ಇವರಿಗೆ ಶಿಕ್ಷೆಯೇಕಿಲ್ಲ?
ಸುಪ್ರಿಂಕೋರ್ಟ್ನ ಮೇಲ್ವಿಚಾರಣೆಯಲ್ಲಿ ಸಿಬಿಐನ ವಿಶೇಷ ತನಿಖೆಯಾಗಿದೆ. ಕಲ್ಲಿದ್ದಲು ಹಗರಣದಲ್ಲಿ ಸರ್ಕಾರವೇ ಆರೋಪಿ ಸ್ಥಾನದಲ್ಲಿದೆ. ಪ್ರಧಾನಿಯವರು ಮೂರು ವರ್ಷಗಳ ಕಾಲ ಕಲ್ಲಿದ್ದಲು ಖಾತೆಯನ್ನೂ ನಿರ್ವಹಿಸಿದ್ದರು. ತನಿಖೆಯು ಆ ಸಮಯದಲ್ಲಾದ ವಿದ್ಯಮಾನಗಳನ್ನೂ ಅದು ಪರೀಕ್ಷಿಸುತ್ತಿದೆ. ಹಗರಣ ನ್ಯಾಯಾಲಯದಲ್ಲಿದೆ. ಆರೋಪ ಹೊತ್ತ ಸಚಿವಾಲಯ (ಸರ್ಕಾರ)ವೇ ವಿವಾದದಲ್ಲಿ ಸಿಲುಕಿರುವಾಗ ತನಿಖೆಯ ಹೊಣೆ ಹೊತ್ತ ಸಿಬಿಐನ ನಡೆಗಳಲ್ಲಿ ಮತ್ತು ಅದು ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ವರದಿಗಳ ವಿಷಯದಲ್ಲಿ ಸರ್ಕಾರ (ಅರ್ಥಾತ್, ಆರೋಪಕ್ಕೆ ಈಡಾದ ವ್ಯವಸ್ಥೆ) ಅಂತಹ ವರದಿಗಳನ್ನು ಅವಲೋಕಿಸುವ ಅಧಿಕಾರ ಹೊಂದಿದೆಯೆಂಬ ನಿಲುವು ಸಮರ್ಥನೀಯವಾಗಿಲ್ಲ.
ನ್ಯಾಯಾಲಯದ ಆದೇಶದ ಅಡಿಯಲ್ಲಿ ತನ್ನ ಕರ್ತವ್ಯ ನಿರ್ವಹಿಸಬೇಕಾದ ಸಿಬಿಐ, ತಾನು ಸರ್ಕಾರದ ಅಂಗ ಸಂಸ್ಥೆಯಾಗಿದ್ದರೂ, ತನ್ನ ವರದಿಯನ್ನು ಸರ್ಕಾರದ ಗಮನಕ್ಕೆ ತರಲೇಬೇಕಾದ ಅನಿವಾರ್ಯತೆ ತನಗಿರುವುದಿಲ್ಲ ಎಂಬ ನಿಲುವು ತಾಳಬೇಕಿತ್ತು. ಅಲ್ಲದೆ, ನ್ಯಾಯಾಲಯ ಈ ದಿಸೆಯಲ್ಲಿ ಸ್ಪಷ್ಟವಾಗಿ ಸಿಬಿಐಗೆ ತಿಳಿಸಿತ್ತು: ಸರ್ಕಾರದ ಯಾವುದೇ ವಿಭಾಗಕ್ಕೂ ಸಿಬಿಐ ಈ ವಿಷಯದಲ್ಲಿ ಉತ್ತರದಾಯಿತ್ವ ಹೊಂದಿಲ್ಲ ಎಂದು. ಹಗರಣದ ವಿವರಗಳು ಈಗ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರಚಾರವಾಗಿವೆ. ಯಾರು ಯಾರು ಬೆಲೆ ತೆತ್ತಬೇಕೋ ಏನೋ. 2ಜಿ ಹಗರಣದಲ್ಲಿ ಡಿಎಂಕೆ ಪಕ್ಷದ ಮಂತ್ರಿಗಳ ರಾಜಿನಾಮೆ ಪಡೆದ ಸರ್ಕಾರ, ಕಲ್ಲಿದ್ದಲು ಹಗರಣದಲ್ಲಿ ತನ್ನ ಪಕ್ಷದ ಮಂತ್ರಿಗಳಿಗೆ ಏಕೆ ರಕ್ಷಣೆ ಕೊಡುವುದು?
-ಸಾಮಗ ದತ್ತಾತ್ರಿ, ಬೆಂಗಳೂರು
ಭ್ರಷ್ಟರಿಗೆ ಕಡಿವಾಣ ಬೀಳಲಿ
ಇತ್ತೀಚಿನ ದಿನಗಳಲ್ಲಿ ಸರ್ಕಾರದ, ಕಾನೂನು ಇಲಾಖೆಯ ನಿಯಮಗಳನ್ನೂ ಮೀರಿ ನಿಯಮಬಾಹಿರವಾಗಿ, ಅಕ್ರಮವಾಗಿ ಆಸ್ತಿ ಸಂಪಾದಿಸಿ ಆದಾಯ ತೆರಿಗೆ ಇಲಾಖೆಗೆ ವಂಚಿಸಿ, ವಿದೇಶಿ ಬ್ಯಾಂಕುಗಳಲ್ಲಿ ಸಂಗ್ರಹಿಸಿಟ್ಟು ಕೋಟ್ಯಾಧಿಪತಿಗಳಾಗುವ ಉದ್ಯಮಿಗಳು, ರಾಜಕಾರಣಿಗಳು ಸರ್ಕಾರದ ಖಜಾನೆಯನ್ನು ಲೂಟಿ ಮಾಡಿ ಜನತೆಯ ಮೇಲೆ ಹೊರೆ ಹೊರಿಸುತ್ತಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ನಿಯಮಗಳನ್ನು ಲೀಲಾಜಾಲವಾಗಿ ಭೇದಿಸುವ ಇವರಿಗೆ ನ್ಯಾಯಾಲಯಗಳ ಭಯವೇ ಇಲ್ಲದಂತಾಗಿದೆ. ಖಂಡಿತವಾಗಿಯೂ ಇಂತಹವುಗಳ ಬಗ್ಗೆ ಕಡಿವಾಣ ಬೀಳಬೇಕು. ಒಮ್ಮೆ ತಪಾಸಣೆ ವೇಳೆ ಅಥವಾ ತನಿಖೆ ವೇಳೆ ಸಿಕ್ಕಿಕೊಳ್ಳುವ ಅಭ್ಯರ್ಥಿ ಇಂತಿಷ್ಟು ವರ್ಷ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ಜಾರಿ ಮಾಡಬೇಕು. ಲೋಕಾಯುಕ್ತರಿಂದ ತನಿಖೆ ಮಾಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಇಂಥವರಿಗೆ ಒಳಗೊಳಗೆ ಸಹಾಯ ಮಾಡುವ ಸರ್ಕಾರಿ ನೌಕರ, ಅಧಿಕಾರಿಗಳನ್ನು ವಜಾ ಮಾಡಬೇಕು. ಇವು ಇಂದು ತುರ್ತಾಗಿ ಆಗಬೇಕಾಗಿದೆ.
-ಕೋರಾ ವಿಜಯಕುಮಾರ್, ತುಮಕೂರು
ನೆಪವಾಗದಿರಲಿ ಈ ನ್ಯಾಯ!
ಅಪರಾಧಿ ಸಲ್ಲಿಸಿದ ಕ್ಷಮಾದಾನದ ಅರ್ಜಿ ಕ್ರಮಕೈಗೊಳ್ಳುವುದರಲ್ಲಿ ವಿಳಂಬವಾದ ಕಾರಣ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ರದ್ದು ಮಾಡಿ ಅದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿರುವ ಸಂಗತಿ ನಿಜಕ್ಕೂ ಶಾಕಿಂಗ್.
ವಿಳಂಬವಾಯಿತು ಎಂಬ ಕಾರಣಕ್ಕೆ ಗಲ್ಲು ಶಿಕ್ಷೆಯನ್ನೇ ರದ್ದು ಮಾಡಿರುವುದು ವಿಷಾದಕರ. ಮುಂದೆ ಇದು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ವಿಧಾನವಾಗದಂತೆ ಎಚ್ಚರ ವಹಿಸಲು ಸುಪ್ರೀಂ ಕೋರ್ಟ್ ಸಕಾಲದಲ್ಲಿ ತೀರ್ಮಾನ ಕೈಗೊಳ್ಳದ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮಕ್ಕಾಗಿ ನಿರ್ದೇಶಿಸಬೇಕು.
ನಿಧಾನ ಮಾಡುವಲ್ಲಿ ರಾಜಕೀಯ ಹಸ್ತಕ್ಷೇಪವನ್ನೂ ತಳ್ಳಿ ಹಾಕುವಂತಿಲ್ಲ. ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಯೇ ನಗೆಪಾಟಲಿಗೀಡಾಗಿಬಿಡುತ್ತದೆ. ವರ್ಷಾನುಗಟ್ಟಲೇ ವಾದವಿವಾದ ನಡೆದು ಹೊರಬಿದ್ದ ತೀರ್ಪು ವ್ಯರ್ಥವಾಗಿ 'ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ' ಎನ್ನುವಂತಾಗಿ ಗಲ್ಲು ಶಿಕ್ಷೆಯೇ ಒಂದು ತಮಾಷೆ ಆಗಿಬಿಡುವ ಸಂಭವ ಇದೆ. ಆದ್ದರಿಂದ ಈ ಕೇಸಲ್ಲೇ ನಿಧಾನ ಮಾಡುವಲ್ಲಿ ಕೇಂದ್ರದ ಅಥವಾ ರಾಷ್ಟ್ರಪತಿ ಕಚೇರಿಯೇ ಇರಲಿ. ವಿಚಾರ ನಡೆದು ಶಿಕ್ಷೆ ಆಗಬೇಕು.
-ಸತ್ಯಬೋಧ, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

