ತಪ್ಪಾಯ್ತು ತಿದ್ಕೋತೀವಿ
ಚೀನಾದ ಚಾಂಗ್ ಝೌನಿಂದ ದೀಪಕ್ ಜೆ.ಕೆ ಮಿಂಚಂಚೆ ಕಳುಹಿಸಿದ್ದಾರೆ. 'ಮಾನ್ಯರೇ ನಾವು ಚಿಕ್ಕಂದಿನಿಂದ 'ಕಬ್ಬಿಗ' ಎಂದರೆ 'ಕವಿ' ಎಂದು ತಿಳಿದಿದ್ದೇವೆ. ಇತ್ತೀಚೆಗೆ ಶೀರ್ಷಿಕೆಗಳ ಭರಾಟೆಯಲ್ಲಿ ತಾವು ಪದೇಪದೆ ಕಬ್ಬು ಬೆಳೆಗಾರರನ್ನು 'ಕಬ್ಬಿಗ'ರೆಂದು ಕರೆಯುತ್ತಿದ್ದೀರಿ. ಈ ತರಹದ ಬಳಕೆ, ಇಂದು ಭಾಷೆ ಅಭ್ಯಸಿಸುತ್ತಿರುವ ಕಿರಿಯ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಬಹುದು. ಅಂತೆಯೇ ಅದರ ಬಳಕೆ ಕೂಡ ಹೆಚ್ಚಾಗಿ ಮುಂದೆ ಎಲ್ಲರೂ ಕಬ್ಬು ಬೆಳೆಗಾರರನ್ನು 'ಕಬ್ಬಿಗ'ರೆಂದೇ ಕರೆಯಬಹುದು. ಜೋಳ ಬೆಳೆಯುವವರು 'ಜೋಳಿಗ'ರಾಗಬಹುದು. ಕನ್ನಡ ಬೆಳೆಯಲು ನೂತನ ಪದಪ್ರಯೋಗ ಹಾಗೂ ಹೊಸ ಪದಗಳ ಆವಿಷ್ಕಾರ ನಿರಂತರವಾಗಿ ನಡೆಯಲಿ. ಇರುವ ಪದಗಳ ಅಪಭ್ರಂಶ ಬೇಡ' ಎಂದು ಹೇಳಿದ್ದಾರೆ.
ದೂರದ ಚೀನಾದಲ್ಲಿದ್ದುಕೊಂಡು 'ಕನ್ನಡಪ್ರಭ'ವನ್ನು ಓದಿ ತಮ್ಮ ಅಭಿಪ್ರಾಯವನ್ನೂ ಕನ್ನಡದಲ್ಲಿಯೇ ಬರೆದು ಕಳುಹಿಸಿರುವುದು ಖುಷಿತಂದಿದೆ. ಇನ್ನು 'ಕಬ್ಬಿಗ' ಪದ ಬಳಕೆಯ ಕುರಿತಂತೆ ಆಕ್ಷೇಪ ಎತ್ತಿದ್ದೀರಿ. ಈ ಹಿಂದೆ ಕಬ್ಬಿಗ ಎನ್ನುವ ಕವಿ ಇದ್ದಿರುವುದು ನಿಜ. ಆದರೆ ಕಬ್ಬು ಬೆಳೆಗಾರರಿಗೆ 'ಕಬ್ಬಿಗ' ಎಂದು ಹೇಳಿದಾಗ ಅದರಲ್ಲಿ ಯಾವುದೇ ಅಪಭ್ರಂಶವಾಗುವುದಿಲ್ಲ. ಇದೊಂದು ಪ್ರಯೋಗವಷ್ಟೆ. ಕನ್ನಡದ ಒಂದು ಶಬ್ದಕ್ಕೆ ಸಾಕಷ್ಟು ಅರ್ಥಗಳಿರುತ್ತವೆ, ಹಾಗೆಯೇ ಕಬ್ಬು ಬೆಳೆಗಾರರಿಗೆ 'ಕಬ್ಬಿಗ' ಎಂದು ಬಳಸಿದರೆ ತಪ್ಪಾಗಲಾರದು ಎಂದು ಭಾವಿಸಿ ಪ್ರಕಟಿಸಿದ್ದೇವೆ.
ಬೆಂಗಳೂರಿನಿಂದ ಡಾ.ಹೊಸ್ಕೆರೆ ಎಸ್.ಸುರೇಶ್ ಅವರು ಸದನದ ಬಾವಿ ಶಬ್ದ ಬಳಕೆ ಬಗ್ಗೆ ಆಕ್ಷೇಪ ಎತ್ತಿ ಮಿಂಚಂಚೆ ಕಳುಹಿಸಿದ್ದಾರೆ. ""The poet lived in utter penury' ಎನ್ನುವುದನ್ನು 'ಕವಿ ಉತ್ತರ ಪೆನುರಿಯಲ್ಲಿ ವಾಸಿಸುತ್ತಿದ್ದನು' ಎಂದು ಭಾಷಾಂತರಿಸಿ ಉಪನ್ಯಾಸಕರು ಪಾಠ ಮಾಡುತ್ತಿದ್ದರು ಎನ್ನುವುದು ಹಳೆಯ ಜೋಕು. ಹಾಗೆಯೇ ಲೈಂಗಿಕ ಅಪರಾಧವೊಂದರ ವಿಚಾರಣೆ ಸಂದರ್ಭದಲ್ಲಿ "The court ordered the enquiry to be held in-camera' ಎಂಬುದನ್ನು 'ವಿಚಾರಣೆಯನ್ನು ಕ್ಯಾಮರಾ ಮುಂದೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತು' ಎಂದು ಕನ್ನಡ ಪತ್ರಿಕೆಯೊಂದರಲ್ಲಿ ಮುದ್ರಣ ಆಗಿದ್ದನ್ನೂ ಓದಿದ್ದೇನೆ. ಹಾಗೆಯೇ ಶಾಸನಸಭೆ ಅಧಿವೇಶನ ಪ್ರಾರಂಭವಾಗಿದೆ. ಸದಸ್ಯರು ಸದನದ 'ಬಾವಿ'ಗೆ ನುಗ್ಗುತ್ತಾರೆ. ಆದರೆ ಆಂಗ್ಲ ಭಾಷಾ ಪತ್ರಿಕೆಗಳಲ್ಲಿ ಬರುವ "the irate members went into the well of the house' ಎನ್ನುವುದಾಗಲಿ "the speaker objected to the members going to the well too often' ಅಂದಿದ್ದನ್ನಾಗಲಿ 'ಸದನದ ಬಾವಿ' ಎಂದು ಕನ್ನಡ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ಮತ್ತು ಶಾಸಕರೇ ನೇರ ಭಾಷಾಂತರ ಮಾಡಿಬಿಟ್ಟರೇ ಹೇಗೆ? ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸಂಪಾದಿಸಿರುವ 'ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು'ವಿನಲ್ಲಿ 'ಶಾಸನಸಭೆಗಳಲ್ಲಿ ಅಧ್ಯಕ್ಷರ ಮುಂದಿರುವ ಸದಸ್ಯ ಪೀಠಗಳಿಂದ ಸುತ್ತಲ್ಪಟ್ಟ ಸಮತಳದ ಕುಳಿ' ಎಂಬರ್ಥದ ವಿವರಣೆ ನೀಡಿದೆ. ಆಕ್ಸ್ಫರ್ಡ್ ಡಿಕ್ಷನರಿಯು ಇದಕ್ಕೆ "railed space in a lawcourt' ಎಂದೂ ಅರ್ಥೈಸಿದೆ. ಹೀಗಾಗಿ ಕನ್ನಡದ 'ಕಟಕಟೆ' ಪದವು ಸದನದ ಬಾವಿಗೆ ಪರ್ಯಾಯ ಪದವಾಗುತ್ತದೆ' ಎಂದು ತಿಳಿಸಿದ್ದಾರೆ.
ಆರೋಪಿಗಳು ಅಥವಾ ಕಕ್ಷಿದಾರರು ಕೋರ್ಟ್ನಲ್ಲಿ ನ್ಯಾಯಾಧೀಶರ ಮುಂದೆ ನಿಲ್ಲುವುದಕ್ಕೆ 'ಕಟಕಟೆ' ಎನ್ನುತ್ತಾರೆ. ಇನ್ನು ಸದನದಲ್ಲಿ ಹಕ್ಕು ಚ್ಯುತಿ ಮಂಡನೆಯಾದಾಗ ಆರೋಪಿಗಳನ್ನು 'ಕಟಕಟೆ'ಯಲ್ಲಿಯೇ ವಿಚಾರಣೆ ನಡೆಸುತ್ತಾರೆ. ಆದ್ದರಿಂದ ಸದನದ ಬಾವಿಗೆ ಕಟಕಟೆ ಎಂದು ಕರೆಯುವುದು ಬಾಲಿಶವಾಗುತ್ತದೆ. 'ಸದನದ ಬಾವಿ' ಬಳಕೆ ಸಮರ್ಪಕವಾಗಿದೆ. ಸಭಾಧ್ಯಕ್ಷರು ಹಾಗೂ ಸಭಾಪತಿ ಕೂಡ ಹೀಗೆಯೇ ಬಳಸುತ್ತಾರೆ. ಸುರೇಶ್ ಅವರು ನೀಡಿದ ಎಲ್ಲ ಉದಾಹರಣೆಗಳ ತರಹ "well of the house' ಅನ್ನು ಭಾಷಾಂತರಿಸಿಲ್ಲ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

