ಸಂಪಾದಕೀಯ

ಸರ್ಕಾರಿ ನೌಕರರ ಕೆಲಸದ ಪರಿ

Published On :

ಸರ್ಕಾರಿ ನೌಕರರಿಗೆ, ಅವರ ಉದ್ಯೋಗ ಭದ್ರತೆ, ಕಾಲಕಾಲಕ್ಕೆ ಬಡ್ತಿ, ಸರ್ಕಾರದ ಕಲ್ಯಾಣ ಯೋಜನೆಗಳಲ್ಲಿ ಆದ್ಯತೆ, ಆರೋಗ್ಯ ರಕ್ಷಣೆ ಹಾಗೂ ಇತರ ಸೌಲಭ್ಯಗಳಿಗೆ ಸಂವಿಧಾನದತ್ತ ರಕ್ಷಣೆ ಇದೆ. ಆದರೆ, ಅವರ ಸೇವಾ ನಿಯಮಗಳಲ್ಲಿ ಕರ್ತವ್ಯ ಪಾಲನೆಯ ಪ್ರಜ್ಞೆಗೆ, ವೈಫಲ್ಯ ಕಂಡು ಬಂದಾಗ ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ವಿಚಾರದಲ್ಲಿ ಹೆಚ್ಚು ಪ್ರಸ್ತಾಪವಿಲ್ಲ. ಸಮಾಜದ ಬೌದ್ಧಿಕ ವರ್ಗಕ್ಕೆ ಸೇರಿದ ನೌಕರರಿಗೆ ಕರ್ತವ್ಯ ಪ್ರಜ್ಞೆಯನ್ನು ಕುರಿತು ವಿಶೇಷ ತಿಳುವಳಿಕೆ ನೀಡುವ ಅಗತ್ಯ ಹಿಂದೆ ಕಂಡು ಬಂದಿರಲಿಲ್ಲ. ರಾಷ್ಟ್ರಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಹಿಂದೆ ನೇಮಕಗೊಂಡಿದ್ದ ಅನೇಕ ಆಡಳಿತ ಸುಧಾರಣೆ ಆಯೋಗಗಳ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೂ ಕರ್ತವ್ಯ ಪ್ರಜ್ಞೆ ಕುರಿತ ಪ್ರಸ್ತಾಪ ಆಗಿರುವುದು ಕಡಿಮೆಯೇ.
ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ, ಆಡಳಿತದಲ್ಲಿ ಉತ್ತರದಾಯಿತ್ವ ಹಾಗೂ ಚುರುಕನ್ನು ಮೂಡಿಸುವ ಪ್ರಯತ್ನದ ಅಂಗವಾಗಿ ಸಚಿವ ಜಯಚಂದ್ರ ನೇತೃತ್ವದ ಸಮಿತಿ, ಹಲವು ಕಾರ್ಯಾಲಯಗಳಿಗೆ ಅನಿರೀಕ್ಷಿತ, ಹಠಾತ್ ಭೇಟಿ ನೀಡಿದಾಗ ಗಮನಕ್ಕೆ ಬಂದ ಅಂಶಗಳು ಗಮನಾರ್ಹ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದೇ ಇದ್ದರೂ ಅಂತಹವರನ್ನು ಯಾರೂ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಒಂದು ವಾರದಲ್ಲಿ 1622 ಮಂದಿ ನೌಕರರು ಸಮಯಕ್ಕೆ ಸರಿಯಾಗಿ ಹಾಜರಾಗಿರಲಿಲ್ಲ ಎನ್ನುವ ಅಂಶ ಸಾಮಾನ್ಯವಾದದ್ದಲ್ಲ. ಈಗ ತತ್‌ಕ್ಷಣದಲ್ಲಿ ಇದಕ್ಕೆಲ್ಲ ಪ್ರಚಾರ ಸಿಕ್ಕಿದ ಅನಂತರ ಆ ನೌಕರರಿಗೆ ದಂಡ ವಿಧಿಸುವುದು ಬಿಡುವುದು ದೊಡ್ಡ ವಿಚಾರವಲ್ಲ.
ಒಬ್ಬ ನೌಕರ ವಾರದಲ್ಲಿ ಒಂದೇ ಕಡತವನ್ನು ವಿಲೇವಾರಿ ಮಾಡುವ ವ್ಯವಸ್ಥೆ ಇದೆ ಎಂದರೇನರ್ಥ ? ಜಯಚಂದ್ರ ಸಮಿತಿಗೆ ಸಿಕ್ಕಿರುವ ಮಾಹಿತಿಯಂತೆ ಸುಮಾರು 73000 ಕಡತಗಳು ವರ್ಷದಿಂದ ವಿಲೇವಾರಿಯಾಗದೇ ಹಾಗೇ ಉಳಿದಿವೆಯಂತೆ. 1980 ರ ದಶಕದಲ್ಲಿ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಎಲ್ಲಾ ಕಾರ್ಯಾಲಯಗಳಲ್ಲೂ ಕಡತಯಜ್ಞ ನಡೆದಿತ್ತು. ಈಗ ಸರಕಾರದ ಜವಾಬ್ದಾರಿಯೂ ಹೆಚ್ಚಿದೆ. ನೌಕರರು ಮಾಡಲೇ ಬೇಕಾದ ಕೆಲಸದ ಹೊಣೆಯೂ ಹೆಚ್ಚಿದೆ. ಆದರೆ ಕೆಲಸ ಮಾತ್ರ ನಡೆಯುತ್ತಿದ್ದಂತೆ ಕಂಡು ಬರುತ್ತಿಲ್ಲ.
ಒಂದು ಕಡತ ಅಥವಾ ಮನವಿ ಅಥವಾ ಅರ್ಜಿ ಸರ್ಕಾರಿ ಕಾರ್ಯಾಲಯಕ್ಕೆ ಬಂದಾಗ, ಅದನ್ನು ಯಾವ ರೀತಿ ವಿಲೇವಾರಿ ಮಾಡಬಹುದು ಎನ್ನುವ ಅಂಶವನ್ನು ಗಮನಿಸದೇ, ಆ ಕಡತದ ಹಿಂದೆ ಯಾರು ಬರ್ತಾರೆ ಎಂದು ಎದುರು ನೋಡುವ ಪ್ರವೃತ್ತಿ ಕಂಡು ಬರುತ್ತಿದೆ. ಜಯಚಂದ್ರ ಸಮಿತಿ ಬಯಲು ಮಾಡಿರುವ ಅಂಶಗಳು ಕಡಿಮೆ. ಸರ್ಕಾರಿ ನೌಕರರ ಸಂಘಟನೆಗಳಿಗೆ ಇನ್ನೂ ಹೆಚ್ಚು ವಿಚಾರಗಳು ಗೊತ್ತಿರುತ್ತವೆ. ಇಡೀ ಸಮಾಜ ಈ ಜೋಬದ್ರತನವನ್ನು ಒಪ್ಪಿಕೊಂಡಿರುವಂತಿದೆ. ಇಂತಹ ಪರಿಸ್ಥಿತಿ ಕೊನೆಗಾಣಲೇ ಬೇಕು. ಜನತಾಂತ್ರಿಕ ವ್ಯವಸ್ಥೆಯಲ್ಲಿ, ಸರ್ಕಾರ, ಸರ್ಕಾರಿ ನೌಕರರು ಇರುವುದು ಕಾಯಿದೆ ಪಾಲನೆಗಾಗಿ ಮಾತ್ರ ಎನ್ನುವ ಕಲ್ಪನೆ ಸರಿಯಿಲ್ಲ. ಜನಹಿತಸಾಧನೆಗೆ ಅನುಕೂಲ ವಾಗುವಂತಹ ಆಡಳಿತ ವ್ಯವಸ್ಥೆ, ಸರ್ಕಾರಿ ನೌಕರರ ಸೇವಾ ನಿಯಮಗಳ ಬದಲಾವಣೆ ಈಗಿನ ತುರ್ತು ಅಗತ್ಯ. ಆ ದಿಕ್ಕಿನಲ್ಲಿ ಸರ್ಕಾರ ಮುಂದೆ ಸಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.