ತನ್ನ ಇಪ್ಪತ್ತನೇ ವಯಸ್ಸಿನಲ್ಲಿಯೇ ಪೇಶ್ವೆಯಾಗಿ ರಾಜ್ಯಭಾರ ಮಾಡಿದ ಬಾಜೀರಾಯನು ಪೇಶ್ವೆ ರಾಜರುಗಳಲ್ಲಿಯೇ ಅತ್ಯಂತ ಪ್ರಸಿದ್ಧನಾದವನು. ತನ್ನ ನಲವತ್ತು ವರ್ಷಗಳ ಆಡಳಿತದಲ್ಲಿ 41 ಮಹತ್ವವಾದ ಯುದ್ಧಗಳನ್ನು ಮಾಡಿ ಎಲ್ಲ ಯುದ್ಧಗಳಲ್ಲಿಯೂ ಜಯಗಳಿಸಿದ ಅತ್ಯಂತ ಬಲಶಾಲಿ. ಮರಾಠ ಸಾಮ್ರಾಜ್ಯವನ್ನು ಉತ್ತರದವರೆಗೂ ವಿಸ್ತರಿಸಲು ಕಾರಣನಾದ ಬಾಜೀರಾಯ ತನ್ನ ಪ್ರಜೆಗಳು ಸುಖ-ನೆಮ್ಮದಿಯಿಂದ ಜೀವಿಸಲು ಬೇಕಾದ ಎಲ್ಲ ಅನುಕೂಲತೆಗಳನ್ನೂ ಕಲ್ಪಿಸಿಕೊಟ್ಟಿದ್ದ. ತನ್ನ ರಾಜಧಾನಿಯನ್ನು ಸತಾರಾದಿಂದ ಪುಣೆಗೆ ವರ್ಗಾಯಿಸಿದನು. ಅವನ ಅವಧಿಯಲ್ಲಿ ಮೊಘಲರು, ಪೋರ್ಚುಗೀಸರು, ಹ್ಯೆದರಾಬಾದಿನ ನಿಜಾಮ ಇವರನ್ನೆಲ್ಲಾ ಹದ್ದುಬಸ್ತಿನಲ್ಲಿಟ್ಟಿದ್ದ. ಮಧ್ಯಭಾರತ ಮತ್ತು ಪಶ್ಚಿಮ ಭಾರತದ ಅನೇಕ ಭೂಭಾಗಗಳನ್ನು ಮೊಘಲರ ಕಪಿ ಮುಷ್ಠಿಯಿಂದ ಬಿಡಿಸಿದನು. ಹೀಗಾಗಿ ಅವನೊಬ್ಬ ಅರಿಭಯಂಕರನಾಗಿದ್ದನು.
1728ರಲ್ಲಿ ಬಾಜೀರಾಯನಿಗೂ ಮತ್ತು ಹೈದರಾಬಾದಿನ ನಿಜಾಮನಿಗೂ ಗೋದಾವರಿ ನದೀ ತೀರದಲ್ಲಿ ಘೋರ ಯುದ್ಧವಾಯಿತು. ಆ ಯುದ್ಧದಲ್ಲಿ ನಿಜಾಮನ ಸೈನ್ಯ ಸೋತು ದಿಕ್ಕಾಪಾಲಾಗಿ ಓಡಿಹೋಯಿತು. ಆದರೂ ಅಳಿದುಳಿದ ಸೈನ್ಯವನ್ನು ಸಂಘಟಿಸಿ ಪುನಃ ಬಾಜೀರಾಯನ ಸೈನ್ಯದ ಮೇಲೆ ದಾಳಿಮಾಡಲು ಸೂಕ್ತ ಸಮಯಕ್ಕಾಗಿ ನಿಜಾಮ ಕಾಯುತ್ತಿದ್ದ. ಅದೇ ಸಮಯಕ್ಕೆ ಮುಸಲ್ಮಾನರ ಹಬ್ಬ ಬೇರೆ ಬಂತು. ಆದರೆ ಸೈನಿಕರಿಗೆ ಆಹಾರದ ಕೊರತೆಯುಂಟಾಗಿ ಅವಶ್ಯಕ ಆಹಾರ ಒದಗಿಸಲು ಸಾಧ್ಯವಾಗದೇ ನಿಜಾಮ ಕಂಗೆಟ್ಟ. ಸೈನ್ಯದಲ್ಲಿ ಆಹಾರಕ್ಕಾಗಿ ಹಾಹಾಕಾರ ಪ್ರಾರಂಭವಾಯಿತು. ಪರಿಸ್ಥಿತಿಯ ಲಾಭ ಪಡೆದು ಬಾಜೀರಾಯ ಅವರನ್ನು ಬಗ್ಗು ಬಡಿಯಬಹುದಾಗಿತ್ತು. ಆದರೆ ಅವನು ಹಾಗೆ ಮಾಡದೆ ಮಾನವೀಯತೆ ಪ್ರದರ್ಶಿಸಿದ. ಅದೇ ಸಮಯಕ್ಕೆ ನಿಜಾಮನ ದೂತನೊಬ್ಬ ಬಾಜೀರಾಯನ ಬಳಿ ಬಂದು ತಮ್ಮ ಸೈನ್ಯ ಆಹಾರದ ಕೊರತೆಯಿಂದ ಕಂಗೆಟ್ಟಿರುವುದಾಗಿಯೂ, ಅದಕ್ಕಾಗಿ ಸಹಾಯ ಯಾಚಿಸಲು ಬಂದಿರುವುದಾಗಿಯೂ ತಿಳಿಸಿದ. ಬಾಜೀರಾಯನ ಸೈನ್ಯಾಧಿಕಾರಿಗಳು ಇದೇ ಸುಸಮಯವೆಂದೂ, ನಿಜಾಮನನ್ನು ಸಂಪೂರ್ಣ ಸೋಲಿಸಲು ಸದಾವಕಾಶ ದೊರೆತಿರುವುದಾಗಿಯೂ, ಅವರಿಗೆ ಸಹಾಯ ಮಾಡಬಾರದಾಗಿ ಸಲಹೆ ನೀಡಿದರು. ಆದರೆ ಬಾಜೀರಾಯ ಮಾನವೀಯ ಮೌಲ್ಯಗಳನ್ನು ಗೌರವಿಸುವ ವ್ಯಕ್ತಿಯಾಗಿದ್ದ. ಅವನು ಕೂಡಲೇ ಐದುಸಾವಿರ ಎತ್ತುಗಳ ಮೇಲೆ ಆಹಾರಧಾನ್ಯವನ್ನು ನಿಜಾಮನಿಗೆ ಕಳುಹಿಸಿದ. ನಿಜಾಮನು ಆಪತ್ಕಾಲದಲ್ಲಿ ಸಹಾಯ ಮಾಡಿದ ಬಾಜೀರಾಯನಿಗೆ ಕೃತಜ್ಞತೆ ಅರ್ಪಿಸಿ, ಯುದ್ಧವನ್ನು ನಿಲ್ಲಿಸಿ ವಾಪಸ್ಸು ಹೈದರಾಬಾದಿಗೆ ಮರಳಿದ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ