ಸಂಪಾದಕೀಯ

ಪ್ರಧಾನಿ ಭಾಷಣ: ಏನಿವರ ಕೊಡುಗೆ?

Published On :

ನಾಡಿನ ಜನರನ್ನುದ್ದೇಶಿಸಿ ಅರ್ಥವಾಗದ ಭಾಷೆಯಲ್ಲಿ, ಭಾಷಾಂತರಿಸುವ ವ್ಯವಸ್ಥೆಯೂ ಇರದ ಭಾಷಣದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಕುಡಿಯುವ ನೀರಿನ ಪೂರೈಕೆ, ವಿದ್ಯುತ್ ಪೂರೈಕೆ, ನರ್ಮ್ ಯೋಜನೆಯ ಜಾರಿ, ಕೇಂದ್ರದ ಯೋಜನೆಗಳ ಸರಿಯಾದ ಅನುಷ್ಠಾನ ಇತ್ಯಾದಿಗಳ ಬಗ್ಗೆ ರಾಜ್ಯದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಗಾಗಲೇ ರಾಜ್ಯದ ಜನರಿಗೆ ಬಿಜೆಪಿ ನಾಡಿನ ಜನರ ಹಿತ ಕಾಯಲಾರದ ಪಕ್ಷವೆಂದು ಮನವರಿಕೆಯಾಗಿದೆ. ಬಿಜೆಪಿ ಈ ಎಲ್ಲಾ ವಿಷಯಗಳಲ್ಲೂ ನಾಡಿಗೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎನ್ನುವುದು ದಿಟವೇ. ಆದರೆ ಕೇಂದ್ರದ ಆಳ್ವಿಕೆಯ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಇದೇ ವಿಷಯಗಳ ಸುತ್ತ ಕರ್ನಾಟಕಕ್ಕೆ ತನ್ನ ಕೊಡುಗೆ ಏನು ಎನ್ನುವುದರ ಬಗ್ಗೆ ಮೊದಲು ತನ್ನನ್ನು ತಾನು ಪ್ರಶ್ನಿಸಿಕೊಳ್ಳಬೇಕಿದೆ. ಕಾವೇರಿ ವಿಷಯದಲ್ಲಿ ನಾಡಿಗೆ ಘೋರ ಅನ್ಯಾಯವೆಸಗಿ ಕುಡಿಯುವ ನೀರಿನ ಬಗ್ಗೆ ಮಾತನಾಡುತ್ತಿದೆ.
ವಿದ್ಯುತ್ ಪೂರೈಕೆ ಬಗ್ಗೆ ಭಾಷಣ ಬಿಗಿಯುವ ಪ್ರಧಾನಿ, ಕೇಂದ್ರದಿಂದ ಕರ್ನಾಟಕಕ್ಕೆ ಸಿಗುತ್ತಿರುವ ವಿದ್ಯುತ್ ಇಡೀ ದೇಶದಲ್ಲೇ ಇತರ ರಾಜ್ಯಗಳಿಗೆ ಹೋಲಿಸಿದರೆ ಅತೀ ಕಡಿಮೆ ಎಂಬ ವಿಷಯವನ್ನೇಕೆ ಮುಚ್ಚಿಟ್ಟರು? ಇನ್ನು ನರ್ಮ್ ಯೋಜನೆಯಡಿಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಎಂದಿನಂತೆ ಇತರ ರಾಜ್ಯಗಳಿಗೆ ಹೋಲಿಸಿದರೆ ಅತಿ ಕಡಿಮೆ ಹಣ ಸಿಗುತ್ತಿದೆ. ಕೇಂದ್ರದಿಂದ ಅನುದಾನ ಬಿಡುಗಡೆಯಲ್ಲೂ ಇದೇ ರೀತಿಯ ತಾರತಮ್ಯ, ಅನ್ಯಾಯ. ಹೀಗೆ ಎಲ್ಲದರಲ್ಲೂ ನಾಡಿಗೆ ಅನ್ಯಾಯವೆಸಗಿರುವ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನ ಮಂತ್ರಿಗಳು ನಾಡಿನ ಜನರನ್ನುದ್ದೇಶಿಸಿ ಈ ಸಮಸ್ಯೆಗಳ ಬಗ್ಗೆ ಮಾತನಾಡುವ ನೈತಿಕತೆ ಹೊಂದಿದ್ದಾರೆಯೆ?  ಒಟ್ಟಾರೆಯಾಗಿ ಈ ಎರಡೂ ಪಕ್ಷಗಳು ನಾಡಿನ ಹಿತ ಕಾಯಲಾರವು ಎಂಬುದನ್ನು ಪದೇ-ಪದೆ ಸಾಬೀತುಪಡಿಸುತ್ತಿವೆ.
- ಮಲ್ಲೇಶ ಬೆಳವಾಡಿ, ಬೆಂಗಳೂರು
ಇದೆಂಥ ಪಟ್ಟ?
ರಾಜ್ಯ ವಿಧಾನಸಭೆ ಚುನಾವಣೆ ಪ್ರಯುಕ್ತ ರಾಷ್ಟ್ರೀಯ ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದ ಕೆಲವೆಡೆ ಪ್ರಚಾರ ಭಾಷಣ ಮಾಡಿರುವುದು ಸರಿಯಷ್ಟೆ. ಅದನ್ನು ಉಲ್ಲೇಖಿಸುತ್ತ ಕೆಲವು ವರದಿಗಳಲ್ಲಿ 'ಯುವರಾಜ ರಾಹುಲ್‌ಗಾಂಧಿ' ಎಂಬ ಧಾಟಿಯ ಪದಪ್ರಯೋಗಗಳಾಗಿವೆ. ಹೇಳಿಕೇಳಿ ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬದ ದಿನವಿದ್ದಂತೆ. ಈ ಸಂದರ್ಭದಲ್ಲಿ ಯಾರಿಗೇ ಆದರೂ ರಾಜ-ಯುವರಾಜ ಎಂದೆಲ್ಲ ಕರೆಯುವುದು ಕುಚೋದ್ಯ ಎನ್ನಿಸದೇ? ಸ್ವತಃ ರಾಹುಲ್ ಗಾಂಧಿ ಅವರೇನೂ ತಮ್ಮನ್ನು ಯುವರಾಜ ಎಂದು ಘೋಷಿಸಿಕೊಂಡಂತೆ ಇಲ್ಲ. ಅಭಿಮಾನ- ನಾಯಕತ್ವ ವರ್ಣನೆಗಳ ಭರದಲ್ಲಿ ಇಂಥ ವಿರೋಧಾಭಾಸಗಳಿಗೆ ಎಳಸುವುದು ಬೇಡ ಅಲ್ಲವೇ?
- ಕೆ. ಎಂ. ಪ್ರೀತೇಶ್, ಮೈಸೂರು

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.