ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ವಿ. ಹೇಮಂತಕುಮಾರ ಅವರು ಬರೆಯುತ್ತಾರೆ- 'ಜೂ.3ರ ಬೈಟುಕಾಫಿಯ ಪುಟ 2ರಲ್ಲಿ 'ಮಾಹಿತಿ. ಕಾಂ'ನಲ್ಲಿ 'ಬಾಳ'ಎಂದಿದ್ದು ಭಾರತದ ಎಲ್ಲ ರಾಜ್ಯಗಳಲ್ಲೂ ಬಾಳೆಹಣ್ಣು ಬೆಳೆಯುತ್ತಾರೆ ಎಂಬ ಲೇಖನ ಅದು ಮುಂದುವರೆದು ಕರ್ನಾಟಕ, ಕೇರಳ, ಅಸ್ಸಾಂ, ತಮಿಳುನಾಡು, ಆಂಧ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಬೆಳೆಯುತ್ತಾರೆ, ಎಂದು ಪ್ರಕಟಗೊಂಡಿದೆ. 'ಬಾಳ' 'ಬಾಳೆ' ಎಂದಿರಬೇಕಿತ್ತು.
ಭಾರತದ ಎಲ್ಲಾ ರಾಜ್ಯಗಳಲ್ಲೂ ಬಾಳೆಹಣ್ಣು ಬೆಳೆಯುತ್ತಾರೆ ಅಂದ ಮೇಲೆ ಕರ್ನಾಟಕ, ಕೇರಳ ಹೀಗೆ ಮೇಲೆ ತಿಳಿಸಿದ ಆರು ರಾಜ್ಯಗಳಲ್ಲಿ ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇತ್ತೇ?'
'ಜೂನ್ 12ರ ಸಂಚಿಕೆಯ ಪುಟ 4ರಲ್ಲಿ 'ದರೋಡೆ: ನಾಲ್ವರ ಬಂಧನ' ಶೀರ್ಷಿಕೆಯ ಸುದ್ದಿಯಲ್ಲಿ ಆನೇಕಲ್ಲು: ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ಕುಖ್ಯಾತ ದರೋಡೆ ಕೋರರನ್ನು ಜೀವದ ಹಂಗು ತೊರೆದು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. 'ಬೇಗೂರು ಠಾಣಾ ವ್ಯಾಪ್ತಿಯ ಕಾಳೇನ ಅಗ್ರಹಾರದ ನಂದೀಶ ಅ. ಗಣಿ ಎಂದಿದೆ. ಕಾಳೇನ ಅಗ್ರಹಾರ ಇರುವುದು ಬನ್ನೇರುಘಟ್ಟ ರಸ್ತೆಯಲ್ಲಿ ಈ ಕಾಳೇನ ಅಗ್ರಹಾರವು ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿದೆ. ಬೇಗೂರು ಎಲೆಕ್ಟ್ರಾನಿಕ್ಸ್ ಸಿಟಿ ಠಾಣಾ ವ್ಯಾಪ್ತಿಯಲ್ಲಿದೆ. ಬೇಗೂರಿನಲ್ಲಿ ಪೊಲೀಸ್ ಠಾಣೆ ಇರುವುದಿಲ್ಲ. 'ಹುಳಿಮಾವು ಠಾಣಾ ವ್ಯಾಪ್ತಿಯ ಕಾಳೇನ ಅಗ್ರಹಾರ' ಎಂದಿರಬೇಕಿತ್ತು.'
'ಮೇ 27ರ ಸಂಚಿಕೆಯ 2ನೇ ಪುಟದಲ್ಲಿ 'ಹೊಸಕೋಟೆಯಲ್ಲಿ ಕರಗ ಮಹೋತ್ಸವ' ಶೀರ್ಷಿಕೆಯ ಸುದ್ದಿಯಲ್ಲಿ 'ಹೊಸಕೋಟೆ ಪಟ್ಟಣದಲ್ಲಿರುವ ಧರ್ಮರಾಯಸ್ವಾಮಿ ದ್ರೌಪದಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ರಾತ್ರಿ ಒಂದು ಗಂಟೆ ಸಮಯದಲ್ಲಿ ಧರ್ಮರಾಯನ ಸ್ವಾಮಿ ದೇವಾಲಯದಿಂದ ಹೊರಗೆ ಹೂವಿನ ಕರಗ 'ಪಟ್ಟಣ'ದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ 'ಮುಂಜಾನೆ' 10 ಗಂಟೆಗೆ ದೇವಾಲಯಕ್ಕೆ ಬಂದು ಸೇರಿತ್ತು' ಎಂದು ಪ್ರಕಟವಾಗಿದೆ. ಹೊಸಕೋಟೆಯು ತಾಲೂಕು ಕೇಂದ್ರವಾಗಿದ್ದು ಪಟ್ಟಣ ಎಂದು ಕರೆಯಬಹುದೆ? ಮುಂಜಾನೆ 10 ಗಂಟೆಗೆ ಎಂಬುದಕ್ಕೆ ಬದಲಾಗಿ ಬೆಳಿಗ್ಗೆ 10 ಗಂಟೆ ಎಂಬುದೇ ಸೂಕ್ತವಲ್ಲವೆ? ಹಾಗೂ ಕರಗ ಮಹೋತ್ಸವದ ದಿನಾಂಕವೇ ಪ್ರಕಟವಾಗಿಲ್ಲವಲ್ಲ!' ಎಂದಿದ್ದಾರೆ.
ಎಲ್ಲ ರಾಜ್ಯಗಳಲ್ಲಿ ಬಾಳೆ ಬೆಳೆಯುತ್ತಾರೆ ಅಂದ ಮೇಲೆ ಮತ್ತೆ 6 ರಾಜ್ಯಗಳನ್ನು ಹೆಸರಿಸಬೇಕಾದ ಅಗತ್ಯವಿರಲಿಲ್ಲ. ಆದರೆ ಈ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ ಎಂಬುದನ್ನು ಹೇಳಲೋಸ್ಕರ ಅವುಗಳ ಹೆಸರು ಬರೆಯಲಾಗಿದೆ.
ಮುಂಜಾನೆ 10 ಗಂಟೆ ಎಂಬುದರ ಬದಲಿಗೆ ಬೆಳಗ್ಗೆ 10ಗಂಟೆಗೆ ಎಂಬುದೇ ಸರಿಯಾದ ಬಳಕೆ. ಮುಂಜಾವು, ಮುಂಜಾನೆ, ಬೆಳಗ್ಗೆ, ಮಧ್ಯಾಹ್ನ, ಸಂಜೆ, ಮುಸ್ಸಂಜೆ, ರಾತ್ರಿ ಇವುಗಳನ್ನು ಯಾವ ಸಮಯಕ್ಕೆ ಬಳಸಬೇಕು ಎಂಬ ಅರಿವು ಸುದ್ದಿ ಬರೆಯುವಾಗ ಅಗತ್ಯ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

