ಸಂಪಾದಕೀಯ

ಹೊಸ ತೆರಿಗೆ ಹೊರೆ ಇಂಗಿತ

Published On :

ವಿಧಾನಸಭೆ ಚುನಾವಣೆಯ ತರಾತುರಿಯಲ್ಲಿ ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಂಡಿಸಿದ "ಲಕ್ಷ ಕೋಟಿ ರುಪಾಯಿಗಳಿಗೂ ಅಧಿಕ ಮೊತ್ತದ ಬಜೆಟ್‌" ಗದ್ದಲ- ಗೊಂದಲಗಳ ನಡುವೆ ಚರ್ಚೆಯೇ ಇಲ್ಲದೇ ಅಂಗೀಕಾರವಾಗಿತ್ತು.
ಈಗ ರಾಜ್ಯ ಸರ್ಕಾರದ ಹಣಕಾಸು ವ್ಯವಹಾರ ನಡೆಯುತ್ತಿರುವುದು ಆ ಬಜೆಟ್‌ನ ಆಧಾರದ ಮೇಲೇ. ನೂತನ ಮುಖ್ಯಮಂತ್ರಿಯಾಗಿ, ವಿತ್ತ ಖಾತೆಯ ಜವಾಬ್ದಾರಿಯನ್ನೂ ಹೊತ್ತಿರುವ ಸಿದ್ದರಾಮಯ್ಯ ಅವರು ತಮ್ಮ ಪಕ್ಷ ನೀಡಿದ್ದ ವಚನಗಳಿಗೆ ಅನುಸಾರವಾಗಿ, ಹಾಗೂ ಇತರ ಅಭಿಪ್ರಾಯಗಳನ್ನೂ ಕ್ರೋಢೀಕರಿಸಿ ಹೊಸ ಬಜೆಟ್ಟನ್ನು ಮುಂದಿನ ತಿಂಗಳು ಮಂಡಿಸಲಿದ್ದಾರೆ. ಬಜೆಟ್ ಮಂಡನೆ ಸಿದ್ದರಾಮಯ್ಯ ಅವರಿಗೆ ಹೊಸದೇನೂ ಅಲ್ಲ. ಆ ವಿಚಾರದಲ್ಲಿ ಬೇಕಾದಷ್ಟು ಅನುಭವವಿದೆ. ಆದರೆ ಮುಖ್ಯಮಂತ್ರಿಯಾಗಿ ಮಂಡಿಸಲಿರುವ ಬಜೆಟ್‌ನಲ್ಲಿ ಯಾವ ರೀತಿಯ ವಿಶೇಷ ಕಂಡುಬರುತ್ತದೋ ಗೊತ್ತಿಲ್ಲ. ಅದೊಂದು ವಿಶೇಷ ಬಜೆಟ್ ಆಗಿರುತ್ತದೆ ಎನ್ನುವುದಂತೂ ಖಚಿತ. ಹೊಸದಾಗಿ ಕಂದಾಯ ಇಲಾಖೆಯನ್ನು ವಹಿಸಿಕೊಂಡಿರುವ ಶ್ರೀನಿವಾಸ ಪ್ರಸಾದ್ ಅವರು ಬೊಕ್ಕಸಕ್ಕೆ ಭೂ ವ್ಯವಹಾರಗಳಿಂದ ಹೆಚ್ಚು ಹಣವನ್ನು ತುಂಬಿಕೊಳ್ಳುವ ಸಲಹೆಯನ್ನು ನೀಡಿರುವುದು ಅವರ ದೃಷ್ಟಿಯಲ್ಲಿ ಸಹಜ.
ಭೂಮಿಯ ಸರ್ಕಾರದ ಬೆಲೆ (ಮಾರ್ಗದರ್ಶಿ ಸೂತ್ರ) ಹಾಗೂ ಮುದ್ರಾಂಕ ಶುಲ್ಕವನ್ನು ಏರಿಸುವ ಸಲಹೆ ಅದು. ಸದ್ಯಕ್ಕೆ ಅದು ಸಲಹೆ ಮಾತ್ರ. ಈಗಾಗಲೇ ಭೂ ವ್ಯವಹಾರದ ಮೇಲೆ ಸರ್ಕಾರ ವಿಧಿಸುತ್ತಿರುವ ಶುಲ್ಕ ವಿಪರೀತವೆನ್ನುವ ದೂರುಗಳಿವೆ. ಸಾಲದ್ದಕ್ಕೆ ಈ ವರ್ಷದಿಂದ ನೋಂದಣಿಯ ಕಾಲದಲ್ಲೇ ಕೇಂದ್ರದ ಟಿಡಿಎಸ್ ತೆರಿಗೆಯನ್ನು ಮುರಿದುಕೊಳ್ಳಬೇಕೆನ್ನುವ ಆದೇಶವೂ ಪ್ರಕಟವಾಗಿದೆ. ಇಷ್ಟೆಲ್ಲ ಆದರೂ ಭೂಮಿ ಅಥವಾ ಇತರ ಬಗೆಯ ಸ್ಥಿರಾಸ್ತಿಯನ್ನು ಮಾರುವವರು- ಕೊಳ್ಳುವವರು ದೊಡ್ಡ ಮೊತ್ತದಲ್ಲೇ ವ್ಯವಹಾರ ನಡೆಸುವುದರಿಂದ ತೆರಿಗೆಯ ಹೊರೆ ಸ್ವಲ್ಪ ಹೆಚ್ಚಾದರೂ ಅದನ್ನು ನಿಭಾಯಿಸಬಲ್ಲ ಶಕ್ತಿ ಅವರಲ್ಲಿರುತ್ತದೆ. ಆದರೆ ತೆರಿಗೆಯ ಪ್ರಮಾಣ ಹೆಚ್ಚಾದಷ್ಟೂ ಕಳ್ಳ ವ್ಯಾಪಾರವೂ ಹೆಚ್ಚಾಗುವುದು ಸಹಜ. ಈ ಪರಿಸ್ಥಿತಿಗೆ ಅವಕಾಶ ನೀಡದಂತಹ ವ್ಯವಸ್ಥೆಯನ್ನು ರೂಪಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.