ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ಅಗ್ರಹಾರದಿಂದ ಭಾಗ್ಯ ನಂಜುಂಡಸ್ವಾಮಿ ಅವರು ಬರೆಯುತ್ತಾರೆ- 'ಮಾ.2ರಂದು ಪತ್ರಿಕೆಯ 2ನೇ ಪುಟದಲ್ಲಿ 'ಅವರು ಹೇಳಿದ್ದು' ವಿಭಾದಲ್ಲಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರ ಹೇಳಿಕೆಯನ್ನು ಪ್ರಕಟಿಸಿದ್ದೀರಿ. ಅದರೊಂದಿಗೆ ಒಳಮರ್ಮವನ್ನು ಪ್ರಕಟಮಾಡಿದ್ದೀರಿ. ಆದರೆ ಇದೇ ಮಾತುಗಳನ್ನು 5ನೇ ಪುಟದಲ್ಲಿ ಪುನಃ ಪ್ರಕಟಿಸಿದ್ದೀರಿ! ಅದರ ಅಗತ್ಯವಿತ್ತಾ?'
'ಅದೇ ರೀತಿಯಾಗಿ ಮಾ.1ರಂದು 'ಮಾಹಿತಿ ಪ್ರಭ'ದಲ್ಲಿ ಪರೀಕ್ಷಾ ನಡವಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಟಿಪ್ಸ್ ಕೊಡುವಾಗ ವಿದ್ಯಾರ್ಥಿಗಳಿಗೆ 'ಕಾಫಿ-ಸಿಗರೇಟ್‌ಗಳಿಂದ ದೂರವಿರಿ' ಎಂದು ಹೇಳಿದ್ದೀರಿ. ಕಾಫಿ ಓಕೆ. ಸಿಗರೇಟ್ ಯಾಕೆ? ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಿಗರೇಟು ಸೇದುವರೆಂಬ ಕಲ್ಪನೆಯೇಕೆ? ಪ್ರಸ್ತುತ ಪರೀಕ್ಷೆ ನಡೆಯುತ್ತಿರುವುದು ಎಸ್ಸೆಸ್ಸೆಲ್ಸಿಯಿಂದ ಪಿಯುಸಿವರೆಗಿನ ಮಕ್ಕಳಿಗೆ. ಈ ವಯಸ್ಸಿನಲ್ಲಿಯೇ ಸಿಗರೇಟ್ ಚಟಕ್ಕೆ ಮಾರುಹೋಗಿರಬಹುದೇ?' ಎಂದಿದ್ದಾರೆ.
ಆ ವಯಸ್ಸಿನ ಮಕ್ಕಳಿಗೆ ಸಿಗರೇಟು ನೀಡುವುದೇ ಕಾನೂನು ಪ್ರಕಾರ ಅಪರಾಧ. ಹಾಗಾಗಿ ನಾವು ಸಿಗರೇಟಿನ ಸಂಗತಿ ಬರೆಯಬಾರದಿತ್ತು. ಆದರೂ, ಎಸ್ಸೆಸ್ಸೆಲ್ಸಿ- ಪಿಯುಸಿ ವಿದ್ಯಾರ್ಥಿಗಳು ಸಿಗರೇಟು ಸೇದುವ ಸಾಕಷ್ಟು ಉದಾಹರಣೆಗಳಿವೆ. ಪ್ರೌಢಶಾಲೆ ಮಕ್ಕಳೇ ಹುಕ್ಕಾಬಾರ್‌ಗೆ ಹೋಗಿದ್ದು ನಮ್ಮದೇ ಬೆಂಗಳೂರಿನಲ್ಲಿ ಎಂಬುದನ್ನು ಮರೆಯಲು ಸಾಧ್ಯವೇ?
ಪುಟ 5ರಲ್ಲಿ ಮುರುಗೇಶ್ ನಿರಾಣಿ ಅವರ ಹೇಳಿಕೆಯನ್ನು ಸುದ್ದಿಯಾಗಿ ಪ್ರಕಟಿಸಲಾಗಿದೆ. 2ನೇ ಪುಟದಲ್ಲಿ ಪ್ರಕಟಿಸಿದ್ದು ಸುದ್ದಿಯ ಒಳಮರ್ಮ. ಕೇವಲ 'ಅವರು ಹೇಳಿದ್ದು' ವಿಭಾಗವೊಂದರಲ್ಲೇ ಅವರ ಹೇಳಿಕೆ ಪ್ರಕಟಿಸಿದರೆ ಅವರ ಸುದ್ದಿಯನ್ನು ನಾವು ಕೈಬಿಟ್ಟಂತಾಗುತ್ತದೆ. ಆದ್ದರಿಂದ ಎರಡನ್ನೂ ಪ್ರತ್ಯೇಕವಾಗಿ ಪ್ರಕಟಿಸಲಾಗಿದೆ.
ಬೆಂಗಳೂರಿನ ಶೇಷಾದ್ರಿಪುರಂನಿಂದ ರವಿಕುಮಾರ ಜಿ.ಬಿ. ಅವರು ಬರೆಯುತ್ತಾರೆ- 'ಪತ್ರಿಕೆಯ 'ದೇಶ ವಿದೇಶ' ಪುಟದಲ್ಲಿ ಮುಂಬೈ ಮತ್ತು ಬೆಂಗಳೂರು ಚಿನ್ನ ಹಾಗೂ ಬೆಳ್ಳಿಯ ಬೆಲೆಯ ಬಗ್ಗೆ ಮಾಹಿತಿ ಕೊಡುತ್ತೀರಿ. ಆದರೆ ದೂರದ ಮುಂಬೈ ಬೆಲೆ ತಪ್ಪದೇ ಪ್ರಕಟಿಸುತ್ತೀರಿ. ಹತ್ತಿರದ ಬೆಂಗಳೂರಿನ ಚಿನ್ನ, ಬೆಳ್ಳಿ ಬೆಲೆ ಇರಬೇಕಾದಲ್ಲಿ ಖಾಲಿ ಜಾಗಬಿಟ್ಟಿರುತ್ತೀರಿ ಏಕೆ? ಫೆ.26ರಂದು ಹೀಗಾಗಿದೆ ತುಂಬಾ ದಿನ ಹೀಗಾಗುವುದನ್ನು ಗಮನಿಸಿದ್ದೇನೆ' ಎಂದಿದ್ದಾರೆ.
ಎಲ್ಲ ದಿನವೂ ಹೀಗಾಗುವುದಿಲ್ಲ ಒಮ್ಮೊಮ್ಮೆ ಮಾರುಕಟ್ಟೆ ದರ ಸಿಗದೇ ಇದ್ದಲ್ಲಿ ಅಥವಾ ಪುಟ ನಿರ್ಮಿಸುವಾಗ ಬಿಟ್ಟುಹೋಗಿರಬೇಕು.
ಬೆಂಗಳೂರಿನ ಅಕ್ಷಯನಗರದಿಂದ ಡಾ.ಎಚ್.ಎಸ್. ಸುರೇಶ್ ಅವರು ಬರೆಯುತ್ತಾರೆ- 'ಫೆ.18ರ 'ಕನ್ನಡಪ್ರಭ'ದ ಮುಖಪುಟದಲ್ಲಿ 'ಒ.ಒ.ಡಿ.' ಅಂದರೆ ಆನ್ ಅಫಿಷಿಯಲ್ ಡ್ಯೂಟಿ (on official duty) ಅಂತ ಬರೆಯಲಾಗಿದೆ. ಆದರೆ ಒ.ಒ.ಡಿ. ಅಂದರೆ ಆನ್ ಅದರ್ ಡ್ಯೂಟಿ (on other duty)  ಅಂತ. ಅಂದರೆ ಅನ್ಯಕಾರ್ಯನಿಮಿತ್ತ ಕರ್ತವ್ಯ ರಜೆ ಅಂತ' ಎಂದಿದ್ದಾರೆ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.