ಸಕ್ಕರೆ ಉದ್ಯಮದ ಬವಣೆ
ದೇಶದಲ್ಲಿ ಕೃಷಿ ಉತ್ಪನ್ನವನ್ನು, ವಾಣಿಜ್ಯ ವಸ್ತುವನ್ನಾಗಿ ಪರಿವರ್ತಿಸುವ ಬಹುದೊಡ್ಡ ಉದ್ಯಮ ಎಂದರೆ ಸಕ್ಕರೆಯ ಉದ್ಯಮ. ಪ್ರತಿ ವರ್ಷ ಕಬ್ಬು ಅರೆಯುವ ಸಮಯದಲ್ಲಿ ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಕೊಡಬೇಕಾದ ಬೆಲೆಯ ನಿಗದಿಯ ವಿಚಾರದಲ್ಲಿ ವಾದ-ವಿವಾದ ಇದ್ದಿದ್ದೇ.
ಆದರೆ ಈ ವರ್ಷ ಅದು ಆಂದೋಲನದ ಸ್ವರೂಪವನ್ನೇ ಪಡೆದುಕೊಂಡಿದೆ. ಉತ್ತರ ಪ್ರದೇಶದಲ್ಲಿ ಅರವತ್ತು ಖಾಸಗಿ ಕಂಪೆನಿಗಳು ಇನ್ನೂ ಕಬ್ಬನ್ನು ಅರೆಯುವ ಕೆಲಸವನ್ನು ಆರಂಭಿಸಿಲ್ಲ. ಒಂದು ರೀತಿಯ ಅಘೋಷಿತ ಮುಷ್ಕರ ಅದು. ಅಲ್ಲಿ ನಿರ್ಧಾರವಾಗಿರುವ ರಾಜ್ಯ ಸರ್ಕಾರದ ಸಲಹಾ ಬೆಲೆ ಕ್ವಿಂಟಾಲಿಗೆ 2800 ರುಪಾಯಿ. ಕರ್ನಾಟಕದಲ್ಲಿ ಕಬ್ಬಿನ ಬೆಲೆಯನ್ನು ಕ್ವಿಂಟಾಲಿಗೆ 2500 ರುಪಾಯಿಗಳೆಂದು ಸರ್ಕಾರ ನಿರ್ಧರಿಸಿದ್ದರೂ, (ಅದೂ ಸಲಹಾ ಬೆಲೆಯೇ) ಅನೇಕ ಕಂಪೆನಿಗಳು 2000 ರುಪಾಯಿಗಿಂತ ಹೆಚ್ಚು ಬೆಲೆಯನ್ನು ಕೊಡಲು ಸಿದ್ಧವಿಲ್ಲ. ಉತ್ತರ ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯೇ (ಅದು ಅತಿದೊಡ್ಡ ಜಿಲ್ಲೆ ಕೂಡಾ) ಸಕ್ಕರೆ ಉದ್ಯಮದ ಕೇಂದ್ರ. ಈಗ ಅಲ್ಲೇ ರಾಜ್ಯದ ವಿಧಾನ ಮಂಡಲದ ಅಧಿವೇಶನವೂ ನಡೆಯುತ್ತಿರುವುದರಿಂದ ಕಬ್ಬು ಬೆಳೆಗಾರರ ಸಂಘಟನೆಗಳು ದೊಡ್ಡ ರೀತಿಯಲ್ಲೇ ಪ್ರದರ್ಶನ - ಹೋರಾಟ ನಡೆಸುತ್ತಿವೆ. ಮಹಾರಾಷ್ಟ್ರದಲ್ಲೂ ಆಂದೋಲನ ನಡೆದಿದೆ. ರಾಜ್ಯ ಸರ್ಕಾರ ಕಬ್ಬಿಗೆ ಬೆಲೆ ನಿಗದಿಪಡಿಸುವ ಅಧಿಕಾರವನ್ನು ಚಲಾಯಿಸಿ, ಇನ್ನೊಂದು ಕಡೆ ಕಾರ್ಖಾನೆಗಳು ನಿರ್ದಿಷ್ಟ ಪ್ರಮಾಣದಲ್ಲಿ ಸಕ್ಕರೆಯನ್ನು ಸರ್ಕಾರಕ್ಕೆ ಅಗ್ಗದ ದರದಲ್ಲಿ ಒದಗಿಸಬೇಕೆಂದು ಹೇಳುತ್ತಿರುವುದು, ಕಾರ್ಖಾನೆಗಳನ್ನು ಎರಡೂ ಕಡೆಗಳಿಂದಲೂ ಏಕಕಾಲದಲ್ಲೇ ಹೊಡೆದಂತೆ ಆಗುತ್ತಿದೆ ಎನ್ನುವುದರಲ್ಲಿ ಹುರುಳಿದೆ. ಬಡವರ್ಗಗಳ ಜನರಿಗೆ ರಿಯಾಯಿತಿ ದರದಲ್ಲಿ ಸಕ್ಕರೆಯನ್ನು ವಿತರಿಸುವ ಉದ್ದೇಶ ಒಳ್ಳೆಯದೇ ಆದರೂ, ಆ ಸಬ್ಸಿಡಿಯ ಹೊರೆಯನ್ನು ಭಾಗಶಃ ಕಾರ್ಖಾನೆಗಳ ಮೇಲೆ ಹೊರಿಸುವುದು ಎಷ್ಟರಮಟ್ಟಿಗೆ ಸರಿ? ಸರ್ಕಾರದ ಸಬ್ಸಿಡಿಯನ್ನು ಸರ್ಕಾರವೇ ತನ್ನ ಸಂಪನ್ಮೂಲಗಳಿಂದಲೇ ಪೂರೈಸಬೇಕು. ರೈತರಿಗೆ ನ್ಯಾಯವಾದ ಬೆಲೆ ಸಿಗಬೇಕು. ಅಂತಹ ಸೂತ್ರ ಈಗ ಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

