ಸಂಪಾದಕೀಯ

ಹಾಸನಾಂಬದ ಅವ್ಯವಸ್ಥೆ

Published On :

ಕನ್ನಡಪ್ರಭದ 4.11.2013ರ 12ನೇ ಪುಟದಲ್ಲಿ ಪ್ರಕಟವಾದ "ನಾಳೆ ಹಾಸನಾಂಬೆ ದರ್ಶನಕ್ಕೆ ತೆರೆ" ಓದಿದೆ. ಅಲ್ಲಿ ನಾವು ಅನುಭವಿಸಿದ ಯಾತನೆಯ ಬಗ್ಗೆ ನನ್ನ ಅನಿಸಿಕೆಗಳು ಇಂತಿದೆ. ದಿ. 3.11.2013 ಸಾಯಂಕಾಲ ಸುಮಾರು 5 ಗಂಟೆಗೆ ದೇವಿ ದರ್ಶನಕ್ಕಾಗಿ ಬೆಂಗಳೂರಿಂದ ಹಾಸನಕ್ಕೆ ಹೋಗಿ ದೇವಾಲಯವನ್ನು ಸಮೀಪಿಸಿದೆ. ದಾರಿ ಉದ್ದಕ್ಕೂ ಹಾಸನಾಂಬೆ ದೇವಸ್ಥಾನ ಇರುವ ಸ್ಥಳ ತಲುಪಲು ಹಲವರನ್ನು ಕೇಳಬೇಕಾಯಿತು. ಯಾವ ಸ್ಥಳದಲ್ಲಿಯೂ ದೇವಾಲಯವಿರುವ ಸ್ಥಳವನ್ನು ಗುರ್ತಿಸಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಸರಿಯಾದ ರಸ್ತೆ ಬೇರೆ ಇಲ್ಲ. ಸಂದುಗೊಂದುಗಳನ್ನು ದಾಟಿ ದೇವಾಲಯವನ್ನು ತಲುಪಲು ನನ್ನಂತಹ ಹಿರಿಯ ನಾಗರಿಕರಿಗೆ ತ್ರಾಸವಾಗುವ ಅನುಭವವಾಯಿತು. ಧರ್ಮದರ್ಶನಕ್ಕಿರುವ ಮಾರ್ಗ ಯಾವುದು, ಹಣ ಕೊಟ್ಟು ಟಿಕೆಟ್ಟನ್ನು ಪಡೆಯಲು ಎಲ್ಲಿ ಹೋಗಬೇಕು ಎಂಬಂತಹ ವ್ಯವಸ್ಥೆ ಇಲ್ಲ. ಕಷ್ಟಪಟ್ಟು ರೂಪಾಯಿ 750/- ರೂ. ಕೊಟ್ಟು ಖರೀದಿಸಿದೆವು. ಪೊಲೀಸರ ಅಣತಿಯಂತೆ ಸರತಿ ಸಾಲಿನಲ್ಲಿ ನಿಂತು ಹೋಗಿ ನೋಡಲಾಗಿ ಧರ್ಮದರ್ಶನಕ್ಕಾಗಿ ಬಂದ ನೂರಾರು ಮಂದಿ ನಮ್ಮ ಸರತಿ ಸಾಲಿನಲ್ಲಿ ಸೇರಿದರು. ನುಗ್ಗಾಟದಲ್ಲಿ ನನ್ನಂತಹ ವಯಸ್ಸಾದವರಿಗೆ ಮುಂದೆ ಹೋಗುವುದು ನರಕಯಾತನೆಯಾಯಿತು. ಸಾವಿರಾರು ಪೊಲೀಸರು ಬಂದೋಬಸ್ತಿಗಾಗಿ ನಿಯೋಜಿಸಿದವರಿಂದಲೂ ಕಿರುಕುಳವಾಯಿತು. ಹಿರಿಯರು, ಕಿರಿಯರೂ ಎನ್ನದೆ ನೂಕುತ್ತಿದ್ದರು. ನನ್ನೊಡನಿದ್ದ ನನ್ನ ಮಗ, ನನ್ನ ಸೊಸೆ ಹಾಗೂ ಇಬ್ಬರು ಚಿಕ್ಕಮಕ್ಕಳಿಗೆ ದೇವಿಯ ದರ್ಶನವಾಗಲೇ ಇಲ್ಲ. ಯಾಕೆಂದರೆ ನಮ್ಮ ಮುಂದಿನ ಸ್ಥಳದಲ್ಲಿ ತಮಗೆ ಬೇಕಾದವರನ್ನು ಒಳಗೆ ಬಿಟ್ಟಿದ್ದು ಅವರ ತಲೆಗಳು ಮಾತ್ರ ಕಾಣುತ್ತಿತ್ತು. ಆದರೂ ನಾನು ಬಹಳ ಹೋರಾಡಿ ಪುನಃ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದೆ. ಆದರೆ ನನ್ನ ಮಗನಿಗಾಗಲೀ, ನನ್ನ ಸೊಸೆ ಹಾಗೂ ಮೊಮ್ಮಕ್ಕಳಿಗಾಗಲೀ ದೇವಿಯ ದರ್ಶನವಾಗಲೇ ಇಲ್ಲ. ಅಲ್ಲಿರುವ ಹಲವಾರು ಪೊಲೀಸರಿಗೆ ವಿನಯದಿಂದ ವಿನಂತಿಸಿದೆವು. ಆದರೂ ಏನೂ ಉಪಯೋಗವಾಗಲಿಲ್ಲ. ಧ್ವನಿವರ್ಧಕದಲ್ಲಿ ಮಾತನಾಡುತ್ತಿದ್ದ ಮಹನೀಯರಿಗೂ ವಿನಂತಿಸಿದೆವು. ಆದರೂ ಏನೂ ಪ್ರಯೋಜನವಾಗಲಿಲ್ಲ. ಹಣವನ್ನು ಕೊಟ್ಟು ದೇವಿಯ ದರ್ಶನವಿಲ್ಲದೆ ಬೆಂಗಳೂರಿಗೆ ಬಂದೆವು. ಇಂತಹ ಅವ್ಯವಸ್ಥೆ ಯಾವ ತೀರ್ಥ ಕ್ಷೇತ್ರಗಳಲ್ಲೂ ಇಲ್ಲ. 69 ವರ್ಷದ ನನ್ನಂತಹ ಹಿರಿಯ ನಾಗರಿಕರಿಂದಲೂ ರೂ. 250 ತೆಗೆದುಕೊಂಡರು. ಹಿರಿಯ ನಾಗರಿಕರಿಗೆ ಪ್ರವೇಶ ಉಚಿತವಿದ್ದರೂ.
- ಕೆ.ಎಂ. ಪರಮಾತ್ಮ, ಬೆಂಗಳೂರು

ಶಿಕ್ಷಕ ಹುದ್ದೆಯ ಅರ್ಜಿಗಳ ಕಥೆಯೇನು?
ಮಾನ್ಯ ಶಿಕ್ಷಣ ಸಚಿವರೇ, ಕಳೆದ ವರ್ಷ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಅರ್ಜಿ ಕರೆದು ವಿಧಾನಸಭಾ ಚುನಾವಣೆ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗದವರಿಗೆ ಮೀಸಲಾತಿ ವಿಷಯವಾಗಿ ಅದು ಮುಂದೂಡಲ್ಪಟ್ಟಿತ್ತು. ಅನೇಕರು ಸಾಲ ಸೋಲ ಮಾಡಿ ಅರ್ಜಿ ಸಲ್ಲಿಸಿದ್ದು, ಈವರೆಗೂ ಆ ಅರ್ಜಿಗಳ ವಿಷಯದ ಕುರಿತು ಸಂಬಂಧಪಟ್ಟವರು ಮೌನ ವಹಿಸಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಶಿಕ್ಷಕರ ಹುದ್ದೆಗೆ ಈ ಹಿಂದೆ ಕರೆದ ಆದೇಶದಲ್ಲಿ ಬಹುಪಾಲು ಹುದ್ದೆಗಳು ಹೈ.ಕ. ಭಾಗದಲ್ಲೇ ಇದ್ದವು. ಆದರೆ ಆಗಿನ್ನೂ '371ಜೆ' ವಿಧಿಯನ್ವಯ ಸ್ಥಳೀಯರಿಗೆ/ ಶೇ. 80 ಮೀಸಲಾತಿ ಇರದ ಕಾರಣ ಇತರ ಜಿಲ್ಲೆಯುವರು (ಹೈ.ಕ. ಹೊರತುಪಡಿಸಿ) ಆ ಭಾಗದ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈಗ ಅಲ್ಲಿನವರಿಗೆ ಮೀಸಲಾತಿ ಕಲ್ಪಿಸಿರುವುದರಿಂದ ಅಭ್ಯರ್ಥಿಯು ಇಚ್ಛಿಸಿದಲ್ಲಿ ಅದೇ ಜಿಲ್ಲೆಗೆ ಅರ್ಜಿಯನ್ನು ಮುಂದುವರೆಸಿ, ಒಂದೊಮ್ಮೆ ಇಚ್ಛಿಸಿದಲ್ಲಿ  ಆ ಅರ್ಜಿಯನ್ನು ರದ್ದುಪಡಿಸಿ ಹಣವನ್ನು ವಾಪಸ್ ಮಾಡಿ, ಅಥವಾ ಅಭ್ಯರ್ಥಿಯು ತಾನು ಆಯ್ಕೆ ಮಾಡಿಕೊಳ್ಳುವ ಇತರೇ ಜಿಲ್ಲೆಗಳಿಗೆ ಅರ್ಜಿಯನ್ನು ವರ್ಗಾಯಿಸಿ ಕೊಡಿ. ಸಂಬಂಧಪಟ್ಟವರು ಇದರ ಬಗ್ಗೆ ಶೀಘ್ರ ಗಮನ ಹರಿಸಬೇಕೆಂದು ತಮ್ಮಲ್ಲಿ ಸವಿನಯ ಪ್ರಾರ್ಥನೆ.
- ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.