ಶಿಕ್ಷೆಯಾದರೂ ನೌಕರಿ ಅಬಾಧಿತ
ಸರ್ಕಾರದಲ್ಲಿ ಹಲವಾರು ವಿಚಿತ್ರ ಸಂದರ್ಭಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿ ಕೆಲವು ಮಾತ್ರ ಬೆಳಕಿಗೆ ಬರುವುದು ಸಹಜ. ಅಂತಹ ಒಂದು ಪ್ರಕರಣದಲ್ಲಿ ಒಬ್ಬ ಅಧಿಕಾರಿಗೆ ಲೋಕಾಯುಕ್ತ ನ್ಯಾಯಾಲಯದಿಂದ ಭ್ರಷ್ಟಾಚಾರದ ಆರೋಪದ ಮೇಲೆ ಒಂದೂವರೆ ವರ್ಷದ ಕಠಿಣ ಸಜಾ ಶಿಕ್ಷೆಯಾಗಿದ್ದರೂ ಅವರು ಇನ್ನೂ ಅದೇ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆನ್ನುವ ಆರೋಪ ಪ್ರಕಟವಾಗಿದೆ.
ಈ ಆರೋಪ ಪ್ರಕಟವಾಗಿರುವುದು ಹೈಕೋರ್ಟಿನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತರಕ್ಷಣೆಯ ಅರ್ಜಿಯ ಮೂಲಕ. ಈ ಪ್ರಕರಣದಲ್ಲಿ ಸಂಬಂಧಪಟ್ಟಿರುವ ಅಧಿಕಾರಿ ಲೀಗಲ್ ಮೆಟ್ರಾಲಜಿ ಇಲಾಖೆಯಲ್ಲಿ ಇನ್ಚಾರ್ಜ್ ಕಂಟ್ರೋಲರ್ ಆಗಿರುವ ಸಿ.ಎಂ. ಮಲ್ಲಿಕಾರ್ಜುನ.
ಅವರ ಮೇಲಿನ ಭ್ರಷ್ಟಾಚಾರದ ಆರೋಪ ಬೆಳಕಿಗೆ ಬಂದಿದ್ದು 2005 ರಲ್ಲಿ. ಅದರ ತನಿಖೆ ನಡೆದು, ಲೋಕಾಯುಕ್ತ ನ್ಯಾಯಾಲಯದಲ್ಲಿ ಶಿಕ್ಷೆ ಆಗಿದ್ದು ಕಳೆದ ವರ್ಷದ ಜೂನ್ನಲ್ಲಿ. ಹೈಕೋರ್ಟಿನಲ್ಲಿ ಈ ಪ್ರಕರಣದ ಪ್ರಸ್ತಾಪವಾಗಿದ್ದು ಗುರುವಾರ. ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವವರ ಪ್ರಕಾರ ಸರ್ಕಾರದ ನಿಯಮದಂತೆ, ಒಂದು ನ್ಯಾಯಾಲಯದಲ್ಲಿ ಶಿಕ್ಷೆಯಾದ ತತ್ಕ್ಷಣದಿಂದಲೇ ಅಂತಹ ನೌಕರ ಅಥವಾ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು. ಅನಂತರದ ಕ್ರಮ ಕೈಗೊಳ್ಳುವುದು ಸರ್ಕಾರಕ್ಕೆ ಬಿಟ್ಟಿದ್ದು.
ಕಳೆದ ವರ್ಷದ ಆಗಸ್ಟ್ನಲ್ಲಿ ಮಲ್ಲಿಕಾರ್ಜುನ ಅವರು ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಶಿಕ್ಷೆಗೆ ತಡೆ ಆದೇಶವನ್ನು ಪಡೆದಿದ್ದರು. ಆದರೆ ಅರ್ಜಿದಾರರ ಪ್ರಕಾರ ಹೈಕೋರ್ಟಿನ ತಡೆ ಆದೇಶ ಇರುವುದು ಜೈಲುವಾಸದ ಶಿಕ್ಷೆಗೆ ಮಾತ್ರ. ನ್ಯಾಯಾಲಯದ ತೀರ್ಪಿಗಲ್ಲ. ಇದೇ ಒಂದು ರೀತಿಯ ವಿಚಿತ್ರ ಪ್ರಕರಣವಾಗಿ ಪರಿವರ್ತನೆಯಾಗಲಿದೆ. 2005ರಲ್ಲಿ ಸಂಭವಿಸಿದ ಘಟನೆಯ (ಲಂಚ ಸ್ವೀಕಾರ) ಆರೋಪದ ತನಿಖೆ, ವಿಚಾರಣೆ, ತೀರ್ಪಿಗೆ ಎಂಟು ವರ್ಷಗಳೇ ಹಿಡಿದಿದ್ದು, ಆ ಅಧಿಕಾರಿ ಅದೇ ಹುದ್ದೆಯಲ್ಲಿ ಮುಂದುವರಿದಿದ್ದು ವಿಪರ್ಯಾಸವೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

