ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯಿಂದ ಪತ್ತಂಗಿ ಹೇಮಲತಾ ಮುರಳಿ ಮಿಂಚಂಚೆ ಕಳುಹಿಸಿದ್ದಾರೆ. 'ನ.25ರ ಪತ್ರಿಕೆಯ ಕ್ರೀಡಾಪುಟದಲ್ಲಿ 'ಟೀಂ ಇಂಡಿಯಾಗೆ ವಿಶಾಖಪಟ್ಟಣ' ಎಂಬ ಸುದ್ದಿಯನ್ನು ಪ್ರಕಟಿಸಿದ್ದೀರಿ. ಸುದ್ದಿಯ ವಿವರಣೆಯ 9ನೇ ಪ್ಯಾರಾದಲ್ಲಿ '......ಆದರೆ, ಅಂತಿಮ 5 ಓವರ್ಗಳಲ್ಲಿ ಆತಿಥೇಯ ತಂಡ 62 ರನ್ ಗಳಿಸಿದ್ದು 295 ರನ್ ಗಡಿದಾಟಲು ನೆರವಾಯಿತು.' ಎಂದಿದೆ. ಆದರೆ ಸ್ಕೋರ್ ವಿವರ ಬಾಕ್ಸ್ ಸುದ್ದಿಯಲ್ಲಿ 'ಭಾರತ 7 ವಿಕೆಟ್ ನಷ್ಟಕ್ಕೆ 288' ಎಂದು ಪ್ರಕಟಿಸಿದ್ದೀರಿ. ಇವೆರಡರಲ್ಲಿ ಯಾವುದು ಸರಿ?' ಎಂದು ಪ್ರಶ್ನಿಸಿದ್ದಾರೆ.
'ಅದೇ ದಿನ 7ನೇ ಪುಟದ ಕಿರುನಗೆ ವಿಭಾಗದಲ್ಲಿ 'ಬೋರಾಗುತ್ತಿದೆಯೇ?' ಎಂಬ ಒಂದು ಹಾಸ್ಯ ಪ್ರಕಟವಾಗಿದೆ. 'ಜೀವನದಲ್ಲಿ ಸ್ವಲ್ಪ ಮಜಾ ಮಾಡಬೇಕು ಎನಿಸುತ್ತಿದೆಯೇ? ಹಾಗಿದ್ದರೆ ಅಪರಿಚಿತರ ಮದುವೆಗೆ ಹೋಗಿ, ಜೋರಾಗಿ ಕೂಗಿ- 'ಮದುವೆ ಆಗಬೇಡ, ನಾನು ಈಗ್ಲೂ ನಿನ್ನ ಪ್ರೀತಿಸ್ತೀನಿ!" ಎಂದು ಬರೆದಿದ್ದೀರಿ. ಸ್ವಾಮಿ ಯಾವುದಾರೂ ತರಲೆ ನೀವು ಕೊಟ್ಟ ಐಡಿಯಾ ಉಪಯೋಗಿಸಿದರೆ ಆಗಬಹುದಾದ ಅನಾಹುತದ ಅರಿವು ನಿಮಗಿದೆಯೇ? ಇಂತಹ ಕುಚೋದ್ಯದ ಕಿರುನಗೆಗಳು ಪತ್ರಿಕೆಗೆ ಖಂಡಿತ ಶೋಭೆ ತರಲಾರವು. ಪ್ರಕಟಿಸುವ ಮುನ್ನ ದಯವಿಟ್ಟು ಎರಡು ಬಾರಿ ಯೋಚಿಸಿ. ಪತ್ರಿಕೆಯ ಮೇಲಿನ ಪ್ರೀತಿಯಿಂದ ಈ ಪತ್ರ ಬರೆಯುತ್ತಿದ್ದೇನೆ' ಎಂದು ಹೇಳಿದ್ದಾರೆ.
ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಗಳಿಸಿದ್ದು 288 ರನ್. ಕ್ರೀಡಾ ವರದಿಗಾರರು ಸುದ್ದಿ ಬರೆಯುವ ಆತುರದಲ್ಲಿ 7 ರನ್ ಅನ್ನು ಕೈನಿಂದ ಸೇರಿಸಿದ್ದಾರೆ. ಅಷ್ಟೇ ರನ್ ಗಳಿಸಿದ್ದರೆ ಭಾರತ ಪಂದ್ಯ ಗೆಲ್ಲುವ ಸಾಧ್ಯತೆಯೂ ಇತ್ತು!
ಓದುಗರ ಮುಖದಲ್ಲಿ ನಗೆ ತರಿಸಲೆಂದೇ ನಮ್ಮ ಪತ್ರಿಕೆಯಲ್ಲಿ 'ಕಿರುನಗೆ' ಪ್ರಕಟವಾಗುತ್ತದೆ. 'ಬೋರಾಗುತ್ತಿದೆಯೇ?' ಎಂಬ ಹಾಸ್ಯವು ಕೂಡ ಓದುಗರಲ್ಲಿ ಆತಂಕ ಮೂಡಿಸಲು ಪ್ರಕಟಿಸಿದ್ದಲ್ಲ. ಇದನ್ನು ಕೇವಲ ನಗೆ ಪ್ರಸಂಗವಾಗಷ್ಟೇ ಸ್ವೀಕರಿಸಿ. ಈ ತರಲೆ ಆಲೋಚನೆಯನ್ನು ನೀವು ಓದಿದ ತಕ್ಷಣ, ಮೊದಲು ನಗು ಬರುತ್ತದೋ ಅಥವಾ ಯಾರದ್ದೋ ಮನೆ ಹಾಳು ಮಾಡಬೇಕು ಎಂದು ಅನಿಸುತ್ತದೆಯೋ? ಹಾಸ್ಯಗಳಿರುವುದು ವಿಡಂಬನೆಗಲ್ಲ, ಕೇವಲ ಮನಸ್ಸಿನ ಸಂತೋಷಕ್ಕೆ. ಹಾಸ್ಯವನ್ನೂ ಗಂಭೀರವಾಗಿ ತೆಗೆದುಕೊಂಡರೇ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ.
ನವೆಂಬರ್ 1ರ 9ನೇ ಪುಟದಲ್ಲಿ ಲೇಖಕ ಬಸವರಾಜ್ ಹುಡೇದಗಡ್ಡಿ ತಾವು ಮಾಡಿರುವ ತಪ್ಪಿಗೆ ವಿವರಣೆ ನೀಡಿ ಪತ್ರ ಬರೆದಿದ್ದಾರೆ. "ಕನ್ನಡ ಸಮಗ್ರ ಸಾಹಿತ್ಯ ರಿಯಾಯಿತಿ ದರದಲ್ಲಿ ಒದಗಿಸಿ' ಎಂದು ನಾನು ಬರೆದ ಲೇಖನ ಪ್ರಕಟವಾಗಿದೆ. ಅದರ ನಾಲ್ಕನೇ ಪ್ಯಾರಾದಲ್ಲಿ '.......ಸಂದರ್ಭದಲ್ಲಿ ಕೇವಲ 100 ಪುಸ್ತಕಗಳ....' ಎಂದು ಬರೆಯುವ ಬದಲಾಗಿ ".......ಸಂದರ್ಭದಲ್ಲಿ ಕೇವಲ 100 ಪುಟಗಳ....' ಎಂದು ಪ್ರಕಟವಾಗಿ ಲೇಖನದ ಅರ್ಥವನ್ನೇ ಅಪಾರ್ಥವಾಗುತ್ತದೆ. ಆದ್ದರಿಂದ ನಾನೇ ಈ ವಿವರಣೆ ಕೊಡುತ್ತಿರುವೆ' ಎಂದು ಹೇಳಿದ್ದಾರೆ.
-ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

