ಸಂಪಾದಕೀಯ

ವೈದ್ಯರಿಗೆ ಬೇಕು ರಕ್ಷಣೆ

Published On :

ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಝನ್ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ಹೌಸ್‌ಸರ್ಜನ್ ಮೇಲೆ ಸಾವಿಗೀಡಾದ ರೋಗಿಯೊಬ್ಬರ ಸಂಬಂಧಿಕರು ಹಲ್ಲೆ ನಡೆಸಿದ್ದು ಹಾಗೂ ಅದನ್ನು ಪ್ರತಿಭಟಿಸಿ ಅಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನ ಸಂಸ್ಥೆಯ ವಿದ್ಯಾರ್ಥಿ ವೈದ್ಯರು ಪ್ರತಿಭಟನೆ ನಡೆಸಿದ್ದು ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ.
ಮೊದಲನೆಯದಾಗಿ ದೊಡ್ಡ ಆಸ್ಪತ್ರೆಗಳಲ್ಲಿ ಇರಬೇಕಾದ ಸೂಕ್ತ ಪ್ರಮಾಣದ ಸುರಕ್ಷಾ ವ್ಯವಸ್ಥೆ. ಬೌರಿಂಗ್ ಆಸ್ಪತ್ರೆಯಲ್ಲಿ ಸುರಕ್ಷಾ ಲೋಪ ಇತ್ತು ಎನ್ನಲಾಗಿದೆ. ಚಿಕಿತ್ಸೆ ನೀಡುವ ವೈದ್ಯರಿಗೆ ಸುರಕ್ಷೆಯ ಭರವಸೆ ಇಲ್ಲದಿದ್ದರೆ ಅವರು ಹೇಗೆ ಕರ್ತವ್ಯ ನಿರ್ಹಹಿಸಬೇಕು? ರೋಗಿಗಳ ಸಂಬಂಧಿಗಳು ತೀವ್ರನಿಗಾ ಘಟಕಕ್ಕೆ ಇಷ್ಟಬಂದ ಸಂಖ್ಯೆಯಲ್ಲಿ ನುಗ್ಗುವಂತಾಗಬಾರದು. ಚಿಕಿತ್ಸೆಯು ಸರಿಯೋ ತಪ್ಪೋ ಎಂದು ಜನಜಂಗುಳಿ ತೀರ್ಮಾನ ಕೈಗೊಳ್ಳುವಂತಾದಾಗ ಇಂಥ ಅಹಿತಕರ ಘಟನೆಗಳು ಜರುಗುತ್ತವೆ.
ಒಳರೋಗಿಯಾಗಿ ಚಿಕಿತ್ಸೆ ಪಡೆಯಲು ಅವಕಾಶ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ವೈದ್ಯರು ಎಲ್ಲ ಕಾಲಕ್ಕೂ ಲಭ್ಯರಿರಬೇಕಾದ ಅಗತ್ಯವಿದೆ. ಅದಕ್ಕೆ ಮಾರ್ಗಸೂಚಿಗಳೂ ಇವೆ. ಆಸ್ಪತ್ರೆಯ ಆವರಣದಲ್ಲಿಯೇ ಅವರಿಗೆ ವಸತಿ ಸೌಲಭ್ಯವೂ ಇರುತ್ತದೆ. ಈಗೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ಹಿರಿಯ ವೈದ್ಯರು ಸಂಜೆ ಐದು ಗಂಟೆಯ ಮೇಲೆ ಸಿಗುವುದೇ ಅಪರೂಪವಾಗಿದೆ. ಕನಿಷ್ಠ ಅವರು ರಾತ್ರಿ ಒಂಬತ್ತು ಗಂಟೆಯ ವರೆಗಾದರೂ ಇರುವಹಾಗೆ ವ್ಯವಸ್ಥೆಯಾಗಬೇಕು. ಹೌಸ್‌ಸರ್ಜನ್‌ಗಳು ವಿದ್ಯಾರ್ಥಿಗಳಾಗಿರುವುದರಿಂದ ಅವರ ಮೇಲೆಯೇ ಎಲ್ಲ ಜವಾಬ್ದಾರಿಯನ್ನು ಬಿಡುವುದು ಸರಿಯಲ್ಲ. ಹಿರಿಯ ವೈದ್ಯರ ಅನುಪಸ್ಥಿತಿಯೇ ರೋಗಿಗಳ ಸಂಬಂಧಿಗಳ ಆಕ್ರೋಶಕ್ಕೆ ಕಾರಣವಾಗಿದ್ದು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಎಂಬುದನ್ನು ಒಪ್ಪಿಕೊಂಡರೂ ರೋಗಿಯ ಜೀವ ಉಳಿಸುವ ಪ್ರಶ್ನೆ ಬಂದಾಗ ಆ ನೆಪಕ್ಕೆ ಯಾವುದೇ ಬೆಲೆ ಇರುವುದಿಲ್ಲ. ಸರ್ಕಾರ ತ್ವರಿತವಾಗಿ ಕ್ರಮಕ್ಕೆ ಮುಂದಾಗಬೇಕಿರುವ ಪ್ರಕರಣ ಇದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.