ಸಂಪಾದಕೀಯ

ಮೊದಲ ಹೆಜ್ಜೆಗಳೇ ನಿರ್ಣಾಯಕ

Published On :

ಸಿದ್ದರಾಮಯ್ಯನವರು ಈಗ ರಾಜ್ಯದ ಮುಖ್ಯಮಂತ್ರಿ. ಇವರು ಯಾವುದೇ ಕಳಂಕಲೇಪಿತರಲ್ಲ. ಇವರು ಮತ್ತು ಸಂಪುಟದಲ್ಲಿನ ಇತರರು ಒಂದಾಗಿ ರಾಜ್ಯದ ಅಭಿವೃದ್ಧಿಗಾಗಿ ಕಾರ್ಯಕ್ಷಮತೆ, ಪಾರದರ್ಶಕತೆ, ಮುಖ್ಯವಾಗಿ ಪ್ರಾಮಾಣಿಕತೆ ಮತ್ತು ಕಳಕಳಿಗಳಿಂದ ಪಕ್ಷಪಾತರಹಿತ ಆಡಳಿತವನ್ನು ನೀಡಬೇಕೆಂಬುದು ಜನತೆಯ ನಿರೀಕ್ಷೆ, ಹಾರೈಕೆ. ಸಿದ್ದರಾಮಯ್ಯನವರು ಪ್ರತಿನಿಧಿಸುವ ಪಕ್ಷಕ್ಕೆ ರಾಜಕೀಯದಲ್ಲಿ ಅಂಥ ಒಳ್ಳೆಯ ಹೆಸರಿಲ್ಲ. ಇದಕ್ಕೆ ಪ್ರಮುಖ ಕಾರಣ ಕೇಂದ್ರದಲ್ಲಿ ಕಾಂಗ್ರೆಸ್‌ನ ನೇತೃತ್ವದಲ್ಲಿರುವ ಸರ್ಕಾರದ ನಡವಳಿಕೆಗಳು ಮತ್ತು ವಿಶೇಷವಾಗಿ ಪ್ರಧಾನಿಯ ನಿಷ್ಕ್ರಿಯತೆ ಹಾಗೂ ಸದಾ ಮೌನವಾಗಿರುವ ಧೋರಣೆಗಳು. ಇಂಥ ಅಪಕೀರ್ತಿಯ ಕರಿನೆರಳು ರಾಜ್ಯ ಸರ್ಕಾರದ ಮೇಲೆ ಹಾಯದಂತೆ ನೋಡಿಕೊಳ್ಳಬೇಕಾಗಿದೆ. ಕರ್ನಾಟಕದ ಜನತೆ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಆಡಳಿತಕ್ಕೆಡೆ ಮಾಡಿಕೊಟ್ಟಿದ್ದಾರೆ. ದಕ್ಷ ಪ್ರಾಮಾಣಿಕ ಶುದ್ಧ ಬದುಕಿನ ವ್ಯಕ್ತಿಗಳನ್ನೇ ಆಯ್ಕೆ ಮಾಡಿ ಸಚಿವ ಸಂಪುಟ ರಚಿಸುವ ಹೊಣೆಗಾರಿಕೆ ಸಿದ್ದರಾಮಯ್ಯನವರ ಮೇಲಿದೆ. ಈ ಮೂಲಕ ತಮ್ಮ ಪಕ್ಷಕ್ಕೆ ವರ್ಚಸ್ಸು ತಂದು ಕೊಡುವ ಹೊಣೆಯೂ ಅವರದು. ಬೇರೆ ಯಾವ ಪಕ್ಷದ ಹಂಗಿಗೂ ಲಗಾಮಿಗೂ ಸಿಕ್ಕದಂಥ ಸನ್ನಿವೇಶವನ್ನು ಜನತೆ ಕಲ್ಪಿಸಿಕೊಟ್ಟಿದೆ. ಸಿದ್ದರಾಮಯ್ಯನವರು ಹೊರ ನೋಟಕ್ಕೆ ಸಿಡುಕು-ಸೆಡವುಗಳ ವ್ಯಕ್ತಿ. ಕಳಂಕಿತರಲ್ಲ ಎನ್ನುವ ಖ್ಯಾತಿ ಇವರ ಬೆಂಗಾವಲಿಗಿದೆ. ಇದು ಧನಾತ್ಮಕ ಅಂಶ. ಸಾರ್ವಜನಿಕ ಕ್ಷೇತ್ರದಲ್ಲಿ ವ್ಯವಹರಿಸುವಾಗ ನಾಯಕನಾದವನಿಗೆ (ಸಾತ್ವಿಕ) ಸಿಡುಕು-ಒರಟುತನಗಳು ಅವಗುಣವೆನಿಸುವುದಿಲ್ಲ. ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟ ಇವರನ್ನು ವಿರೋಧಿಸುವವರಿಗೂ, ವಿರುದ್ಧ ಮತ ಕೊಟ್ಟವರಿಗೂ ಮುಖ್ಯಮಂತ್ರಿ, ಮತ್ತಿತರ ಮಂತ್ರಿಗಳೇ ಆಗಿರುತ್ತಾರೆ. ಮಂತ್ರಿ ಮಂಡಲದ ಆದ್ಯತೆಗಳು ಹಲವಾರು. ಹಿಂದಿನ ಆಡಳಿತದ ಹುಳುಕುಗಳನ್ನೆತ್ತಿ ತೋರಿಸುವ ಜಾಣ್ಮೆ, ಛಲ ಅನವಶ್ಯಕ. ಭ್ರಷ್ಟರು, ತಮ್ಮ ಪಕ್ಷದವರೇ ಆದರೂ, ಶೀಘ್ರವಾಗಿ ಶಿಕ್ಷೆಗೊಳಗಾಗುವಂಥ ವ್ಯವಸ್ಥೆಯ ಜರೂರು ಈಗಿದೆ. ಭ್ರಷ್ಟ ಅಧಿಕಾರಿಗಳು ಕೂಡಲೇ ಅಮಾನತ್ತಾಗಬೇಕು. ಪ್ರಣಾಳಿಕೆಯಲ್ಲಿನ ಕಾರ್ಯಸಾಧ್ಯವಾದ ಭರವಸೆಗಳು ಅಲ್ಲೇ ಉಳಿಯಬಾರದು. ಬೆಂಗಳೂರು ಇನ್ನು ವಿಸ್ತರಣೆಯಾಗಬಾರದು. ನಗರದ ಸುತ್ತಮುತ್ತ ಹತ್ತಾರು ಸಾವಿರ ಎಕರೆ ಪ್ರದೇಶ ಪ್ರಭಾವಿಗಳ್ಳರ ಕೈವಶವಾಗಿರುವ ಬಗ್ಗೆ ಅಧಿಕೃತ ವರದಿಗಳಿರುವುದರಿಂದ ಇವನ್ನು ವಶಪಡಿಸಿಕೊಳ್ಳಲು ದಿಟ್ಟ ಕಾರ್ಯಕ್ರಮಗಳು ಅಗತ್ಯ. ಬಿಬಿಎಂಪಿಯನ್ನು ನಿದ್ರಾವಸ್ಥೆಯಿಂದ ಮುಕ್ತಗೊಳಿಸಬೇಕು. ಗ್ರಾಮಾಂತರ ಪ್ರದೇಶಗಳ ಆದ್ಯತೆಗಳು: ಕುಡಿಯುವ ನೀರು, ವೈದ್ಯಕೀಯ ವ್ಯವಸ್ಥೆ, ಸೂರಿಲ್ಲದವರಿಗೊಂದು ಸೂರು, ಶಿಕ್ಷಣ ವ್ಯವಸ್ಥೆ. ವಿಪಕ್ಷದ ನಾಯಕರಾಗಿ ಅದಕ್ಷತೆ, ಅಪ್ರಾಮಾಣಿಕತೆ, ಭ್ರಷ್ಟತೆಗಳ ವಿರುದ್ಧ ಹರಿಹಾಯ್ದಿದ್ದ ಸಿದ್ದರಾಮಯ್ಯನವರು ಈ ಅನಿಷ್ಟಗಳನ್ನು ತೊಡೆದು ಹಾಕುವಲ್ಲಿ ಏನು ದಿಟ್ಟತನ ಮೆರೆಯುತ್ತಾರೆನ್ನುವುದನ್ನು ಜನತೆ ನೋಡಲಿದೆ. ಮೊದಲ ಆರು ತಿಂಗಳಲ್ಲಿ ಇವರ ಆಡಳಿತದ ಮೊದಲ ಹೆಜ್ಜೆಗಳು ನಿರ್ಣಾಯಕ. ಜನತೆ ಒಳ್ಳೆಯದನ್ನು ಹಾರೈಸುತ್ತಿದೆ. ಅರ್ಹತೆಗಳಿಸುವುದು ಇವರ ಕೈಲಿದೆ!
- ಸಾಮಗ ದತ್ತಾತ್ರಿ, ಬೆಂಗಳೂರು.

ಕಾಕತಾಳೀಯ

ಏಕೋ ಏನೋ ಕೆ.ಪಿ.ಸಿ.ಸಿ.ಯ ಅಧ್ಯಕ್ಷರಾದವರು ಬಹಳ ಜನ ತಮ್ಮ ಕ್ಷೇತ್ರವನ್ನು ಕಡೆಗಣಿಸುತ್ತಾರೋ ಏನೋ ಅವರು ಕೆ.ಪಿ.ಸಿ.ಸಿ. ಅಧ್ಯಕ್ಷರಾದ ವರ್ಷ ಬರುವ ಚುನಾವಣೆಯಲ್ಲಿ ಸೋಲುತ್ತಾರೆ. ಕಳೆದ ಸಲದ ಚುನಾವಣೆಯಲ್ಲಿ ಬಿಜೆಪಿಯು ಬಹುಮತ ಗಳಿಸಿದಾಗ ಆಗಿನ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿದ್ದ ಆರ್.ವಿ. ದೇಶಪಾಂಡೆಯವರು ಸೋತಿದ್ದರು. ಈಗ ಡಾ. ಜಿ. ಪರಮೇಶ್ವರ ಸೋತಿದ್ದಾರೆ. ಈ ಸಲ ಕೆ.ಪಿ.ಸಿ.ಸಿ. ಮಾಜಿ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಗೆದ್ದಿದ್ದು ಜನಾರ್ದನ ಪೂಜಾರಿಯವರು ಒಂದು ಸಲ ಸೋತಿದ್ದನ್ನು ಸ್ಮರಿಸಬಹುದು. ಡಾ. ಜಿ. ಪರಮೇಶ್ವರರರು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ಕಾರ್ಯದಲ್ಲಿ ತೊಡಗಿ ತಾನು ನನ್ನ ಕ್ಷೇತ್ರವನ್ನು ಕಡೆಗಣಿಸಿರುವುದರಿಂದ ಹೀಗಾಯಿತೆಂದು ಸ್ಪಷ್ಟೀಕರಣ ನೀಡಿದ್ದಾರೆ. ಇದೊಂದು ಕಾಕತಾಳೀಯ ಸಂಗತಿಯಲ್ಲವೇ?!
- ಹನುಮಂತ ಮ. ದೇಶಕುಲಕರ್ಣಿ, ಭೋಗೇನಾಗರಕೊಪ್ಪ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.