ತಪ್ಪಾಯ್ಯು ತಿದ್ಕೋತೀವಿ
ಮೈಸೂರಿನ ಕೃಷ್ಣಮೂರ್ತಿಪುರಂನಿಂದ ಎಸ್.ರಾಘವೇಂದ್ರ ಅವರು ಮಿಂಚಂಚೆ ಕಳುಹಿಸಿದ್ದಾರೆ. 'ಜೂ.15ರ ಸಂಚಿಕೆಯಲ್ಲಿ ಬಿಜೆಪಿಯ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಪ್ರಕಟವಾಗಿದೆ. ಕ.ಪ್ರ ಅವರನ್ನು 'ಬಿಜೆಪಿ ವಕ್ತಾರೆ' ಎಂದು ಸಂಬೋಧಿಸಿದೆ. ಇದು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ವಿಶ್ವೇಶ್ವರ ಭಟ್ಟರು ಈ ವಿಚಾರದಲ್ಲಿ ಚರ್ಚೆಗೆ ಅನುವು ಮಾಡಿ 'ತೀರ್ಪು' ಕೊಡುವ ವಿಶ್ವಾಸ ನನ್ನದು.'
'ರಾಜಕೀಯ ಪಕ್ಷಗಳಿಗೆ 'ವಕ್ತಾರರು' ಪ್ರಮುಖರಾಗುತ್ತಾರೆ. ರಾಜಕೀಯ ಪಕ್ಷ ಮತ್ತು ಮಾಧ್ಯಮಗಳ ನಡುವಿನ ಕೊಂಡಿಯಾಗಿರುತ್ತಾರೆ. ಪಕ್ಷದಲ್ಲಿ ಆಗಿಹೋಗುವ ವಿದ್ಯಮಾನಗಳಿಗೆ ಸಮಜಾಯಿಷಿ, ಮತ್ತೊಂದು ಪಕ್ಷದ ಮೇಲೆ ಮಾಡುವ ದೋಷಾರೋಪಣೆಗಳಿಗೆ ಇವರು ಪಕ್ಷದ ಅಧಿಕೃತ ಮುಖವಾಣಿ ಎನಿಸುತ್ತಾರೆ. ಮಾಧ್ಯಮದ ಮಂದಿ ಶಾಣ್ಯರಾಗಿರುತ್ತಾದ್ದರಿಂದ ವಿವಾದಕ್ಕೆ ಎಡೆ ಮಾಡದೆ ಅವರು ಕೇಳುವ ಪ್ರಶ್ನೆಗಳಿಗೆ ಜಾಣ್ಮೆಯಿಂದ ಖಡಕ್ ಉತ್ತರ ನೀಡಬೇಕಾಗುತ್ತದೆ.'
'ಇಂತಹವರು ಗಂಡಸರಾಗಿದ್ದರೆ ಅವರನ್ನು 'ವಕ್ತಾರ' ಎಂದು ಕರೆಯಲಾಗುತ್ತೆ. 'ವಕ್ತಾರ' ಎನ್ನುವುದು ಶುದ್ಧ ಸಂಸ್ಕೃತ ಶಬ್ದ. 'ವದ ವ್ಯಕ್ತಾಯಾಂ ವಾಚಿ', 'ವದ' ಎನ್ನುವುದು ಮೂಲ ಧಾತು. 'ವಕ್ತ್ರು' ಶಬ್ದ. 'ಋ' ಕಾರಾಂತ ಪುಲ್ಲಿಂಗ ಶಬ್ದ. ವಕ್ತಾ-ವಕ್ತಾರೌ-ವಕ್ತಾರಃ. ಬಹುವಚನ ರೂಪ ವಕ್ತ್ರು, ಹೆಂಗಸಾದರೆ 'ವಕ್ತಾರ' ಶಬ್ದ 'ವಕ್ತ್ರಿ' ಆಗಬೇಕು. ಈ ಕಾರಾಂತ ಸ್ತ್ರೀ ಲಿಂಗ ಶಬ್ದ. ವಕ್ತ್ರೀ-ವಕ್ತ್ರಯೌ-ವಕ್ತ್ರ್ಯಃ. ಆದ್ದರಿಂದ ಇನ್ನು ಮುಂದೆ 'ವಕ್ತಾರೆ' ಎಂಬ ಅಶುದ್ಧ ಪದ ಬಳಕೆ ಬೇಡ. ಕ.ಪ್ರಕ್ಕೆ ಈ ಪದ 'ಆಡ್' ಎನಿಸಬಹುದು.'
'ಆದರೆ ಶುದ್ಧ ಪ್ರಯೋಗ ಎನ್ನದೆ ವಿಧಿಯಿಲ್ಲ. ಈ ಪದ ಪ್ರಯೋಗ ಇನ್ನು ಮುಂದೆ ಉಳಿದ ಪತ್ರಿಕೆಗಳಿಗೂ ಮೇಲ್ಪಂಕ್ತಿಯಾಗಲಿ' ಎಂದಿದ್ದಾರೆ.
ಮಂಡ್ಯದ ಪಾಂಡವಪುರದಿಂದ ಹರಳಹಳ್ಳಿ ಪುಟ್ಟರಾಜು ಮಿಂಚಂಚೆ ಮೂಲಕ ಕೆಲ ತಪ್ಪುಗಳನ್ನು ತಿಳಿಸಿದ್ದಾರೆ. 'ಜೂ.17ರ ಮಂಡ್ಯ ಸುದ್ದಿ ವಿಭಾಗದಲ್ಲಿ 'ಭಾಗಮಂಡಲದಲ್ಲಿ ಭಾರಿ ಮಳೆ: ಸಂಚಾರಕ್ಕೆ ತೊಂದರೆ' ಎಂಬ ಶೀರ್ಷಿಕೆಯಡಿ ಸುದ್ದಿಯೊಂದನ್ನು ಪ್ರಕಟಮಾಡಿ, ಕೆಆರ್ಎಸ್ ಗರಿಷ್ಠ ನೀರಿನ ಮಟ್ಟ 214.80 ಅಡಿ ಎಂದು ಪ್ರಕಟಿಸಿದ್ದೀರಿ. ಆದರಿದು ತಪ್ಪು ಮಾಹಿತಿ. ಏಕೆಂದರೆ ಕೆಆರ್ಎಸ್ನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ನಿಮ್ಮ ಮುದ್ರಾರಾಕ್ಷಸ ಅದನ್ನು 214.80 ಅಡಿಗೆ ಏರಿಸಿರುವುದು ಸರಿಯೇ? ಜತೆಗೆ ಒಳಹರಿವು 5837, ಹೊರಹರಿವು 917 ಅಂತ ಮಾತ್ರ ಇದೆ. ಆದರೆ ಇಲ್ಲಿ ನೀರಿನ ಹರಿವಿನ ಪ್ರಮಾಣವನ್ನು ಯಾವುದರಿಂದ ಅಳೆಯಲಾಗಿದೆ ಎಂಬುದನ್ನು ತಾವುಗಳು ನಮೂದಿಸಿಲ್ಲ. ಆ ಸಂಖ್ಯೆಗಳ ಮುಂದೆ ಕ್ಯೂಸೆಕ್ ಅಂತ ಬಳಸಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು.'
'ಅದೇ ದಿನದ ಪುಟ 5ರಲ್ಲಿ 'ಪ್ರಾಥಮಿಕ ಶಾಲಾ ಶಿಕ್ಷಕರಿಗೇ ಸೂಕ್ತ ತರಬೇತಿ ಇಲ್ಲ: ಡಾ.ಅಬೂಬಕ್ಕರ್' ಎಂಬ ಶೀರ್ಷಿಕೆ ಇದೆ. ಆದರೆ ಇಲ್ಲಿ 'ಶಿಕ್ಷಕರಿಗೇ' ಎಂಬ ಪದ ಬಳಕೆ ಬದಲು 'ಶಿಕ್ಷಕರಿಗೆ' ಎಂಬುದಾಗಿ ಬಳಸುವುದು ಹೆಚ್ಚು ಔಚಿತ್ಯವೆನಿಸುತ್ತದೆ.'
'ಮಂಡ್ಯ ಸುದ್ದಿ ವಿಭಾಗದ ಪುಟ 2ರಲ್ಲಿ ಪ್ರಕಟವಾದ 'ದೈವ ಸ್ಮರಣೆಯಿಂದ ಮನಸ್ಸಿಗೆ ನೆಮ್ಮದಿ' ಎಂಬ ಸುದ್ದಿಯಲ್ಲಿ ಮೂರ್ನಾಲ್ಕು ಕಾಗುಣಿತ ತಪ್ಪುಗಳಾಗಿವೆ. ದ್ವೇಷಅಸೂಯ (ದ್ವೇಷ ಅಸೂಯೆ), ಸೋತ್ತಿದ್ದೇನೆ (ಸೋತಿದ್ದೇನೆ), ಭಾವಕರಾಗಿ(ಭಾವುಕರಾಗಿ) ಹೀಗೆ ಹಲವು ಕಾಗುಣಿತ ತಪ್ಪುಗಳು ಮಂಡ್ಯ ಸುದ್ದಿಗಳಲ್ಲಿ ಆಗಾಗ ಅಲ್ಲಲ್ಲಿ ಕಂಡು ಬರುತ್ತದೆ' ಎಂದಿದ್ದಾರೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

