ತಪ್ಪಾಯ್ತು ತಿದ್ಕೋತೀವಿ
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಕೊ.ಸು. ನರಸಿಂಹಮೂರ್ತಿ ಅವರು 'ಕನ್ನಡಪ್ರಭ'ದಲ್ಲಿ ತಮಗೆ ತಪ್ಪೆಂದು ಕಂಡಕೂಡಲೇ ತಕ್ಷಣವೇ ಪ್ರತಿಕ್ರಿಯಿಸುತ್ತಾರೆ. ಸಂತೋಷವೇ. ಆದರೆ ಅವರು ತುಸು ವಿಮರ್ಶೆ ಮಾಡಿಕೊಂಡು ಪ್ರತಿಕ್ರಿಯಿಸುವುದು ಒಳಿತೆಂದು ಅವರ ಕೆಲವು ತಕರಾರುಗಳನ್ನು ಗಮನಿಸಿ ಪ್ರಾರ್ಥಿಸುತ್ತೇನೆ.'
'ಜಲಸಮಾಧಿ' ಎಂಬ ನುಡಿಗಟ್ಟು ಧಾರಾಳವಾಗಿ ಬಳಕೆಯಲ್ಲಿದೆ. 'ಸಮಾಧಿ' ಎಂಬ ಪದಕ್ಕೆ ಬೇರೆ ಬೇರೆ ಆಯಾಮದ ಅರ್ಥಗಳಿವೆ. 'ಸಮಾಧಿ' ಎಂಬುದಕ್ಕೆ ಹೆಣಹೂತ ಗೋರಿ ಎಂಬುದಷ್ಟೇ ಅರ್ಥವಲ್ಲ. ನಾಮಾವಶೇಷ, ಎಂಬರ್ಥದಲ್ಲಿ ನದಿ, ಸಮುದ್ರಗಳಲ್ಲಿ ನಡೆದ ದುರಂತ ನಷ್ಟಗಳಿಗೆ ಬಳಸುವುದು ಸರಿಯಾಗಿದೆ.'
'ಸಂಪಾದಕರ 'ನೂರೆಂಟುನೋಟ' ನೆಲ್ಸನ್ ಮಂಡೇಲ ಲೇಖನದಲ್ಲಿರುವ 'ಆವಾಹಿಸಿಕೊಂಡಿದ್ದರು' ಪದ ಬಳಕೆಯ ಬಗೆಗೆ ಸಂಗಪ್ಪ ಗಾಣಿಗೇರ ಅವರು ತಕರಾರು ಎತ್ತಿದ್ದಾರೆ. 'ಆವಾಹನೆ' (ಆವರಿಸಿಕೊಳ್ಳು) ಪದದಿಂದ 'ಆವಾಹಿಸು' ಪದ ಮೂಡಿಬಂದಿದೆ. ಪೂಜೆಯ ಆರಂಭದಲ್ಲಿ ಕಲಶಪೂಜೆಯಲ್ಲಿ 'ಗಂಗೇಚಯಮುನೇಚೈವ ಸನ್ನಿಧಿಂಕುರು' ಎಂದು ಮಂತ್ರಪೂರ್ವಕವಾಗಿ ನದೀದೇವತೆಗಳನ್ನು ಆವಾಹನೆ ಮಾಡಿಕೊಳ್ಳುವುದನ್ನು ನೆನಪಿಸಿಕೊಳ್ಳಿ.'
"ಕಣ್ಣೀರುಳ್ಳಿ' ಬಗೆಗೆ ಕೊ.ಸು. ನರಸಿಂಹಮೂರ್ತಿ ಅವರು ಅತಿಯಾಗಿ ಗರಂಗೊಳ್ಳುವ ಭರದಲ್ಲಿ ಈರುಳ್ಳಿಗಿರುವ ಪರ್ಯಾಯ ನಾಮಗಳನ್ನು ನೆನಪಿಸಿಕೊಳ್ಳುವುದರಲ್ಲೇ ಎಡವಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು ಕಡೆಗಳಲ್ಲಿ 'ಈರುಳ್ಳಿ' ಪದಬಳಕೆ ಇದೆ. ಸರಿ.'
'ಆದರೆ ಉತ್ತರ ಕರ್ನಾಟಕದೆಡೆಗಳಲ್ಲಿ ಈರುಳ್ಳಿಗೆ 'ಉಳ್ಳಾಗಡ್ಡಿ' ಎಂಬ ಪದವೇ ಹೆಚ್ಚಾಗಿ ಬಳಕೆಯಲ್ಲಿದೆ. 'ಉಳ್ಳಿ' ಮತ್ತು 'ಗಡ್ಡೆ' ಪದಗಳು ಸೇರಿ ಬಳಕೆಯಲ್ಲಿ 'ಉಳ್ಳಾಗಡ್ಡಿ' ಆಗಿದೆ. ಉಳ್ಳಿ ಎಂದರೆ 'ಈರುಳ್ಳಿ'. ಕಣ್ಣೀರುಉಳ್ಳಿ ಸೇರಿದರೆ 'ಕಣ್ಣೀರುಳ್ಳಿ' ಎಂಬುದು ನೂರಕ್ಕೆ ನೂರು ಸರಿಯಿದೆ.'
'ದಕ್ಷಿಣ ಕನ್ನಡದಲ್ಲಿ ಈರುಳ್ಳಿಗೆ ನೀರುಳ್ಳಿ ಎಂಬ ಪದವೇ ಬಳಕೆಯಲ್ಲಿದೆ. ಕಣ್ಣಲ್ಲಿ ನೀರು ಬರಿಸುವ ಉಳ್ಳಿಯಾದ್ದರಿಂದ ನೀರುಉಳ್ಳಿನೀರುಳ್ಳಿ ಎಂಬ ಪದ ಬಳಕೆಗೆ ಬಂದಿರಬೇಕು. ಕೊ.ಸು. ನರಸಿಂಹಮೂರ್ತಿ ಅವರು ತಕರಾರನ್ನು ವಾಪಸ್ ಪಡೆಯುವುದೇ ಲೇಸೆನ್ನಿಸುತ್ತದೆ.'
'ಪ್ರಾಯಶಃ ಸಂಗಪ್ಪ ಗಾಣಿಗೇರ ಅವರು ವಾಸಿಸುವ ಪ್ರದೇಶದಲ್ಲಿ 'ಆಹ್ವಾನಿಸು' ಎಂಬುದನ್ನು 'ಆವ್ಹಾನಿಸು' ಎಂದು ಉಚ್ಚರಿಸುತ್ತಿರಬಹುದು. ಆದರೆ ವ್ಯಾಕರಣನಿಬದ್ಧವಾಗಿ ನೋಡಿದರೆ 'ಆವ್ಹಾನಿಸು' ಎಂಬುದು ಅಸಾಧುಪ್ರಯೋಗ ಎಂಬುದನ್ನು ಅರಿತುಕೊಳ್ಳುವುದು ಒಳಿತು.'
'ಬಹಳಷ್ಟು ಜನ ಓದುಗರು 'ತಪ್ಪಾಯ್ತು ತಿದ್ಕೋತೀವಿ' ಅಂಕಣದ ಉದ್ದೇಶವನ್ನೇ ಅರ್ಥೈಸಿಕೊಂಡಂತೆ ಕಾಣುತ್ತಿಲ್ಲ. ಪತ್ರಿಕೆಯಲ್ಲಿ ಬರುವ ತಪ್ಪುಗಳನ್ನೆಲ್ಲ ಪಟ್ಟಿ ಮಾಡುವುದು ಉದ್ದೇಶವಲ್ಲ. ಅಂಕಣ ಆರಂಭಿಸುವಾಗ ಪತ್ರಿಕೆಯ ಪ್ರಧಾನ ಸಂಪಾದಕರು ಪತ್ರಿಕೆಯಲ್ಲಿ ಬರುವ ತಪ್ಪುಗಳನ್ನೆಲ್ಲ ತಿದ್ದಿಕೊಂಡು, ಪರಿಶುದ್ಧ ಪತ್ರಿಕೆಯನ್ನಾಗಿ ರೂಪಿಸುವ ಇರಾದೆಯುಳ್ಳವನಾಗಿದ್ದೇನೆಂಬ ಭಾವನೆಯನ್ನೂ ವ್ಯಕ್ತಪಡಿಸಿಲ್ಲ.'
'ಪತ್ರಿಕೆಯಲ್ಲಿ ಎಂತೆಂತಹ ತಪ್ಪುಗಳು ಸಂಭವಿಸುತ್ತವೆ, ದೋಷಪೂರ್ಣ ಮಾಹಿತಿಗಳು ಯಾಕೆ ನುಸುಳುತ್ತವೆ, ಯಾವ ಮೂಲಗಳಿಂದ ದೋಷಗಳು ದಾಂಗುಡಿಯಿಡುತ್ತವೆ, ದೋಷಗಳು ನುಸುಳದಂತೆ ಪತ್ರಿಕೆಯ ವರದಿಗಾರರು, ಬರಹಗಾರರು, ಮುದ್ರಣ ವಿಭಾಗದವರು, ಕರಡಚ್ಚು ತಿದ್ದುವವರು ಮುಂತಾದವರು ಸುಧಾರಿಸಿಕೊಳ್ಳಲು ಈ ಅಂಕಣವೊಂದು ಚಿಂತನ ಚಾವಡಿ. ಸುಧಾರಿಸಿಕೊಳ್ಳುವ ಇರಾದೆ ಉಳ್ಳವರು ಸುಧಾರಿಸಿಕೊಳ್ಳುತ್ತಾರೆ. ಸುಧಾರಿಸಿಕೊಳ್ಳದಿರುವವರು ಹಾಗೇ ಇರುತ್ತಾರೆ. ಅದು ಅವರ ಹಣೆಬರಹ' ಎಂದಿದ್ದಾರೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

