ರಾಜ್ಯ ಬಿಜೆಪಿ ಅಧ್ಯಕ್ಷ ಪೀಠ
ಕರ್ನಾಟಕ ಪ್ರದೇಶ ಬಿಜೆಪಿ ಅಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ ಅವರು ಉಪಮುಖ್ಯಮಂತ್ರಿಯ ಸ್ಥಾನವನ್ನು ಒಪ್ಪಿಕೊಂಡ ದಿನವೇ ಸಂಘಟನೆಯಲ್ಲಿನ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರೆ, ರಾಜಕೀಯ ಮುತ್ಸದ್ದಿಯಂತೆ ವರ್ತಿಸಿದ ಕೀರ್ತಿಗೆ ಪಾತ್ರರಾಗುತ್ತಿದ್ದರು. ಹಲವು ತಿಂಗಳ ಕಾಲ ಎರಡೂ ಸ್ಥಾನಗಳಲ್ಲಿ ಅವರು ಮುಂದುವರಿದಿದ್ದರಿಂದ ಎರಡೂ ಸ್ಥಾನಗಳ ಕೆಲಸ ಮುಕ್ಕಾಗಿದೆ ಎನ್ನುವ ಟೀಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗದು. ಪ್ರದೇಶ ಬಿಜೆಪಿ ಅಧ್ಯಕ್ಷರ ಕೆಲಸ ಹಾಗೂ ಉಪಮುಖ್ಯಮಂತ್ರಿಯ ಕೆಲಸ ಪಾರ್ಟ್‌ಟೈಮ್ ಕೆಲಸ ಅಲ್ಲ. ಸರಿಯಾಗಿ ಕೆಲಸ ಮಾಡುವ ವ್ಯಕ್ತಿಗಳಿಗೆ, ಎರಡೂ ಕಡೆ ಮಾಡಿದಷ್ಟೂ ಕೆಲಸವಿರುತ್ತದೆ. ಅಲ್ಲಿ ಸಮಯವನ್ನು ಹಂಚುವುದಕ್ಕೆ ಆಗುವುದಿಲ್ಲ.
ಹೇಳಿ-ಕೇಳಿ ಬಿಜೆಪಿ ಪ್ರದೇಶ ಸಮಿತಿಯ ಅಧ್ಯಕ್ಷರ ಸ್ಥಾನ ಅಪ್ಪಟ ರಾಜಕೀಯ ಅಧಿಕಾರದ ಸ್ಥಾನ. ಸರ್ಕಾರದಲ್ಲಿ ಉಪಮುಖ್ಯಮಂತ್ರಿಯ ಸ್ಥಾನ ಸರ್ಕಾರದ ನಿಯಮಗಳ ಚೌಕಟ್ಟಿಗೆ ಒಳಪಟ್ಟ ಸ್ಥಾನ. ನಿಜ. ಅದು ಸಾಮಾನ್ಯರು ಅರ್ಥ ಮಾಡಿಕೊಂಡಿರುವಂತೆ ಉದ್ಯೋಗ ಅಥವಾ ನೌಕರಿ ಅಲ್ಲ. ಆದರೆ ಉಪಮುಖ್ಯಮಂತ್ರಿಯ ಕೆಲಸದ ಕಾಲದಲ್ಲಿ ರಾಜಕೀಯವನ್ನು ಬೆರೆಸುವುದಿಲ್ಲ ಎನ್ನುವ ಮಾತನ್ನು ಜನ ನಂಬುವುದು ಕಷ್ಟ. ಮಂತ್ರಿಗಳು ರಾಜಕೀಯದಿಂದ ದೂರವಾಗಿರುವುದು ನಿಜಕ್ಕೂ ಅಸಿಧಾರಾವೃತದ ಪಾಲನೆಯನ್ನು ಒಪ್ಪಿದಂತೆಯೇ. ರಾಜಕಾರಣಿಗಳು ರಾಜಕೀಯ ಹಾಗೂ ಸರ್ಕಾರದ ಕೆಲಸವನ್ನು ಬೇರೆ ಬೇರೆ ಎಂದು ಬಾಯಿ ಮಾತಲ್ಲಿ ಹೇಳಿದರೂ, ಸರ್ಕಾರದ ಆದೇಶಗಳನ್ನು ಗಮನಿಸಿದರೆ, ಅದು ಒಂದು ಪೊಳ್ಳು ಆದರ್ಶದ ಮಾತಷ್ಟೇ ಎನಿಸುತ್ತದೆ. ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳಿವೆ ಎನ್ನುವ ಸ್ಥಿತಿಯಲ್ಲಿ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ನೇಮಕವಾಗುವವರು ಸಮಗ್ರ ಪಕ್ಷದ ಹಿತರಕ್ಷಕರಾಗಬೇಕು. ಒಂದು ಗುಂಪಿನ ಯಜಮಾನರಂತೆ ವರ್ತಿಸುವ ಪ್ರಲೋಭನೆಗೆ ಒಳಗಾಗಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

