ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಚಾಮರಾಜನಗರದ ಗುಂಡ್ಲುಪೇಟೆಯಿಂದ ಅನಿಲ್ ಕುಮಾರ್ ಹೊಸೂರು ಅವರು ಪತ್ರ ಬರೆಯುತ್ತಾರೆ, 'ದೀಪಾವಳಿಯ ಶುಭಾಶಯ ಹೊತ್ತು ತಂದ ನವೆಂಬರ್ 2ರ 'ಕನ್ನಡಪ್ರಭ' ಹಲವು ಅಕ್ಷರ ದೋಷಗಳಿಂದ ಕೂಡಿರುವುದು ವಿಷಾದನೀಯ. ಮೊದಲ ಪುಟದಲ್ಲಿ ಆರಂಭವಾದ ತಪ್ಪುಗಳು ಮುಂದಿನ ಪುಟಗಳಿಗೂ ಮುಂದುವರೆದಿರುವುದು ಮತ್ತಷ್ಟು ಬೇಸರತರಿಸಿದೆ. ಮೊದಲ ಪುಟದಲ್ಲಿನ 'ಘರ್ಜನೆ' ಪದದಲ್ಲಿ ಅಲ್ಪಪ್ರಾಣ 'ಗ' ಬಳಕೆ ಸರಿ. ಮಹಾಪ್ರಾಣ ಅಕ್ಷರ 'ಘ' ಬಳಸಿ ನೀವು ಗರ್ಜಿಸಬೇಕಾದ ಅವಶ್ಯಕತೆಯಿರಲಿಲ್ಲ. ಮೂರನೇ ಪುಟದಲ್ಲಿ ಮೈಸೂರು ಜಿಲ್ಲಾಧಿಕಾರಿಗಳ ಹೆಸರನ್ನು ಪ್ರತ್ಯೇಕ ವರದಿಯಲ್ಲಿ 'ಸಿ.ಶಿಖಾ, ಸಿ.ಸಿಖಾ' ಎಂದು ಬರೆದು ಗೊಂದಲ ಮೂಡಿಸಿದ್ದೀರಿ. ನಾಲ್ಕನೇ ಪುಟದಲ್ಲಿ 'ಕನ್ನಡಮ್ಮನ ಸೇವೆ' ಎಂದು ಬರೆಯಲು 'ಕಮ್ಮಡಮ್ಮನ ಸೇವೆ' ಎಂದು ಬರೆದು ನಿಮ್ಮ ಕನ್ನಡ ಪ್ರೇಮ ಮರೆದಿದ್ದೀರಿ. ಅದೇ ಪುಟದಲ್ಲಿ 'ಕೋತಿಯಾಡಿಸುವ ವೇಳೆ ತಲೆಗೆ ಪೆಟ್ಟು ಬಿದ್ದು ಮಹಿಳೆ ಸಾವು' ಎಂಬ ವರದಿಯಲ್ಲಿ ಆಕೆಯ ಸಾವಿನ ಕಾರಣ, ಶೀರ್ಷಿಕೆ ಹಾಗೂ ವರದಿಗೆ ಸಂಬಂಧವಿಲ್ಲದಂತಿದೆ. ಅಲ್ಲಿಯೇ 'ಕನ್ನಡ ಬಗ್ಗೆ ಎಲ್ಲರಿಗೂ ಅಭಿಮಾನಬೇಕು' ಎಂಬಲ್ಲಿ 'ಕನ್ನಡದ ಬಗ್ಗೆ.....' ಎಂದು ಬರೆದಿದ್ದರೆ ಸೂಕ್ತವಾಗಿರುತ್ತಿತ್ತು.'
'ಕನ್ನಡದಲ್ಲಿಯೇ ಅದ್ಭುತ ಶಬ್ದ ಭಂಡಾರವಿರುವಾಗ ಆಂಗ್ಲ ಪದಗಳ ಬಗ್ಗೆ ಅನಗತ್ಯ ಮೋಹವೇಕೆ? ಉದಾಹರಣೆಗೆ ಫೈನಲ್-ಅಂತಿಮ, ಸೆಮಿಫೈನಲ್-ಉಪಾಂತ್ಯ, ಪೌಚ್-ಪೊಟ್ಟಣ, ಪ್ರೆಷರ್-ಒತ್ತಡ ಹೀಗೆ. ಹಾಗೆಯೇ ಸಂಪಾದಕರಲ್ಲಿ ಒಂದು ಮನವಿಯೇನೆಂದರೆ ಕನ್ನಡ ಅಂಕಿಗಳನ್ನು ಪತ್ರಿಕೆಯಲ್ಲಿ ಬಳಸುವುದರ ಮೂಲಕ ನೀವ್ಯಾಕೆ ಮುದ್ರಣ ಮಾಧ್ಯಮದಲ್ಲೊಂದು ಇತಿಹಾಸ ನಿರ್ಮಿಸಬಾರದು? ಆರಂಭದಲ್ಲಿ ಓದುಗರಿಗೆ ಗೊಂದಲವಾದರೂ ಮುಂದೆ ಅದನ್ನು ಅರ್ಥೈಸಿಕೊಳ್ಳಲಾಗದಷ್ಟು ದಡ್ಡರೇನಲ್ಲ ನಿಮ್ಮ ಓದುಗರು' ಎಂದಿದ್ದಾರೆ.
ಈ ತಪ್ಪುಗಳು ಮೈಸೂರು ಆವೃತ್ತಿಯಲ್ಲಿ ಪ್ರಕಟವಾಗಿವೆ. 'ಘರ್ಜನೆ' ಪದವು ಬೆಂಗಳೂರು ಆವೃತ್ತಿಯಲ್ಲಿ 'ಗರ್ಜನೆ'ಯಾಗಿ ಪ್ರಕಟವಾಗಿದೆ. ಇನ್ನು ಪತ್ರಿಕೆಯಲ್ಲಿ ಕನ್ನಡ ಅಂಕಿಯನ್ನು ಬರೆಯುವುದರ ಬಗ್ಗೆ ಉತ್ತಮ ಸಲಹೆ ನೀಡಿದ್ದಾರೆ. ಆದರೆ ಅನಿಲ್‌ಕುಮಾರ್ ಅವರೇ ಪತ್ರದ ಆರಂಭದಲ್ಲಿ 'ನವೆಂಬರ್ 2' ಎಂದು ಆಂಗ್ಲ ಅಂಕಿಯನ್ನು ಬಳಸಿದಂತೆ ದೈನಂದಿನ ಬಳಕೆಯಲ್ಲಿ ಆಂಗ್ಲ ಅಂಕಿಗಳು ಬಂದಿವೆ. ಓದುಗರು ಖುಷಿಯಿಂದ ಹಾಗೂ ಸರಳವಾಗಿ ಪತ್ರಿಕೆ ಓದಬೇಕು ಎನ್ನುವುದು ನಮ್ಮ ಉದ್ದೇಶ.
ನ.10ರ ಪುಟ 10ರಲ್ಲಿ 'ಎಂಟೆಕ್ ವೆಂಕಟ ಹೈಟೆಕ್ ಆಗಲು ನೆರವಾಗಿ' ಲೇಖನದಲ್ಲಿ ದೊಡ್ಡ ಪ್ರಮಾದವಾಗಿದೆ. ಬ್ಯಾಂಕ್ ಖಾತೆ ಸಂಖ್ಯೆಯೊಂದಿಗೆ 'ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬೆಂಗಳೂರು ಶಾಖೆ' ಎಂದು ಪ್ರಕಟವಾಗಿದೆ. ಆದರೆ ಅದು 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮೈಸೂರು ಶಾಖೆ' ಎಂದು ಬರೆಯಬೇಕಿತ್ತು. ಲೇಖನಕ್ಕೆ ಸ್ಪಂದಿಸಿ ಸಹಾಯಮಾಡಲು ಮುಂದಾದ ಬೆಂಗಳೂರಿನ ವೆಂಕಟೇಶ್‌ಮೂರ್ತಿ ಅವರೇ ಈ ವಿಚಾರವನ್ನು ಪತ್ರಿಕೆಗೆ ತಿಳಿಸಿದ್ದಾರೆ.



 -ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.