ಸಂಪಾದಕೀಯ

ಇದೊಂದು ರಾಷ್ಟ್ರೀಯ ದುರಂತ

Published On :

ಹಿಮಾಚಲದ ಪರ್ವತ ಶ್ರೇಣಿಗಳ ನಡುವಣ ಸೀಮೆಯಲ್ಲಿ ಈಗ ನಡೆದಿರುವ ದುರಂತ ಕೇವಲ ಉತ್ತರಾಖಂಡದ್ದಲ್ಲ, ಅದು ಒಂದು ರಾಷ್ಟ್ರೀಯ ದುರಂತವೇ. ಹಾಗೆಂದು ಅಧಿಕೃತವಾಗಿ ಸರ್ಕಾರವೇ ಘೋಷಿಸಿದೆ.   ನೆರೆ ಹಾವಳಿ, ಪರ್ವತಗಳ ಕುಸಿತದ ಅನಾಹುತದಲ್ಲಿ ಕೇವಲ ಆ ಭಾಗದ ಜನರರಷ್ಟೇ ಸಂತ್ರಸ್ತರಲ್ಲ. ದೇಶದ ನಾನಾ ಭಾಗಗಳಿಂದ ದೇವರ ದರ್ಶನಕ್ಕೆ ಹೋಗಿದ್ದ ಯಾತ್ರಿಗಳೂ ಸಂತ್ರಸ್ತರೇ.
ಈ ನಿಸರ್ಗದ ಮುನಿಸಿನ ಪ್ರಕೋಪದಲ್ಲಿ ಸತ್ತವರ ಸಂಖ್ಯೆ ಸಾವಿರಕ್ಕೂ ಹೆಚ್ಚಿರಬಹುದು. ಈಗಲೂ ಸುಮಾರು ಐವತ್ತು ಸಹಸ್ರಕ್ಕೂ ಹೆಚ್ಚು ಜನರು (ಯಾತ್ರಿಕರು-ಸ್ಥಳೀಯರು) ಎಲ್ಲಿದ್ದಾರೋ ಪತ್ತೆಯಾಗಿಲ್ಲ. ಉತ್ತರಾಖಂಡದ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಸಾಧ್ಯವಿರುವಷ್ಟು ಮಟ್ಟಿಗೂ ಸಂತ್ರಸ್ತರ ರಕ್ಷಣೆಗೆ ಕ್ರಮ ಕೈಗೊಂಡಿವೆ.
ನಿಜ. ಇಂತಹ ಘಟನೆಗಳು ನಡೆದಾಗಲೆಲ್ಲಾ ಅಪಘಾತ ನಿವಾರಣೆ ಸೂತ್ರಗಳ ಕೊರತೆಯ ಮಾತು ಕೇಳಿ ಬರುವುದು ಸಹಜ. ಆದರೆ ನೈಸರ್ಗಿಕ ಅಪಘಾತಗಳು ನೋಟೀಸು ಕೊಟ್ಟು ಬರುವುದಿಲ್ಲ. ಆದರೂ ಪ್ರತಿ ವರ್ಷವೂ ಅಪಘಾತಗಳನ್ನು ನಿರೀಕ್ಷಿಸಿ ತಕ್ಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆನ್ನುವ ಹಿತವಚನವನ್ನು ಪಾಲಿಸುವುದು ಕಷ್ಟ.
ಈಗ ಉತ್ತರಾಖಂಡದ ಘರ್‌ವಾಲ್ ಪ್ರದೇಶದ ಸಂತ್ರಸ್ತ-ನಿರಾಶ್ರಿತರು ತಮ್ಮ ಬದುಕನ್ನು ಹೊಸದಾಗಿ ಕಟ್ಟಿಕೊಳ್ಳಬೇಕಾಗಿದೆ. ಒಂದು ವೇಳೆ ಅಲ್ಲಿನ ನಿವಾಸಿಗಳು ಹಿಂದಕ್ಕೆ ಬಂದರೂ, ಅವರ ಮನೆಯ ಗುರ್ತೇ ಸಿಗಲಿಕ್ಕಿಲ್ಲ. ಏನೂ ಇಲ್ಲದೆ ಬರಿಗೈಲಿ ಜೀವ ಧಾರಣೆಯಾದರೂ ಹೇಗೆ ಸಾಧ್ಯ?
ಸಂತ್ರಸ್ತರಿಗೆ ಎಲ್ಲ ಬಗೆಯ ನೆರವನ್ನೂ ನೀಡುವುದು ಎಲ್ಲ ದೇಶ ವಾಸಿಗಳ ಕರ್ತವ್ಯ. ಕೇಂದ್ರ ಸರ್ಕಾರವೇನೋ ತತ್‌ಕ್ಷಣಕ್ಕೆ ಸಾವಿರ ಕೋಟಿಯ ನೆರವನ್ನು ಪ್ರಕಟಿಸಿದೆ. ಕರ್ನಾಟಕದಿಂದ ಐದು ಕೋಟಿಯೂ ಸೇರಿದಂತೆ ಅನೇಕ ರಾಜ್ಯಗಳ ನೆರವೂ ಸಿಗಬಹುದು. ವಾಣಿಜ್ಯೋದ್ಯಮ ವಲಯ ತನ್ನ ಕೊಡುಗೆಯಲ್ಲಿ ಹಿಂದೆ ಬೀಳಲಾರದು. ಈಗಾಗಲೇ ಪ್ರಧಾನಿ ಮನಮೋಹನ ಸಿಂಗ್ ಅವರು ಸಂತ್ರಸ್ತರ ಪರಿಹಾರ ನಿಧಿಗೆ ಕಾಣಿಕೆಯನ್ನು ಬೇಡಿರುವುದು ಸೂಕ್ತವಾದ ಕ್ರಮ. ಸಾಮಾನ್ಯ ಜನರೂ ಸಂತ್ರಸ್ತರ ನಿಧಿಗೆ ಕಾಣಿಕೆ ಕೊಡಲು ಸಿದ್ಧವಾಗಿಯೇ ಇದ್ದಾರೆ. ಆದರೆ ಕಾಣಿಕೆಯನ್ನು ಸಂಗ್ರಹಿಸುವ ವ್ಯವಸ್ಥೆ ವಿಶ್ವಾಸಕ್ಕೆ ಅರ್ಹವಾಗಿರಬೇಕು. ಇಂತಹ ಸಮಯದಲ್ಲಿ ರಸೀತಿ ಪುಸ್ತಕ, ನೋಟ್‌ಬುಕ್ ಹಿಡಿದು ಮನೆ ಮನೆಗೆ ಹೋಗಿ ಸಂತ್ರಸ್ತರ ನಿಧಿಗೆಂದು ಕಾಣಿಕೆಯನ್ನು ಸಂಗ್ರಹಿಸುವವರೂ ಚುರುಕಾಗುತ್ತಾರೆ. ಅದೂ ಸಹಜವಾದ ಕ್ರಿಯೆಯೇ. ನಿಧಿ ಸಂಗ್ರಹಕ್ಕೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳೇ ಸೂಕ್ತ ವ್ಯವಸ್ಥೆ ಮಾಡಬೇಕು. ಈ ಕೆಲಸ ಬೇಗ ಆಗಬೇಕು. ಹಿಂದೆ ಗುಜರಾತ್‌ನ ಬುಜ್‌ನ ಭೂಕಂಪದ ಸಮಯದಲ್ಲಿ ಕರ್ನಾಟಕದಿಂದ ಸಂಗ್ರಹವಾದ ಹಣ ಅಲ್ಲಿನ ಪರಿಹಾರ ಯೋಜನೆಗಳಲ್ಲಿ ಜವಾಬ್ದಾರಿಯುತವಾದ ಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳ ಕೈಗೆ ಸಿಕ್ಕಿದ್ದು ಹೆಚ್ಚು ಕಡಿಮೆ ಪರಿಹಾರ ಕೆಲಸ ಮುಗಿದ ಮೇಲೇ. ಅಂತಹ ಅನುಭವ ಈಗ ಮತ್ತೆ ಆಗಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.