ಸಚಿನ್‌ಗೆ ಶುಭವಾಗಲಿ
ಗುರುವಾರ - ಶುಕ್ರವಾರ ಭಾರತೀಯ ಕ್ರಿಕೆಟ್‌ಗೆ ಚಿರಸ್ಮರಣೀಯ ದಿನಗಳು. ದೇಶದ ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಸ್ಥಾಪಿಸಿ, ಭಾರತಕ್ಕೆ ಮರ್ಯಾದೆ ತಂದುಕೊಟ್ಟ ಸಚಿನ್ ತೆಂಡೂಲ್ಕರ್ ಅವರ ಇನ್ನೂರನೇ ಟೆಸ್ಟ್ ಹಾಗೂ ವಿದಾಯ ಪಂದ್ಯದ ದಿನಗಳವು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕಿಕ್ಕಿರಿದಿದ್ದ ಸಚಿನ್ ಅಭಿಮಾನಿಗಳು ಎರಡೂ ದಿನ ಅವರು ಆಡಿದ ಪ್ರತಿಯೊಂದು ಚೆಂಡಿನ ಗತಿಯನ್ನೂ ಕುಣಿದಾಡುತ್ತ ಅನುಭವಿಸಿದರು. ಇಡೀ ಸ್ಟೇಡಿಯಂನಲ್ಲಿ ಸಚಿನ್, ಸಚಿನ್ ಬಿಟ್ಟು ಬೇರೆ ಶಬ್ದವೇ ಇರಲಿಲ್ಲ. ಅವರ ಆಟದಲ್ಲಿ ಹೊಳಪಿತ್ತು. ಅವರ ಅಭಿಮಾನಿಗಳಿಗೆ ಚಿರಪರಿಚಿತವಾದ ಕಲಾತ್ಮಕ ಹೊಡೆತಗಳಿಗೇನೂ ಬರವಿರಲಿಲ್ಲ. ಅವರ ವಿದಾಯ ಟೆಸ್ಟ್‌ನಲ್ಲಿ ಸಚಿನ್ ಶತಕ ಬಾರಿಸಬೇಕೆನ್ನುವುದೇ ಎಲ್ಲರ ಬಯಕೆ. ಆ ಗುರಿಯತ್ತ ಒಂದೊಂದು ರನ್ ಗಳಿಸಿದಾಗಲೂ ಜನ ಧ್ವನಿಯ ಪ್ರಚಂಡ ಭೋರ್ಗರೆತ. ಗುರುವಾರದ ಸಂಜೆಯ ವೇಳೆಗೆ ಸಚಿನ್ 38 ನಾಟ್‌ಔಟ್. ಶುಕ್ರವಾರ ಬೆಳಿಗ್ಗೆ 9-30 ಕ್ಕೇ ಸಚಿನ್ ಹಾಜರ್.
ಎದುರಾಳಿ ವೆಸ್ಟ್ ಇಂಡೀಸ್ ತಂಡದ ವೇಗಿ ಬೌಲರ್‌ಗಳ ಪರಾಕ್ರಮ ಮೆರೆದಿತ್ತು. ಸಚಿನ್ ತೆಂಡೂಲ್ಕರ್, ಬೌನ್ಸರ್‌ಗಳಿಗೆ ವಿಚಲಿತರಾಗದೇ, ಅವರದ್ದೇ ಆದ ವಿಶಿಷ್ಟ ಶೈಲಿಯ ಬ್ಯಾಟಿಂಗ್ ಕೌಶಲವನ್ನು ಮೆರೆದಿದ್ದೂ ಆಯಿತು. ಸಚಿನ್-50. ಐವತ್ತು ರನ್‌ಗಳನ್ನು ಪೇರಿಸಿದಾಗ, ಇನ್ನೇನು ಶತಕದ ಸಾಧನೆಯ ಅರ್ಧದಾರಿ ಸವೆಸಿದಂತೆಯೇ ಆಗಿತ್ತು. ಸಚಿನ್-70 ಜನರ ಸಾಮೂಹಿಕ ಚಪ್ಪಾಳೆ ಆರಂಭ. ಇನ್ನೇನು ಗುರಿ ಮುಟ್ಟುವುದು ಕಷ್ಟವಲ್ಲ ಎನ್ನುವ ಭಾವನೆ. ದಿನದ ಹೀರೋ ಕೂಡಾ ಅದೇ ರೀತಿ ವರ್ತಿಸಿದರು. ಆತುರ ಪಡಲಿಲ್ಲ. ಅವಕಾಶ ಸಿಕ್ಕಿದಾಗ ಬಾರಿಸುವುದನ್ನು ಬಿಡಲಿಲ್ಲ. ಒಂದು ಕ್ಷಣವೂ ಎಚ್ಚರ ತಪ್ಪಲಿಲ್ಲ. ಅಭಿಮಾನಿಗಳೂ ಅಷ್ಟೇ ನಿರಂತರವಾಗಿ ಎಚ್ಚರದಿಂದಲೇ ಇದ್ದರು.
ಸಚಿನ್ 74 ರನ್ ದಾಖಲಿಸಿದಾಗ ಆಟ ಕೈಕೊಟ್ಟಿತ್ತು. ಸ್ಲಿಪ್‌ನಲ್ಲಿ ಕ್ಯಾಚ್. ಸಚಿನ್ ಔಟ್. ಇಡೀ ವಾಂಖೆಡೆ ಸ್ಟೇಡಿಯಂನಲ್ಲಿ ಮೌನ. ಸಚಿನ್ ಕ್ರೀಸ್‌ನಲ್ಲೇ ಒಂದು ಸೆಕೆಂಡ್ ನಿಂತರು. ಕೊನೆಯ ಆಟ ಮುಗಿದಿತ್ತು. ನಿಧಾನವಾಗಿ ಸಚಿನ್ ತೆಂಡೂಲ್ಕರ್ ವಿಶಾಲವಾದ ಮೈದಾನದಲ್ಲಿ ಏಕಾಂಗಿಯಾಗಿ ಟೆಸ್ಟ್ ಕ್ರಿಕೆಟ್‌ನಿಂದ ನಿರ್ಗಮಿಸುವ ವೈಖರಿಯಲ್ಲೇ ನಡೆದು ಹೋದರು. ಆ ವೇಳೆಗೆ ಅಭಿಮಾನಿಗಳೂ ತಮ್ಮ ಹತಾಶೆಯನ್ನು ಬದಿಗೊತ್ತಿ ಅತಿ ಉತ್ಸಾಹದಿಂದ "ಥ್ಯಾಂಕ್ಯೂ ಸಚಿನ್" ಧ್ವನಿಯನ್ನು ಮೊಳಗಿಸಿದರು.
ಅಲ್ಲಿಗೆ 1989 ರಲ್ಲಿ ಕರಾಚಿಯಲ್ಲಿ ಆರಂಭವಾದ ಸಚಿನ್ ತೆಂಡೂಲ್ಕರ್ ಅವರ ಇಪ್ಪತ್ನಾಲ್ಕು ವರ್ಷಗಳ ಸುದೀರ್ಘ ಬ್ಯಾಟಿಂಗ್ ಮಹಾಪ್ರಗಾಥ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಗಿದಿತ್ತು. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನ ನಭೋಮಂಡಲದಿಂದ ಪ್ರಕಾಶಮಾನ ಮಹಾತಾರೆ ನಿರ್ಗಮಿಸಿತ್ತು.
ಸಚಿನ್ ತೆಂಡೂಲ್ಕರ್ ಭಾರತವಷ್ಟೇ ಯಾಕೆ ಕ್ರಿಕೆಟ್ ಪ್ರಪಂಚ ಕಂಡ ಅತ್ಯಂತ ಪ್ರತಿಭಾವಂತ. ಅಭಿಮಾನಿಗಳಿಗೆಲ್ಲ ಇಷ್ಟವಾಗುವ ಬ್ಯಾಟ್ಸ್‌ಮನ್. ಅವರ ದಾಖಲೆಗಳಿಗೆ ಲೆಕ್ಕವೇ ಇಲ್ಲ. ಇನ್ನೂ ಟೆಸ್ಟ್ ಆಡುತ್ತಿರುವಾಗಲೇ ದಂತಕತೆಯಾದ ಅದೃಷ್ಟ ಶಾಲಿ.
ಸಚಿನ್ ಇಲ್ಲದ ಭಾರತೀಯ ಕ್ರಿಕೆಟ್‌ನ ಸ್ಥಿತಿಯನ್ನು ಊಹಿಸಿಕೊಳ್ಳುವುದೂ ಕಷ್ಟ. ಆದರೆ ಅವರ ನಿವೃತ್ತಿಯ ಅನಂತರ ಅದು ಅನಿವಾರ್ಯ. ಕಳೆದ ಹಲವು ವಾರಗಳಲ್ಲಿ ಸಚಿನ್ ತೆಂಡೂಲ್ಕರ್ ವಿಚಾರದಲ್ಲಿ ಹಲವು ಪುಸ್ತಕಗಳಿಗಾಗುವಷ್ಟು ಸಾಹಿತ್ಯ ಪ್ರಕಟವಾಗಿದೆ. ಅವರ ಸಂಗಾತಿಗಳು, ಕ್ರೀಡಾ ಪತ್ರಕರ್ತರು, ನಾನಾ ಕ್ಷೇತ್ರಗಳಲ್ಲಿನ ಮಿತ್ರರು ತಮ್ಮ ನೆನಪಿನ ದಾಖಲೆಗಳ ಸುರುಳಿಗಳನ್ನೇ ಬಿಚ್ಚಿಟ್ಟಿದ್ದಾರೆ. ಎಲ್ಲೂ ಒಡಕು ಮಾತಿಲ್ಲ.
ಹೋಗಿ ಬನ್ನಿ ಸಚಿನ್. ಒಳ್ಳೆಯದಾಗಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

