್ಮ ಜನಾಧಿಕಾರವನ್ನು ಸಮರ್ಥವಾಗಿ ಬಳಸುವ ಬಗ್ಗೆ, ತಮ್ಮ ಚುನಾಯಿತ ಸರ್ಕಾರ ಹೇಗೆ ತಮಗೆ ಉತ್ತರದಾಯಿಯನ್ನಾಗಿ ಮಾಡಬೇಕೆಂಬ ಬಗ್ಗೆ ಗ್ರಾಮ ಸಭೆಯ ಸದಸ್ಯರನ್ನು ಸಶಕ್ತರನ್ನಾಗಿಸುವ ಬಗ್ಗೆ ಆಲೋಚಿಸುವುದನ್ನು ಬಿಟ್ಟು, ತಮ್ಮ ಮೂಗಿನ ನೇರಕ್ಕೆ ನಡೆಯುವ ಅಧಿಕಾರಶಾಹಿಗೆ ನಮ್ಮ ರಾಜ್ಯ ಸರ್ಕಾರ ಮಣೆ ಹಾಕಲು ಹೊರಟಿದ್ದು ತೀರಾ ಖೇದದ ಸಂಗತಿ. ಗ್ರಾಮ ಸಭೆ/ವಾರ್ಡ್ ಸಭೆಗಳನ್ನು ನಡೆಸಲು ಆಗದಂತೆ ಕಿರುಕುಳ ಕೊಡುವ ಪಟ್ಟಭದ್ರರಿಗೆ ಕುಮ್ಮಕ್ಕು ಕೊಡುವಂತಿದೆ ಈ ಮಸೂದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮಾನ್ಯ ಗ್ರಾಮೀಣಾಭಿವೃದ್ಧಿ ಖಾತೆ ಸಚಿವರ ಹೇಳಿಕೆ, 'ಗ್ರಾಮ ಪಂಚಾಯತ್ಗಳ ಸಬಲೀಕರಣವೇ ಈ ಮಸೂದೆಯ ಗುರಿ' ಎಂಬುದು ವಿಪರ್ಯಾಸವೇ ಸರಿ. ಶಾಸನ ಸಭೆಯಲ್ಲಿ ಪಾಲ್ಗೊಳ್ಳುವ ಕುರಿತು ಚುನಾಯಿತ ಶಾಸಕರ ಬದ್ಧತೆಯ ಬಗ್ಗೆ ಚಕಾರವೆತ್ತದ ಶಾಸಕರು ಗ್ರಾಮ ಪಂಚಾಯತ್ಗಳ ಚುನಾಯಿತ ಸದಸ್ಯರ ಬದ್ಧತೆ ಬಗ್ಗೆ ಕಾಳಜಿ ತೋರುತ್ತಿರುವುದು ನಮ್ಮ ಮಧ್ಯದ ಬಹಳ ದೊಡ್ಡ ವಿಪರ್ಯಾಸವಾಗಿ ಕಾಣಿಸುತ್ತದೆ.
ಶಾಸನ ಸಭೆ ಈ ಮಸೂದೆಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು 'ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ' ಒತ್ತಾಯಿಸುತ್ತದೆ. ಈ ಮಸೂದೆಯನ್ನು ಸರ್ವಾನುಮತದಿಂದ ತಿರಸ್ಕರಿಸಬೇಕೆಂದು ವಿಧಾನಪರಿಷತ್ತಿನ ಎಲ್ಲಾ ಶಾಸಕರು, ಅದರಲ್ಲೂ ಸ್ಥಳೀಯ ಸರ್ಕಾರಗಳಿಂದ ಆಯ್ಕೆಯಾದ ಎಲ್ಲಾ 25 ವಿಧಾನಪರಿಷತ್ ಸದಸ್ಯರನ್ನು ಒತ್ತಾಯಿಸುತ್ತದೆ.
-ದಾಮೋದರ ಆಚಾರ್ಯ, ಪ್ರಧಾನ ಕಾರ್ಯದರ್ಶಿ
-ನಂದನಾ ರೆಡ್ಡಿ, ರಾಜ್ಯ ಸಂಚಾಲಕರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

