'ನನ್ನ ಕತೆ ಕೇಳಲೇಬೇಕು'
ಎರಡನೇ ತಲೆಮಾರಿನ ತರಂಗಾಂತರ ಗುಚ್ಛಗಳ ಹಂಚಿಕೆಯ ಪ್ರಕ್ರಿಯೆಯಲ್ಲಿ ಲಕ್ಷ ಕೋಟಿ ರುಪಾಯಿಗಳ ಅವ್ಯವಹಾರ ನಡೆದಿದೆ ಎನ್ನುವ ಆರೋಪದ ತನಿಖೆಯ ಹೊಣೆ ಹೊತ್ತ ಸಿಬಿಐ ಕೊನೆಗೂ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸುವ ಹಂತ ಮುಟ್ಟಿದೆ. ಅದು ಆಡಳಿತಾತ್ಮಕವಾದ ಕ್ರಮ.
ಈ ವಿಷಯದಲ್ಲಿ ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದು ಸರ್ಕಾರ ಸಂಯುಕ್ತ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿದೆ. ಆ ಸಮಿತಿಗೆ ಕಾಂಗ್ರೆಸ್ಸಿನ ಚಾಕೋ ಅಧ್ಯಕ್ಷರು, ತನಿಖೆ ಇನ್ನೂ ಪೂರ್ತಿಯಾಗಿಲ್ಲ. ಈ ಹಂತದಲ್ಲಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ, ಮಾಜಿ ಸಚಿವ ಎ. ರಾಜಾ ತನ್ನ ಕತೆಯನ್ನು ಸಂಸದೀಯ ಸಮಿತಿ ಕೇಳಲೇ ಬೇಕು ಎಂದು ಮನವಿ ಮಾಡಿ, ಲೋಕಸಭೆ ಸ್ಪೀಕರ್ ಮೀರಾ ಕುಮಾರ್ ಮೂಲಕ ಅಧ್ಯಕ್ಷ ಚಾಕೋ ಅವರನ್ನು ಒತ್ತಾಯಪಡಿಸಿರುವುದು ನಿಜವಾಗಲೂ ಸಂಸದೀಯ ಪೀಕಲಾಟವನ್ನೇ ಸೃಷ್ಟಿಸಿದೆ. ಸಂಯುಕ್ತ ಸಂಸದೀಯ ಸಮಿತಿಯ ಸದಸ್ಯರಲ್ಲಿ ಈ ವಿಚಾರದಲ್ಲಿ ಒಮ್ಮತವಿಲ್ಲ. ಸಹಜ ನ್ಯಾಯದ ನಿಯಮದಂತೆ, ರಾಜಾ ಅವರನ್ನು ಆರೋಪಿಯ ಸ್ಥಾನದಲ್ಲಿ ಪ್ರಕರಣದಲ್ಲಿ ನಿಲ್ಲಿಸಿರುವುದರಿಂದ ಅವರ ಮಾತನ್ನೂ ಕೇಳಬೇಕೆನ್ನುವುದು ನಿಜವಾಗಲೂ ಸಾಧುವಾದ, ನ್ಯಾಯವಾದ ಒತ್ತಾಯವೇ.
ಆದರೆ ರಾಜಾ ಅವರ ಹೇಳಿಕೆಯಲ್ಲಿ ಹೆಚ್ಚು ಕಡಿಮೆ ಎಲ್ಲ ಮಾಜಿ ಟೆಲಿಕಾಮ್ ಸಚಿವರ ಹೆಸರುಗಳೂ ಪ್ರಸ್ತಾಪವಾಗುವುದಂತೂ ಖಚಿತ. ಹಿಂದಿನ ಮಂತ್ರಿಗಳ ಸಾಲಿನಲ್ಲಿ ಪ್ರಮೋದ್ಮಹಾಜನ್, ಅರುಣ್ ಶೌರಿ ಅವರೂ ಬರುತ್ತಾರೆ. ಕೆಲವು ತಿಂಗಳ ಕಾಲ ವಾಜಪೇಯಿ ಅವರೂ ಟೆಲಿಕಾಮ್ ಇಲಾಖೆಯನ್ನು ನಿಭಾಯಿಸಿದ್ದರು. ಈಗಾಗಲೇ ಪ್ರಚಾರವಾಗಿರುವ ವರದಿಗಳಂತೆ ರಾಜಾ ಅವರ ತೋರುಬೆರಳು ಈಗಿನ ಪ್ರತಿಪಕ್ಷಗಳ ಕಡೆಗೇ ತೋರಿಸುವುದು ಸಹಜ. ಆ ಕಿರಿಕಿರಿಯನ್ನು ಅನುಭವಿಸಲು ಬಿಜೆಪಿ ನಾಯಕರು ತಯಾರಿಲ್ಲ. ಆದರೆ ಮಾಜಿ ವಿತ್ತಮಂತ್ರಿ ಸಂಯುಕ್ತ ಸಂಸದೀಯ ಸಮಿತಿಯ ಸದಸ್ಯ ಯಶವಂತ ಸಿನ್ಹಾ ಅವರು ಮಾಜಿ ಸಚಿವ ರಾಜಾ ಅವರು ಹೇಳುವುದನ್ನು ಕೇಳಬೇಕು ಎನ್ನುವ ಅಭಿಪ್ರಾಯವನ್ನು ಪ್ರಕಟಿಸಿರುವುದು ನಿಜ.
ಸಂಯುಕ್ತ ಸಂಸದೀಯ ಸಮಿತಿಯ ಕಾರ್ಯಕ್ರಮದ ಪಟ್ಟಿಯಂತೆ ಈಗ ಟೆಲಿಕಾಮ್ ಹಗರಣದ ಸಾಕ್ಷ್ಯ ಸಂಗ್ರಹದ ಕೆಲಸ ಮುಕ್ತಾಯದ ಹಂತದಲ್ಲಿದೆ. ಕೆಲವರ ಪ್ರಕಾರ ಸಂಯುಕ್ತ ಸಲಹಾ ಸಮಿತಿ ಎ. ರಾಜಾ ಅವರು ಕೈಗೊಂಡ ಕ್ರಮಗಳನ್ನು ಮಾತ್ರ ಪರಿಶೀಲಿಸಿ ತನ್ನ ವರದಿಯನ್ನು ಕೊಡುವುದಿಲ್ಲ. ಸಮಿತಿ, ಟೆಲಿಕಾಮ್ ತರಂಗ ಗುಚ್ಚಗಳ ಹಂಚಿಕೆಯ ನಿಯಮಗಳ ಉಲ್ಲಂಘನೆಯ ಪ್ರಕ್ರಿಯೆಯನ್ನಷ್ಟೇ ಪರಿಶೀಲಿಸಿರುವುದು. ಎ. ರಾಜಾ ಇದನ್ನು ಒಪ್ಪುತ್ತಿಲ್ಲ. ತಮಗೆ, ತಮ್ಮ ಕತೆಯನ್ನು ಹೇಳಲು ಅವಕಾಶ ಕೊಡದೇ ಹೋದರೆ ಸಂಸತ್ ಭವನದ ಮುಂದಿನ ಗಾಂಧಿ ಪ್ರತಿಮೆಯ ಮುಂದೆ ನಿರಶನ ಸತ್ಯಾಗ್ರಹ ಮಾಡುವ ಬೆದರಿಕೆಯನ್ನು ಹಾಕಿದ್ದಾರೆ. ಸಂಸದೀಯ ಸಮಿತಿಯೇ ಇನ್ನೊಂದು ಹಗರಣದ ಸೃಷ್ಟಿಗೆ ಕಾರಣವಾಗಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

