ಕಳ್ಳ ಆಸ್ತಿ ಮುಟ್ಟುಗೋಲು
ಸಂಸತ್ತಿನಲ್ಲಿ ಈಗ ಲೋಕಪಾಲ ವಿಧೇಯಕವೇ ನೆನೆಗುದಿಗೆ ಬಿದ್ದಿದೆ. ಸರ್ಕಾರದ ವಕ್ತಾರರು ಈಚಿನ ದಿನಗಳಲ್ಲಿ ಆ ವಿಧೇಯಕದ ಪ್ರಸ್ತಾಪವನ್ನೇ ಮರೆತುಬಿಟ್ಟಂತೆ ಕಾಣುತ್ತದೆ. ಆದರೂ ಕೇಂದ್ರ ಸರ್ಕಾರ ಭ್ರಷ್ಟಾಚಾರದ ವಿರುದ್ಧದ ಕ್ರಮಗಳಲ್ಲಿ ಆಸಕ್ತಿಯನ್ನು ಉಳಿಸಿಕೊಂಡಿರುವುದನ್ನು ಪ್ರದರ್ಶಿಸಲೆಂದೇ ಬುಧವಾರ, ಸಚಿವ ಸಂಪುಟ ಭ್ರಷ್ಟಾಚಾರದ ತಡೆಗೆ ಸಂಬಂಧಿಸಿದ ಕಾಯಿದೆಗೆ ಕೆಲವು ಪ್ರಮುಖ ಬದಲಾವಣೆಗಳನ್ನು ಒಪ್ಪಿಕೊಂಡಿದೆ. ನಿರೀಕ್ಷಿಸಿದಂತೆ ಆ ಬದಲಾವಣೆಗಳಿಗೆ ಪ್ರಚಾರವೂ ಸಿಕ್ಕಿದೆ.
ಸಚಿವ ಸಂಪುಟ ಒಪ್ಪಿಕೊಂಡಿರುವ ಬದಲಾವಣೆಗಳಲ್ಲಿ ಅತಿ ಪ್ರಮುಖವಾದದ್ದು, ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದ ಮೂಲಕ ಕಳ್ಳ ಹಣವನ್ನು ಗಳಿಸಿದ್ದು ರುಜುವಾತಾದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ನ್ಯಾಯಾಲಯಗಳಿಗೆ ಕೊಟ್ಟಿರುವುದು. ಸಚಿವ ಸಂಪುಟದ ಪ್ರಕಾರ, ನಿವೃತ್ತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆಯಂತೆ ಕ್ರಮ ಕೈಗೊಳ್ಳುವ ಮುನ್ನ ಸಂಬಂಧಪಟ್ಟ ಇಲಾಖೆ ಸರ್ಕಾರದ ಅನುಮತಿಯನ್ನು ಪಡೆದಿರಬೇಕು. ಈಗ ಇಂತಹ ರಕ್ಷಣೆ ಸೇವೆಯಲ್ಲಿರುವ ಅಧಿಕಾರಿಗಳಿಗೆ ಇದೆ.
ಆದರೆ ಸೇವೆಯಲ್ಲಿರುವ ಅಥವಾ ನಿವೃತ್ತರಾದ ಅಧಿಕಾರಿಗಳ ವಿರುದ್ಧ ಮೊಕದ್ದಮೆ ಹೂಡಲು ಅನುಮತಿಯನ್ನು ನೀಡುವ ಅಥವಾ ನಿರಾಕರಿಸುವುದಕ್ಕೆ ಒಂದು ನಿರ್ದಿಷ್ಟವಾದ ಗಡವನ್ನು ನಿಗದಿಪಡಿಸಲಾಗುವುದು. ಅನುಮತಿ ನೀಡುವುದಕ್ಕೆ ಅಥವಾ ನಿರಾಕರಿಸುವುದಕ್ಕೆ ಸಂಬಂಧಪಟ್ಟ ಅಧಿಕಾರಿ ಸೂಕ್ತ ಕಾರಣಗಳನ್ನು ಕೊಡಲೇಬೇಕು.
ಇದುವರೆಗೂ ಇಂತಹ ಅವಧಿಯ ಚೌಕಟ್ಟು ಇಲ್ಲದೇ ಇರುವುದರಿಂದ ರಾಜಕೀಯ ಒತ್ತಡ ಅಥವಾ ಇತರ ಕಾರಣಗಳಿಂದ ಈ ಪ್ರಕ್ರಿಯೆಯಲ್ಲೇ ವಿಳಂಬವಾಗಿ ಅನೇಕ ಮೊಕದ್ದಮೆಗಳು ನಿರರ್ಥಕವಾಗುತ್ತಿದ್ದವು.
"ಲಂಚ" ಎನ್ನುವ ಪದಕ್ಕೆ ಅಂತಾರಾಷ್ಟ್ರೀಯ ಕಾಯಿದೆ ಪಂಡಿತರು ಸಿದ್ಧಪಡಿಸಿರುವ ರೀತಿಯ ಅರ್ಥವಿವರಣೆಯನ್ನು ನೀಡುವುದೂ ಬುಧವಾರದ ನಿರ್ಧಾರದ ಒಂದು ಪ್ರಮುಖ ಅಂಶ. ಇದುವರೆಗೆ ಲಂಚ ಪಡೆದವರು ಹಾಗೂ ಕೊಟ್ಟವರು ಮಾತ್ರ ಶಿಕ್ಷೆಗೆ ಅರ್ಹರಾಗಿದ್ದರು. ಇನ್ನು ಮುಂದೆ, ಅಂದರೆ ಈಗಿನ ಬದಲಾವಣೆಗಳು ಕಾಯಿದೆಯಲ್ಲಿ ಸೇರಿಕೊಂಡ ಅನಂತರ, ಮಧ್ಯವರ್ತಿಗಳು, ಏಜಂಟರು ಎಲ್ಲರೂ ಕಾಯಿದೆಯ ವ್ಯಾಪ್ತಿಯಲ್ಲಿ ಬರುತ್ತಾರೆ.
ಇಂತಹ ಬದಲಾವಣೆಗಳನ್ನು ದಶಕಗಳ ಹಿಂದೆಯೇ ಆಡಳಿತ ಸುಧಾರಣೆ ಆಯೋಗದ ವರದಿಗಳಲ್ಲಿ ಪ್ರಸ್ತಾಪಿಸಲಾಗಿತ್ತು. ಅದನ್ನು ತಡೆಯಲು ಆಸಕ್ತ ಹಿತಗಳು ಇದುವರೆಗೂ ಸಮರ್ಥವಾಗಿ ಕೆಲಸ ಮಾಡಿದ್ದವು. ಕೊನೆಗೂ ಬದಲಾವಣೆಗೆ ಕಾಲ ಬಂದಿದೆ. ಸಂಸತ್ತಿನಲ್ಲಿ ಈಗಾಗಲೇ ಬೇಕಾದಷ್ಟು ವಿಧೇಯಕಗಳು ಪರಿಶೀಲನೆಗಾಗಿ ಕಾಯುತ್ತಿವೆ. ನಿಜ. ಸಂಸತ್ತು ಮನಸ್ಸು ಮಾಡಿದರೆ ಆಧ್ಯತೆಯ ಆಧಾರದ ಮೇಲೆ ಹೊಸ ವಿಧೇಯಕಗಳನ್ನು ಮೊದಲು ಪರಿಶೀಲಿಸಬಹುದು. ಆದರೆ ಸಂಸತ್ತಿನ ಕಾರ್ಯಕಲಾಪ ಈಗ ನಡೆಯುತ್ತಿರುವ ರೀತಿ- ನೀತಿಯನ್ನು ಗಮನಿಸಿದರೆ, ಅಲ್ಲಿ ಯಾವುದೇ ಶಾಸನ ರಚನೆಯ ಕೆಲಸ ನಡೆಯುವಂತಿಲ್ಲ ಎಂದೇ ಭಾಸವಾಗುತ್ತಿದೆ.
ಇನ್ನು ಈಗಿನ ಅಧಿವೇಶನದಲ್ಲಿ ಸಂಸತ್ತಿನ ಕಾರ್ಯಕಲಾಪಕ್ಕೆ ಉಳಿದಿರುವುದು ಇನ್ನು ಏಳೇ ಏಳು ದಿನ. ಒಂದು ತಿಂಗಳ ಅವಧಿಯಲ್ಲಿ ಅನಿವಾರ್ಯವಾದ ಬಜೆಟ್ ಅಂಗೀಕಾರದ ವಿಧಿಗಳನ್ನು ಬಿಟ್ಟರೆ ಸಂಸತ್ತು ಬೇರೆ ಯಾವ ಕೆಲಸವನ್ನು ಮಾಡಿಲ್ಲ. ಆದ್ದರಿಂದ ಸಚಿವ ಸಂಪುಟ ಈಗ ಯಾವ ನಿರ್ಧಾರವನ್ನು ಕೈಗೊಂಡರೂ ಅದರ ಮೌಲ್ಯ ಇರುವುದು ಅದಕ್ಕೆ ಸಿಗುವ ಪ್ರಚಾರದಲ್ಲಿ ಅಷ್ಟೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

