ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಬೆಂಗಳೂರಿನ ಜೆ.ಪಿ.ನಗರದಿಂದ ಶಂಕರನಾರಾಯಣ ಭಟ್ ಅವರು ಬರೆಯುತ್ತಾರೆ- 'ಮೇ 23ರಂದು ಪುಟ 2ರಲ್ಲಿ 'ತಾಳಿ ಬದಲು ಕೇಬಲ್...' ಶೀರ್ಷಿಕೆ ಸುದ್ದಿಯ 3ನೇ ಪ್ಯಾರಾ 9ನೇ ಸಾಲಿನಲ್ಲಿ 'ಸ್ನೇಹಿತೆ ಮೀರಾಳೊಂದಿಗೆ ಭಾವಿ ಪತ್ನಿ ನಂದನ ಗೌಡ' ಅಂತಿದೆ. ಅದು 'ಭಾವಿ ಪತಿ' ಎಂದಿರಬೇಕಿತ್ತು. ಕೊನೆಯ ಪ್ಯಾರಾದಲ್ಲಿ 'ಈ ಮಾತನ್ನು ಕೇಳದ ಈಗ ಕೊಲೆಯಾಗಿದ್ದಾಳೆ' ಎಂಬುದರ ಬದಲು 'ಕೇಳದೇ' ಎಂದಾಗಬೇಕಿತ್ತು.'
'ಪುಟ 3ರಲ್ಲಿ 'ಬೋಗಸ್ ಕಾಮಗಾರಿಗೆ ಬ್ರೇಕ್‌' ಶೀರ್ಷಿಕೆಯ ವರದಿಯೊಂದರಲ್ಲೇ ಸಾಕಷ್ಟು ತಪ್ಪುಗಳು ಕಾಣಿಸಿಕೊಂಡಿವೆ. ಮೊದಲನೆಯ ಪ್ಯಾರಾದಲ್ಲಿ 'ಬೋಗಸ್ ಕಾಮಗಾರಿಗಳು ಕಾಟ ಶುರುವಾಗಿದೆ' ಎಂಬಲ್ಲಿ 'ಕಾಮಗಾರಿಗಳ ಕಾಟ ಶುರುವಾಗಿದೆ' ಆಗಬೇಕಿತ್ತು. 2ನೇ ಪ್ಯಾರಾದಲ್ಲಿ 'ಬಜೆಟ್ ಅನುದಾನಲ್ಲಿ' ಬದಲಿಗೆ 'ಅನುದಾನದಲ್ಲಿ' ಎಂದಾಬೇಕಿತ್ತು. 3ನೇ ಪ್ಯಾರಾದಲ್ಲಿ 'ಆಯುಕ್ತ ಸಿದ್ದಯ್ಯ ಬಿಬಿಎಂಪಿ ಬರುತ್ತಿದ್ದಂತೆ' ಅಂತ ಬರೆಯಲಾಗಿದೆ. ಹಾಗೆಂದರೇನು?'
'4ನೇ ಪ್ಯಾರಾದಲ್ಲಿ 'ಅನುದಾನದಲ್ಲಿ 22,000ಕ್ಕೂ ಹೆಚ್ಚು ಕಾಮಗಾರಿಗಳಲ್ಲಿ' ಅಂತ ಬರೆಯಲಾಗಿದೆ. ಈ ಸಂಖ್ಯೆ ನಿಜವೋ? ಕೊನೆಯ ಪ್ಯಾರಾದಲ್ಲಿ 'ಮೂರು ವರ್ಷಗಳ ಹಿಂದೆ ಕೈಗೊಂಡು ಕಾಮಗಾರಿಗಳೇ' ಬದಲಿಗೆ 'ಕೈಗೊಂಡ' ಆಗಬೇಕಿತ್ತು.'
"800 ಬಸ್‌ಗಳ ಖರೀದಿಗೆ ನಿರ್ಧಾರ' ಎಂಬ ಶೀರ್ಷಿಕೆಯ ವರದಿಯಲ್ಲಿ 8000 ಬಸ್ಸುಗಳು ಅಂತ ಆಗಿದೆ. ಯಾವುದು ಸರಿ? ಪುಟ 5ರಲ್ಲಿ 'ಸಚಿವರ ಟ್ಯೂನ್ ಮೋಡಿ' ಶೀರ್ಷಿಕೆಯ ವರದಿಯಲ್ಲಿ 4ನೇ ಪ್ಯಾರಾದಲ್ಲಿ 'ಇವೆರೆಲ್ಲರ ನಡುವೆ ನಿಜಕ್ಕೂ ಟೆಸ್ಟ್ ಇರವುದು' ಎಂದಾಗಿದೆ.'
'ಪುಟ 8 ಸಂಪಾದಕೀಯದಲ್ಲಿ 3ನೇ ಪ್ಯಾರಾದ ಕೊನೆಯ ಸಾಲು 'ಅಲ್ಲಕಲ್ಲೋಲ' ಅಂತಿದೆ. 8ನೇ ಪ್ಯಾರಾ 8ನೇ ಸಾಲಿನಲ್ಲಿ 'ಈ ಅವಧಿಯಲ್ಲೇ ಸಂವೈಧಾನಿಕ' ಅಂತ ಬರೆಯಲಾಗಿದೆ. ಅದು 'ಸಂವಿಧಾನಿಕ' ಆಗಬೇಕಿತ್ತೋ ಏನೋ.'
"ನೂರೆಂಟು ನೋಟ' ಲೇಖನದ 4ನೇ ಪ್ಯಾರಾ ಕೊನೆಯ ಸಾಲು, 'ವ್ಯಕ್ತಿಯೆಂಬ ಅಗ್ಗಳಿಕೆಗೆ ಪಾತ್ರರಾದ' ಅಂತಿದೆ. ಅದು ಹೆಗ್ಗಳಿಕೆ ಆಗಬೇಕಿತ್ತು. 6ನೇ ಪ್ಯಾರಾದ ಕೊನೆಯ ಸಾಲಿನಲ್ಲಿ 'ಅವರದು ಕಳಂಕಕರಹಿತ' ಅಂತ ಬರೆಯಲಾಗಿದೆ. ಅದು 'ಕಳಂಕರಹಿತ' ಆಗಬೇಕಿತ್ತು' ಎಂದಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ 2000ಕ್ಕೂ ಹೆಚ್ಚು ಬೋಗಸ್ ಕಾಮಗಾರಿ ಎಂದಾಗಬೇಕಿತ್ತು. 8000 ಬಸ್ ಖರೀದಿ ಎಂದು ಸಚಿವರು ಹೇಳಿದ್ದನ್ನು ಸುದ್ದಿಯಲ್ಲಿ ಸರಿಯಾಗಿ ಬರೆಯಲಾಗಿದೆ. ಆದರೆ ಶೀರ್ಷಿಕೆಯಲ್ಲಿ 800 ಎಂದು ತಪ್ಪಾಗಿ ನಮೂದಿಸಲಾಗಿದೆ.
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- "ಬೈಟು ಕಾಫಿ'ಯಲ್ಲಿ 'ಅಶ್ವತ್ಥನಾರಾಯಣ' ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿರುವ 'ನಿಶ್ಯಬ್ದ' ಅಂಕಣದ ಶೀರ್ಷಿಕೆಯ ಬಗೆಗೆ ಮೇ 25ರಂದು ಶೀರ್ಷಿಕೆಗೊಂದು ವ್ಯಾಖ್ಯಾನ ಪ್ರಕಟವಾಯಿತು. ಶೀರ್ಷಿಕೆ ಔಚಿತ್ಯದ ಕುರಿತಾಗಿ ವಿಶ್ಲೇಷಣೆ ನೀಡಿದ್ದಾರೆ. ವ್ಯಾಕರಣ ರೀತಿಯಲ್ಲಿ 'ನಿಶ್ಯಬ್ದ' ಎಂಬುದು ಅಶುದ್ಧರೂಪ. 'ನಿಃ' ಎಂಬ ಉಪಸರ್ಗಕ್ಕೆ ಶಬ್ದ ಎಂಬಪದ ಸೇರಿದಾಗ 'ನಿಶ್ಶಬ್ದ' (ನಿಶ್‌+ಶಬ್ದ ನಿಶ್ಶಬ್ದ) ಎಂಬ ರೂಪ ಸಿದ್ಧವಾಗುತ್ತದೆ. 'ಶ' ಎಂಬ ಅಕ್ಷರಕ್ಕೆ 'ಶ'ಕಾರದ ಒತ್ತು ಬಳಕೆಯಾಗಬೇಕೇ ಹೊರತು 'ಯ' ಒತ್ತು ಅಲ್ಲ. ನಿಃ+ಶರ್ತ ನಿಶ್ಶರ್ತ, ನಿಃ+ಶುಲ್ಕ ನಿಶ್ಶುಲ್ಕ, ನಿಃ+ ಶೇಷ ನಿಶ್ಶೇಷ, ನಿಃ+ಸ್ಸಂಗ ನಿಸ್ಸಂಗ ಎಂದಾಗುತ್ತದೆ.'
'ದೌರ್ಭಾಗ್ಯವೆಂದರೆ ಕನ್ನಡ ಶಬ್ದಕೋಶಗಳಲ್ಲಿ 'ಶ' ಅಕ್ಷರಕ್ಕೆ 'ಶ'ಕಾರವನ್ನು ಒತ್ತಾಗಿ ಬರೆದಿರುವುದು 'ಶ'ಕಾರದ ಒತ್ತೋ, ಅಥವಾ 'ಯ'ಕಾರದ ಒತ್ತೋ ಎಂಬುದು ಗೊಂದಲವಾಗುವಂತೆ ಮುದ್ರಣವಾಗಿರುತ್ತದೆ. ಆದ್ದರಿಂದ 'ನಿಶ್ಯಬ್ದ' ಎಂಬುದು ಸರಿಯಾದ ರೂಪವಲ್ಲ' ಎಂದಿದ್ದಾರೆ. ಭಟ್ಟರ ಮಾತನ್ನು ಬಿಟ್ಟವರುಂಟೇ? ಅವರ ಮಾತನ್ನು ಪಾಲಿಸಲಾಗಿದ್ದು, ಅಂಕಣದ ಹೆಸರನ್ನು ಮುಂದಿನ ವಾರದಿಂದ 'ನಿಶ್ಶಬ್ದ' ಎಂದು ಬದಲಾಯಿಸಲಾಗುವುದು.

 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.