ವರ್ಗಾವಣೆ ನೀತಿ ಬದಲಾಗಲಿ
ರಾಜ್ಯದಲ್ಲಿ ಕಾಂಗ್ರೆಸ್‌ನ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿ ರೂಪಿಸುವ ಪ್ರಕ್ರಿಯೆಗೆ ಶೀಘ್ರ ಚಾಲನೆ ಮಾಡಲಾಗುವುದೆಂಬ ವರದಿ ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿದೆಯಷ್ಟೆ. ಹಣ ಮತ್ತು ಪ್ರಭಾವವಿಲ್ಲದಿರುವ ಆದರೆ ನಿಯತ್ತಿನಿಂದ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಲ್ಲಿ ಎಂದಿನಂತೆ ತಳಮಳ ಉಂಟಾಗಿದೆ. ಏಕೆಂದರೆ ನಿಯತ್ತಿನಿಂದ ದುಡಿಯುವವನು ಪ್ರಭಾವ ಮತ್ತು ಹಣ ಚೆಲ್ಲುವ ತಮ್ಮ ಸಹದ್ಯೋಗಿಗಳಿಗೆ ಪೈಪೋಟಿ ನಡೆಸುವಷ್ಟು ಚೈತನ್ಯ ಹೊಂದಿರುವುದಿಲ್ಲ. ತಮಗಿಂತ ಹೆಚ್ಚು ಸುದೀರ್ಘ ಕಾಲ ನಿರಂತರವಾಗಿ ಬೆಂಗಳೂರಿನಲ್ಲೇ ಠಿಕಾಣಿ ಹೂಡಿರುವ ಪ್ರಭಾವಿ ನೌಕರರನ್ನು ಬಿಟ್ಟು ಪ್ರಭಾವ ಹೊಂದಿರದ ತಮ್ಮನ್ನೇ ಸರ್ಕಾರಿ ಅಧಿಕಾರಿಗಳು ಮತ್ತು ಪುಡಾರಿಗಳು ಎತ್ತಂಗಡಿ ಮಾಡಿಸುವ ದುರುಳ ಕಾರ್ಯಗಳು ಹಿಂದಿನ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಮತ್ತು ಇದೇ ರೀತಿಯ ಪ್ರಕ್ರಿಯೆ ಈ ವರ್ಷವೂ ನಡೆಯುತ್ತದೆ ಎಂಬ ಭೀತಿ ಇವರನ್ನು ಕಾಡತೊಡಗಿದೆ. ಒಟ್ಟಾರೆ ಇಂತಹ ವರ್ಗಾವಣೆ ದುರ್ನೀತಿಗಳಿಂದ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ನೊಂದು ಕೆಲಸ ಮಾಡುತ್ತಿರುವ ನೌಕರರು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತಾ ಬಂದಿರುತ್ತಾರೆ. ಪರಿಣಾಮವಾಗಿ ಇವರು ಜನಸಾಮಾನ್ಯರ ಕಷ್ಟಗಳಿಗೆ ಸೂಕ್ತವಾಗಿ ಸ್ಪಂದಿಸಲು ಸಹಜವಾಗಿ ಆಗದೆ ಜನರು ಬವಣೆ ಪಡುತ್ತಿದ್ದಾರೆ ಎಂದರೆ ಉತ್ಪ್ರೇಕ್ಷೆಯಲ್ಲ.
ಸಿದ್ದರಾಮಯ್ಯನವರು ಅಧಿಕಾರ ಗದ್ದುಗೆಗೆ ಬರುತ್ತಲೇ ಒಂದು ಉತ್ತಮವಾದ ಭ್ರಷ್ಟಾಚಾರರಹಿತ ಆಡಳಿತವನ್ನು ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಅವರಿಗೆ ನಿಜವಾಗಿ ಕಳಕಳಿಯಿದ್ದರೆ ಈ ಬಾರಿಯ ಸಾಮಾನ್ಯ ವರ್ಗಾವಣಾ ನೀತಿಯಲ್ಲಿ ಬೆಂಗಳೂರಿನಲ್ಲಿ ನಿರಂತರವಾಗಿ ಹತ್ತು ವರ್ಷಗಳಿಂದ ಬೇರು ಬಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕೆಂಬ ನೀತಿಯನ್ನು ರೂಪಿಸಿ ಅದನ್ನು ಜಾರಿಗೆ ತರಲಿ. ಇದರಿಂದ ಸರ್ಕಾರಿ ನೌಕರರೆಲ್ಲ ತಮ್ಮ ಕೆಲಸಗಳನ್ನು ಭೀತಿಯಿಲ್ಲದೆ ಮಾಡಿಕೊಂಡು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂಬುದರಲ್ಲಿ ಸಂಶಯವೇ ಇರುವುದಿಲ್ಲ.
-ಎಂ. ಹನುಮೇಶ್, ಬೆಂಗಳೂರು
ಸಚಿವರ ಅನುಭವದಲ್ಲಿ ಭರವಸೆ ಇಡೋಣವೇ?
ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುಂಚೆ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಂತೆ ಭ್ರಷ್ಟರಿಗೆ ಮಣೆಹಾಕದ ಮಾದರಿಯಲ್ಲಿಯೇ ಸಚಿವ ಸ್ಥಾನ ನೀಡಿರುವುದು ಸಂತಸದ ಸಂಗತಿ. ಆದರೆ ಸಚಿವ ಸ್ಥಾನ ನೀಡಿರುವ ವೈಖರಿ ಮಾತ್ರ ಸರಿಯಿಲ್ಲ. ಹೈಕಮಾಂಡ್ ಆದೇಶದಂತೆ ಸಚಿವ ಸ್ಥಾನ ಪಡೆದಿರುವ ಸಚಿವರಲ್ಲಿ ಕೆಲವರು ಕನಿಷ್ಟ ವಿದ್ಯಾರ್ಹತೆ ಪಡೆದಿದ್ದರೆ, ಮತ್ತೆ ಕೆಲವರಿಗೆ ವಿದ್ಯಾರ್ಹತೆಗೆ ತಕ್ಕ ಸಚಿವ ಸ್ಥಾನವನ್ನು ನೀಡದೆ ಇರುವುದು ಖೇದಕರ. ಸಮಾಜ ಕಲ್ಯಾಣ ಸಚಿವರು ಓದಿರೋದು ಪಿಯುಸಿ, ಕ್ರೀಡೆಯ ಗಂಧ-ಗಾಳಿಯನ್ನೂ ಅರಿಯದವರು ಕ್ರೀಡಾ ಮತ್ತು ಜವಳಿ ಖಾತೆ ಸಚಿವರು. ಓದಿದ್ದು ಆಟೋಮೊಬೈಲ್ ಡಿಪ್ಲೊಮೊ, ಅದರೆ ಸಿಕ್ಕಿರುವ ಸಚಿವ ಸ್ಥಾನ ಮೀನುಗಾರಿಕೆ ಮತ್ತು ಬಂದರು ಖಾತೆ.
ಎಲೆಕ್ಟ್ರಾನಿಕ್ ಮತ್ತು ಟೆಲಿ ಕಮ್ಯೂನಿಕೇಷನ್ ಎಂಜಿನಿಯರಿಂಗ್ ಪದವೀಧರರಿಗೆ ತಾಂತ್ರಿಕ ಶಿಕ್ಷಣ, ಐಟಿ-ಬಿಟಿಯಂತ ಖಾತೆ ನೀಡಿದ್ದರೆ ನಿಭಾಯಿಸುವ ಸಾಮರ್ಥ್ಯವಿರುತ್ತದೆ. ಇಂತವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ. ಬಿ.ಕಾಂ ಪದವೀಧರರಿಗೆ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ, ಕಾನೂನು ವ್ಯಾಸಂಗ ಮಾಡಿ ವಕೀಲಿ ವೃತ್ತಿ ನಿರತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ... ಕನಿಷ್ಟ ಪಕ್ಷ ಆ ಇಲಾಖೆಯ ಬಗ್ಗೆ ತಿಳಿದಿದ್ದರೆ ಆ ಸಚಿವ ಸ್ಥಾನವನ್ನ ನೀಡಿದ್ದರೆ ತಪ್ಪಿಲ್ಲ. ಆ ಬಗ್ಗೆ ತಿಳಿಯದೇ ಇರದವರು ಸಚಿವರಾದರೆ ರಾಜ್ಯ ಹೇಗೆ ತಾನೇ ಉನ್ನತಿ ಸಾಧಿಸಲು ಸಾಧ್ಯ? ಕನಿಷ್ಟ ಪಕ್ಷ ಈಗಾಗಲೇ ಇಂತಹ ಸಚಿವರು ಈ ಹಿಂದೆ ನಿರ್ವಹಿಸಿರುವ ಖಾತೆಯನ್ನಾದರೂ ನೀಡಿದ್ದರೆ ಇನ್ನೂ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದರೇನೋ. ಅನುಭವದ ಮೇಲೆ, ಹಿರಿತನದ ಮೇಲೆ ಸಚಿವರಾಗಿರುವವರು ಚೆನ್ನಾಗಿ ಕೆಲಸ ಮಾಡಿ ಅಭಿವೃದ್ಧಿ ಪಥದಲ್ಲಿ ರಾಜ್ಯವನ್ನು ಕೊಂಡೊಯ್ಯಲಿ ಎಂಬುದೇ ನಮ್ಮ ಹಾರೈಕೆ.
-ವಸಂತ ಬಿ ಈಶ್ವರಗೆರೆ, ಹಿರಿಯೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

