ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ವಿಜಯನಗರದಿಂದ ಸುಧೀಂದ್ರ ಅವರು ಬರೆಯುತ್ತಾರೆ- 'ನಿಮ್ಮ ಪತ್ರಿಕೆಯಲ್ಲಿ ಏ.25ರಂದು ನೀವು ಬರೆದಿರುವ ಲೋಕಸತ್ತಾ ಪಕ್ಷದ ಉದ್ದೇಶ ಅತ್ಯುತ್ತಮವಾಗಿದೆ. ನೀವು ಅದರ ಬಗ್ಗೆ ಬರೆದಾಗ ಲೋಕಸತ್ತಾಎಂಬುದರ ಅರ್ಥ ಬರೆದಿಲ್ಲ. ಆದ್ದರಿಂದ ಅದರ ಅರ್ಥ ತಿಳಿಸಿರಿ' ಎಂದಿದ್ದಾರೆ.
ಹಿಂದಿಯಲ್ಲಿ 'ಸತ್ತಾ' ಅಂದರೆ ಅಧಿಕಾರ, ಸರ್ಕಾರ, ಗದ್ದುಗೆ ಎಂಬ ಅರ್ಥವಿದೆ. ಹೀಗಾಗಿ ಲೋಕಸತ್ತಾ ಅಂದರೆ ಜನತೆಯ ಅಧಿಕಾರ, ಜನರ ಸರ್ಕಾರ ಎಂಬರ್ಥವಿದೆ.
ಹುಬ್ಬಳ್ಳಿಯಿಂದ ಇಳಿಮನೆ ಸುಭಾಶ್ಚಂದ್ರ ಹೆಗಡೆ ಅವರು ಬರೆಯುತ್ತಾರೆ-'ಮೇ 15ರಂದು 'ಬೈಟು ಕಾಫಿ' ಪುರವಣಿಯಲ್ಲಿ (ಪುಟ 2) 'ಮಾಹಿತಿ.ಕಾಮ್' ಅಂಕಣದಲ್ಲಿ ಮೆದುಳಿನ ಬಗ್ಗೆ ಬರೆಯುತ್ತಾ, 'ಮೆದುಳಿಲ್ಲದ ಜೀವಿಗಳನ್ನು ಇನ್ವರ್ಟಿಬ್ರೇಟ್ಸ್ ಎಂದೂ...' ಮುಂತಾಗಿ ಬರೆದಿದ್ದೀರಿ. ಆದರೆ ಈ ಶಬ್ದ (vertebrate/invertebrate) ಬೆನ್ನುಮೂಳೆ ಇರುವ / ಇಲ್ಲದಿರುವ ಜೀವಿಗಳು ಎಂಬ ಅರ್ಥ ಕೊಡುತ್ತದೆ. ನನ್ನ ತಿಳುವಳಿಕೆ ತಪ್ಪೇ ಅಥವಾ ನೀವು ಬರೆದಿರುವುದು ತಪ್ಪೇ? ಎಂದು ಪ್ರಶ್ನಿಸಿದ್ದಾರೆ.
ಇಳಿಮನೆ ಸುಭಾಶ್ಚಂದ್ರ ಹೆಗಡೆ ಅವರ ತಿಳುವಳಿಕೆ ಖಂಡಿತ ಸರಿಯಾಗಿದೆ. ನಮ್ಮಲ್ಲಿ ಬರೆದಿದ್ದೇ ತಪ್ಪಾಗಿದೆ. ಬೆನ್ನುಮೂಳೆ ಹೊಂದಿರುವ ಪ್ರಾಣಿಗಳಿಗಿಂತ ಬೆನ್ನುಮೂಳೆ ಹೊಂದಿರದ ಪ್ರಾಣಿಗಳ ಮೆದುಳು ಹೆಚ್ಚು ಸಂಕೀರ್ಣವಾಗಿರುತ್ತದೆಎಂದು ಹೇಳಬೇಕಿತ್ತು. ಜಾಗದ ಕೊರತೆ ಇರುವ ಕಾರಣ ಅದನ್ನು ಚಿಕ್ಕದು ಮಾಡಲು ಹೋಗಿ ಈ ರೀತಿಯ ಎಡವಟ್ಟಾಗಿದೆ. ಇಂಗ್ಲಿಷ್ನ ವರ್ಟಿಬ್ರೇಟ್ಸ್ ಮತ್ತು ಇನ್ವರ್ಟಿಬ್ರೇಟ್ಸ್ ಎಂಬುದಕ್ಕೆ ಕನ್ನಡದಲ್ಲಿ ಶೇರುಕ-ಅಕಶೇರುಕ ಎಂಬ ಪದಗಳಿವೆ.
ಬೆಂಗಳೂರಿನ ರಾಜಾಜಿನಗರದಿಂದ ನಾಗರಾಜ ಎಂ.ವಿ. ಅವರು ಬರೆಯುತ್ತಾರೆ- 'ಶೀರ್ಷಿಕೆಗಳಲ್ಲಿ ಭಾಷೆಯ ಕಟ್ಟುಪಾಡುಗಳನ್ನು ಕಟ್ಟುನಿಟ್ಟಾಗಿ ಬಳಸಲಾಗುವುದಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ. ಈ ಬಗ್ಗೆ ಇದೇ ಅಂಕಣದಲ್ಲಿ ಹಲವು ಬಾರಿ ನೀವು ಬರೆದಿದ್ದನ್ನು ನಾನು ಓದಿದ್ದೇನೆ.'
'ಆದರೆ ಇದೇ ಕಾರಣ ಇಟ್ಟುಕೊಂಡು ಮೇ 22ರಂದು 6ನೇ ಪುಟದ ಮೇಲ್ಭಾಗದಲ್ಲಿ ಪ್ರಕಟವಾದ ಶೀರ್ಷಿಕೆಯನ್ನು ಒಪ್ಪಿಕೊಳ್ಳಲು ನನ್ನ ಮನಸ್ಸು ಸಿದ್ಧವಿಲ್ಲ. ಕೃಷಿಗೆಂದು ನಿರ್ಮಿಸಲಾಗಿದ್ದ ಹೊಂಡಕ್ಕೆ ಬಿದ್ದ ಆನೆಗಳನ್ನು ಅರಣ್ಯ ಅಧಿಕಾರಿಗಳು ಪಾರು ಮಾಡಿದರು ಎಂಬ ಸುದ್ದಿಗೆ ನೀವು 'ಕೃಷಿ ಹೊಂಡದಲ್ಲಿ ಸಿಲುಕಿ ಪರದಾಡಿದ ಆನೆಗಳು; ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ' ಶೀರ್ಷಿಕೆ ನೀಡಿದ್ದೀರಿ.'
'ಇಲ್ಲಿ ರಕ್ಷಿಸಿದ್ದು ಆನೆಗಳನ್ನು. ರಕ್ಷಿಸಿದವರು ಅರಣ್ಯ ಇಲಾಖೆ ಸಿಬ್ಬಂದಿ. ಆದರೆ ನಿಮ್ಮ ಪತ್ರಿಕೆಯ ಶೀರ್ಷಿಕೆ ಓದಿದರೆ ಆನೆಗಳು ಕೃಷಿ ಹೊಂಡದಲ್ಲಿ ಸಿಲುಕಿ ಪರದಾಡಿದರೆ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಏಕೆ ರಕ್ಷಿಸಬೇಕು? ಎಂಬ ಅನುಮಾನ ಮೂಡುತ್ತದೆ. ಆದ್ದರಿಂದ 'ಕೃಷಿ ಹೊಂಡದಲ್ಲಿ ಸಿಲುಕಿ ಪರದಾಡಿದ ಆನೆಗಳು; ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ' ಎಂದಾಗಬೇಕಿತ್ತು ಅಲ್ಲವೇ?' ಎಂದಿದ್ದಾರೆ.
ನಾಗರಾಜ ಎಂ.ವಿ. ಅವರು ಹೇಳಿದಂತೆ ಶೀರ್ಷಿಕೆಯಲ್ಲಿ ತಪ್ಪಾಗಿದ್ದು ನಿಜ. ಆದರೆ ಅವರು ಹೇಳಿದಂತೆ ಶೀರ್ಷಿಕೆಗೆ 'ಯಿಂದ' ಸೇರಿಸುವ ಬದಲು, 'ಕೃಷಿ ಹೊಂಡದಲ್ಲಿ ಸಿಲುಕಿದ್ದ ಆನೆಗಳನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ' ಎಂದು ನೀಡಬಹುದಿತ್ತು. ಜಾಗ ಸಾಲುವುದಿಲ್ಲ ಎಂದಾದರೆ 'ಕೃಷಿ ಹೊಂಡದಲ್ಲಿ ಸಿಲುಕಿದ್ದ ಆನೆಗಳ ರಕ್ಷಣೆ', 'ಆನೆಗಳನ್ನು ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ' ಎಂದಷ್ಟೇ ಶೀರ್ಷಿಕೆ ನೀಡಬಹುದಿತ್ತು.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

