ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ಸುಘೋಷ್ ನಿಗಳೆ ಮಿಂಚಂಚೆ ಕಳುಹಿಸಿದ್ದಾರೆ. 'ಬ್ಯಾಂಕ್ ಶಿವಕುಮಾರ್ ಅವರ ಪತ್ರ(ಜೂ.13) ನೋಡಿ ಆಶ್ಚರ್ಯವಾಯಿತು. 'ಅಷ್ಟಕ್ಕೂ ಇಂದಿನ ದಿನಗಳಲ್ಲಿ ವ್ಯಾಕರಣ ಎಂದರೆ ವಿದ್ಯಾರ್ಥಿಗಳು ಅದೇನು ಎನ್ನುವ ಹಂತದಲ್ಲಿರುವ ಸಮಯದಲ್ಲಿ ಕೊಕ್ಕಡ ವೆಂಕಟ್ರಮಣ ಭಟ್ಟರು ವ್ಯಾಕರಣದ ತಪ್ಪನ್ನು ಎತ್ತಿ ತೋರಿಸುತ್ತಾರೆ' ಎಂದು ಹೇಳಿದ್ದಾರೆ. ಜತೆಗೆ ವೆಂಕಟ್ರಮಣ ಭಟ್ಟರ ಬದ್ಧತೆಯನ್ನು ಒಪ್ಪಿಕೊಳ್ಳುತ್ತಲೇ 'ಸರ್ಕಾರದ ಮಟ್ಟದಲ್ಲಿ ಪಠ್ಯಗಳಲ್ಲಿ ವ್ಯಾಕರಣ ಅಳವಡಿಸುವಂತೆ ಒತ್ತಾಯಿಸಲಿ' ಎಂದೂ ಸಲಹೆ' ನೀಡಿದ್ದಾರೆ. ವ್ಯಾಕರಣವನ್ನು ಕಲಿಯದೆ ಇರುವುದರಿಂದ ಆಗುತ್ತಿರುವ ಅನಾಹುತಗಳನ್ನು ನಾವು ನಿತ್ಯವೂ ಮಾಧ್ಯಮ, ಸಭೆ-ಸಮಾರಂಭ ಸೇರಿದಂತೆ ಹಲವು ಸಂದರ್ಭಗಳಲ್ಲಿ ನೋಡುತ್ತಿದ್ದೇವೆ. ತಪ್ಪು-ಒಪ್ಪಿಗೆಂದೇ ಜಾಗವನ್ನು ಮೀಸಲಿಟ್ಟಿರುವ ಕ.ಪ್ರ.ಕ್ಕೆ ಮೊದಲ ಅಭಿನಂದನೆ. ಒಂದಂತೂ ಸತ್ಯ, ಯಾವುದೇ ವ್ಯಾಕರಣ ಪುಸ್ತಕಕ್ಕೆ ಕಡಿಮೆಯಿಲ್ಲದಂತೆ 'ತಪ್ಪಾಯ್ತು ತಿದ್ಕೋತೀವಿ' ವಿಭಾಗ ಅತ್ಯುತ್ತಮ, ನಿಖರ, ಸ್ಪಷ್ಟ ಕನ್ನಡವನ್ನು ಕನ್ನಡಿಗರಿಗೆ ಹೇಳಿಕೊಡುತ್ತಿದೆ.'
'ಶಿವಕುಮಾರ್ ಅಭಿಪ್ರಾಯದಂತೆ ವಿದ್ಯಾರ್ಥಿಗಳು ವ್ಯಾಕರಣ ಎಂದರೇನು ಎಂದು ಕೇಳಿದರೆ ಅವರಿಗೆ ವ್ಯಾಕರಣ ಕಲಿಸುವುದನ್ನು ಬಿಟ್ಟುಬಿಡಬೇಕೆ? ವ್ಯಾಕರಣವಿಲ್ಲದೆ ಭಾಷೆಯನ್ನು ಹೇಗೆ ಕಲಿಯಲು ಸಾಧ್ಯ? 'ಸೊಳ್ಳೆಯವರು ಕಚ್ಚಿಬಿಡ್ತಾರೆ, ನಾಯಿಯವರು ಬಂದ್ರು, ವಾಕಿಂಗ್ ಮಾಡಿಸಿ, ಸುರೇಶಳ ತಂಗಿನ ಬಳಿ ನಯನಮನೋಹರವಾದ ಮಾಹಿತಿಯಿದೆ' ಎಂದೆಲ್ಲ ಮಾತನಾಡಬಹುದೆ? ಭಾಷೆಯಲ್ಲಿ ವ್ಯಾಕರಣ ಇದ್ದಷ್ಟು ಸ್ಪಷ್ಟತೆ ಹೆಚ್ಚುತ್ತದೆ. ಭಾಷೆಯ ಸೊಗಡು ವೃದ್ಧಿಸುತ್ತದೆ. ನಾಳೆ ವಿದ್ಯಾರ್ಥಿಗಳು ಶಿಸ್ತು, ಸಂಯಮ, ಜಾನಪದ, ದೇಶಭಕ್ತಿ ಎಂದರೆ ಏನು ಅಂತ ಕೇಳುತ್ತಾರೆ. ಆಗ ಇವೆಲ್ಲವನ್ನೂ ಬಿಟ್ಟುಬಿಡಲಿಕ್ಕಾಗುತ್ತದೆಯೇ? ಇನ್ನು ಸರ್ಕಾರದ ಮಟ್ಟದಲ್ಲಿ ಪಠ್ಯಗಳಲ್ಲಿ ವ್ಯಾಕರಣವನ್ನು ಅಳವಡಿಸುವಂತೆ ಒತ್ತಾಯಿಸಿ, ಸರ್ಕಾರ ಅದನ್ನು ಆಲಿಸಿ, ಪಠ್ಯದಲ್ಲಿ ಅಳವಡಿಸಿ ವಿದ್ಯಾರ್ಥಿಗಳು ವ್ಯಾಕರಣ ಕಲಿಯುವುದು ಕನಸಿನ ಮಾತೇ ಸರಿ. ನಾವು ವ್ಯಾಕರಣವನ್ನು ಸರಿಯಾಗಿ ಕಲಿತು ಬಳಸಿದರೆ, ಚಿಕ್ಕವರು ಅದನ್ನು ಸಹಜವಾಗಿಯೇ ಅನುಕರಿಸುತ್ತಾರಲ್ಲವೆ? ಏನೇ ಆದ್ರೂ, 'ತಪ್ಪಾಯ್ತು ತಿದ್ಕೋತೀವಿ' ಅಂಕಣದಿಂದ ಕನ್ನಡಿಗರ ವ್ಯಾಕರಣ ಜ್ಞಾನವಂತೂ ಹೆಚ್ಚುತ್ತಿರುವುದು ನಿಜ.' ಎಂದಿದ್ದಾರೆ.
ಬೆಂಗಳೂರಿನ ಹೇಮಂತಕುಮಾರ್ ಅವರು ಪತ್ರ ಬರೆದಿದ್ದಾರೆ. 'ಜೂ.11ರ ಸಂಚಿಕೆಯ ಪುಟ 3ರಲ್ಲಿ 'ಕೋಟ್ಯಂತರ ತೆರಿಗೆ ಬಾಕಿ: ಪ್ರತಿಷ್ಠಿತ ಬ್ಯಾಂಕ್ಗಳಿಗೆ ಬೀಗ' ಶೀರ್ಷಿಕೆಯ ಸುದ್ದಿ ಪ್ರಕಟವಾಗಿದೆ. 'ಬಿಬಿಎಂಪಿ 2013 ಜುಲೈ 22ರಂದು ನಾಲ್ಕು ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಿ 7 ದಿನಗಳ ಒಳಗಾಗಿ ಬಾಕಿ ಪಾವತಿಸಲು ಸೂಚಿಸಿತ್ತು' ಎಂದಿದೆ. ಇದು ಹೇಗೆ ಸಾಧ್ಯ? ಕೂಸು ಹುಟ್ಟುವುದಕ್ಕೆ ಮೊದಲೇ ಕುಲಾವಿ ಹೊಲಿಸಿದಂತಿದೆಯಲ್ಲ? ಜೂನ್ ತಿಂಗಳಿನಲ್ಲಿಯೇ ಜುಲೈ 22ರಂದು ನೋಟಿಸ್ ಜಾರಿ ಮಾಡಿದೆ ಎಂದಿದೆಯಲ್ಲ? ಬಹುಶಃ ಅದು ಮೇ 22ರಂದು ನೋಟಿಸ್ ಜಾರಿ ಮಾಡಿ 7 ದಿನಗಳ ಒಳಗಾಗಿ ಬಾಕಿ ಪಾವತಿಸಲು ಸೂಚಿಸಿರಬೇಕು ಎಂದಾಗಬೇಕಿತ್ತು, ಅಲ್ಲವೇ?'
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

