ವಿಳಂಬ ರಾಕ್ಷಸನ ಪ್ರತಾಪ
ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದಾಗಲೇ, ಕಬ್ಬು ಬೆಳೆಯುವ ರೈತರ ಸಂಘಟನೆಗಳು ಕಬ್ಬಿನ ಬೆಲೆ ನಿರ್ಧಾರದ ಪ್ರಕ್ರಿಯೆಯ ವಿಳಂಬವನ್ನು ಪ್ರತಿಭಟಿಸಿ ಪ್ರದರ್ಶನ ನಡೆಸುವ ನಿರ್ಧಾರ ಪ್ರಕಟವಾದಾಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಅಧಿವೇಶನಕ್ಕೆ ಮುಂಚೆಯೇ ರಾಜ್ಯ ಸಲಹಾ ಬೆಲೆಯನ್ನು ಪ್ರಕಟಿಸಬೇಕಾಗಿತ್ತು.
ಕಬ್ಬಿನ ಬೆಲೆಯನ್ನು ಒಂದು ವರ್ಷ ಇರುವಾಗಲೇ ಪ್ರಕಟಿಸಬೇಕೆನ್ನುವ ಸಲಹೆ ಹಳೆಯದು. ಆಗ ಸರ್ಕಾರ ಪ್ರಕಟಿಸಿದ ಬೆಲೆ ಲಾಭದಾಯಕವಾದದ್ದಲ್ಲ ಎನಿಸಿದರೆ, ರೈತರಿಗೆ ಬೇರೆ ಬೆಳೆಯನ್ನು ಬೆಳೆದುಕೊಳ್ಳುವ ಅವಕಾಶ ಸಿಗುತ್ತದೆ ಎನ್ನುವುದೇ ಈ ಸಲಹೆಯ ಹಿಂದಿರುವ ಉದ್ದೇಶ. ಈಗ ವರ್ಷದ ಹಿಂದೆ ಬೆಲೆ ಪ್ರಕಟವಾಗುವ ಮಾತು ಹಾಗಿರಲಿ, ಕಬ್ಬು ಕಟಾವಿಗೆ ಬಂದಾಗಲೂ ಬೆಲೆಯ ನಿಗದಿಯಾಗದೇ ಇರುವ ಪರಿಸ್ಥಿತಿ ಇದೆ. ಅದಕ್ಕೆ ಕಾರಣಗಳು ಹಲವಾರು. ಆದರೆ ಯಾವ ಕಾರಣವೂ ಸಮರ್ಥನೀಯವಲ್ಲ.
ಈಗೀಗ ಕಬ್ಬಿನ ಬೆಲೆ ನಿಗದಿಗೆ ವೈಜ್ಞಾನಿಕವಾದ ಆಧಾರವಿರಬೇಕೆನ್ನುವ ವಾದಕ್ಕೆ ಹೆಚ್ಚು ಬೆಂಬಲ ಸಿಗುತ್ತಿದೆ. ಈಗಲೂ ಅಂತಹ ಆಧಾರವಿದೆ. ಆದರೆ ಅದನ್ನು ಸಂಬಂಧಪಟ್ಟ ಆಸಕ್ತ ಹಿತಗಳು ಸಕಾಲದಲ್ಲಿ ಪ್ರಚಾರ ಮಾಡುವುದಿಲ್ಲ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ ಬೆಲೆಯ ನಿಗದಿಗೆ ಒಂದು ವ್ಯವಸ್ಥೆ ಇದೆ. ಸರ್ಕಾರ ನೇಮಿಸುವ ತಜ್ಞರ ಸಮಿತಿ, ಆ ವರ್ಷದ ಕೃಷಿವಲಯದ ಸ್ಥಿತಿಗತಿಗಳ ಅಧ್ಯಯನದ ಆಧಾರದ ಮೇಲೆ ಸರ್ಕಾರಕ್ಕೆ ಬೆಲೆಯನ್ನು ಸಲಹೆ ಮಾಡುತ್ತದೆ. ಸಾಮಾನ್ಯವಾಗಿ ಕೇಂದ್ರ ಸರ್ಕಾರ ಆ ಬೆಲೆಯನ್ನು ಪ್ರಕಟಿಸಿದರೂ ಸಂಪ್ರದಾಯದಂತೆ, ರಾಜ್ಯ ಸರ್ಕಾರಗಳು ತಮ್ಮ ವಿಶೇಷ ಪರಿಸ್ಥಿತಿಯನ್ನು ಗಮನಿಸಿ, ರಾಜ್ಯ ಸಲಹಾ ಬೆಲೆಯನ್ನು ಪ್ರಕಟಿಸಬೇಕು.
ಇಲ್ಲೇ ಬರುವುದು ತಕರಾರು. ವೈಜ್ಞಾನಿಕ ಅಧ್ಯಯನ ಆಧಾರದ ಮೇಲೆ ಬೆಲೆ ನಿಗದಿಪಡಿಸುವ ಮಾತು ಈ ಹಂತದಲ್ಲಿ ಅರ್ಥಹೀನ, ಇಲ್ಲಿ ಪರಿಗಣನೆಗೆ ಬರುವುದು ಲಾಬಿಗಳ ಪ್ರಭಾವ ಹಾಗೂ ಅಪ್ಪಟ ರಾಜಕೀಯ. ಕಬ್ಬಿನ ಬೆಲೆ ನಿಗದಿ ಮಾಡಿದ ಕೂಡಲೇ ಅದು ಕಾರ್ಖಾನೆಯ ಅಂಗಳಕ್ಕೆ ಬಂದು ಬೀಳುವುದಿಲ್ಲ. ಕೆಲವು ರೈತರು ಬೇಗ ಕಟಾವು ಮುಗಿಸುತ್ತಾರೆ. ಕೆಲವರು ನಿಧಾನಸ್ಥರೂ ಇರುತ್ತಾರೆ. ಕಟಾವು ಸಮಯದಲ್ಲಿ ಕೂಲಿಗಳ ವೇತನವೂ ಹೆಚ್ಚು. ಈಗ ಕಬ್ಬು ಬೆಳೆಗಾರರ ಮಾತನ್ನು ನಂಬುವುದಾದರೆ, ಸರ್ಕಾರ ಬೆಲೆಯನ್ನು ನಿಗದಿಪಡಿಸುವಾಗ ಹಿಡಿಯುವ ಕೂಲಿ ಲೆಕ್ಕಕ್ಕೂ, ವಾಸ್ತವದಲ್ಲಿ ಗದ್ದೆಯ ಅಂಚಿನಲ್ಲಿ ಕೊಡಬೇಕಾದ ಮೊತ್ತಕ್ಕೂ ವ್ಯತ್ಯಾಸವಿರುತ್ತದೆ.
ಇಷ್ಟಕ್ಕೂ ಕಬ್ಬಿನ ಬೆಲೆ ನಿಗದಿಗೆ ಸಕ್ಕರೆಯ ಇಳುವರಿಯ ಪ್ರಮಾಣವನ್ನು ಗಮನಿಸಲಾಗುತ್ತದೆ. ಅದನ್ನು ಅಳೆಯವುದು ಸುಲಭವಲ್ಲ. ನಿಜವಾಗಲೂ ಬೆಲೆ ನಿಗದಿಯ ಪ್ರಕ್ರಿಯೆ ಸಂಕೀರ್ಣವಾದದ್ದೇ. ಅದನ್ನು ಸರ್ಕಾರ ಗಮನಿಸಿ, ಸರ್ಕಾರದಲ್ಲಿನ ಸಂಬಂಧಪಟ್ಟ ಇಲಾಖೆ ತನ್ನ ಕೆಲಸವನ್ನು ಸಕಾಲದಲ್ಲಿ ಆರಂಭಿಸಬೇಕು.
ನಿಜ. ಇದೆಲ್ಲವೂ ಯಾವ ಕಾಲದಲ್ಲಿ ಬೇಕಾದರೂ ಮಾಡಬಹುದಾದ ಉಪದೇಶವೇ. ಸಹಜವಾಗಿಯೇ ಬೆಲೆ ನಿಗದಿಗೆ ಸಂಬಂಧಿಸಿದಂತೆ ಮಾತುಕತೆ ಆರಂಭವಾದಾಗ ರೈತ ಸಂಘಟನೆಗಳು ವಿಪರೀತ ಬೆಲೆ ಕೇಳುವುದು, ಕಾರ್ಖಾನೆಗಳ ಮಾಲಿಕರು ಬೆಲೆಯನ್ನು ಆದಷ್ಟು ಕಡಿಮೆ ಮಾಡಲು ಪ್ರಯತ್ನಿಸುವುದು ವಾಡಿಕೆ. ಇದರಲ್ಲಿ ಯಾರು ಆ ಕಾಲದಲ್ಲಿ ಹೆಚ್ಚು ಪ್ರಭಾವಿಗಳಾಗಿರುತ್ತಾರೋ ಅವರ ಮಾತೇ ನಡೆಯುವುದು.
"ಭಿನ್ನಾಭಿಪ್ರಾಯಗಳು ತಲೆದೋರಿದಾಗ, ಅದನ್ನು ಪರಿಹರಿಸಿಕೊಳ್ಳಲು ಸಾಧ್ಯವಿರುವಷ್ಟೂ ಪ್ರಯತ್ನಿಸಬೇಕು. ಸಾಮಾನ್ಯವಾಗಿ ಮುಂದೆ ನೋಡೋಣಂತೆ" ಎನ್ನುವ ಮನೋಭಾವ ಈ ಸಂದರ್ಭದಲ್ಲೇ ಮೂಡುವುದು. ಅಂತಿಮ ಹಂತದಲ್ಲಿ ಕಟ್ಟಕಡೆಯ ದಿನಗಳಲ್ಲಿ ರೈತ ಸಂಘಟನೆಗಳ ಪ್ರತಿಭಟನೆ-ಪ್ರದರ್ಶನ ಹಾಗೂ ಖಾಸಗಿ ಕಾರ್ಖಾನೆಗಳು ಕಬ್ಬನ್ನು ಅರೆಯುವ ಕೆಲಸವನ್ನೇ ಆರಂಭಿಸದೇ ಅಘೋಷಿತ ಮುಷ್ಕರ ಹೂಡಿದಾಗಲೇ ಆತುರದಲ್ಲಿ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿದರೆ. ಈ ವರ್ಷ ಇಡೀ ದೇಶದಲ್ಲಿ ಕಂಡು ಬಂದಿರುವ ಪರಿಸ್ಥಿತಿ ಸಹಜ ಪರಿಸ್ಥಿತಿಯೇ ಆದೀತು.
ಈಗ ಉತ್ತರ ಪ್ರದೇಶದಲ್ಲಿ 2800 ರುಪಾಯಿಗಳ ಬೆಲೆಗೆ ರೈತರು ಪಟ್ಟು ಹಿಡಿದಿದ್ದರೆ, ಕಾರ್ಖಾನೆಗಳು ಅದು ಸುತರಾಂ ಸಾಧ್ಯವಿಲ್ಲವೆಂದು ಹಟ ಹಿಡಿದು ಕೂತಿವೆ. ಅಲ್ಲಿ ಕಬ್ಬು ಅರೆಯುವ ಕೆಲಸವೇ ಆರಂಭವಾಗಿಲ್ಲ. ಮಹಾರಾಷ್ಟ್ರದಲ್ಲಿ ಸಕ್ಕರೆಯ ಉತ್ಪಾದನೆಯ ಮೇಲೆ ಭದ್ರ ಹಿಡಿತವನ್ನೇ ಸಾಧಿಸಿರುವ ಸಹಕಾರ ಆಂದೋಲನ ವಿಶಿಷ್ಟವಾದ ಸಮಸ್ಯೆಯನ್ನೇ ನಿರ್ಮಿಸಿದೆ. ಅಲ್ಲೂ ಕಬ್ಬು ಅರೆಯುವ ಕೆಲಸ ಆರಂಭವಾಗಿಲ್ಲ.
ಕರ್ನಾಟಕದಲ್ಲಿ ರಾಜ್ಯ ಸರ್ಕಾರ 2500 ರುಪಾಯಿಗಳ ಬೆಲೆಯನ್ನು ನಿಗದಿಪಡಿಸಿದ್ದನ್ನು ರೈತ ಸಂಘಟನೆಗಳು ಪ್ರತಿಭಟಿಸಿ, ಬೆಳಗಾವಿಯಲ್ಲಿ ದೊಡ್ಡ ರೀತಿಯ ಪ್ರದರ್ಶನವನ್ನೇ ನಡೆಸಿದಾಗ ಸರ್ಕಾರ ಅದನ್ನು ಸ್ವಲ್ಪ ಹೆಚ್ಚಿಸಲು ಮಾರ್ಗೋಪಾಯಗಳನ್ನು ಹುಡುಕುತ್ತಿರುವಾಗಲೇ ಒಬ್ಬ ರೈತ ಭಾಷಣ ಮಾಡಿದ ಅನಂತರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ದುರಂತಘಟನೆ ನಡೆದಿದೆ. ಯಾರೂ ಯಾವ ಸಂದರ್ಭದಲ್ಲೂ ಆತ್ಮಹತ್ಯೆಯನ್ನು ವೈಭವೀಕರಿಸಬಾರದೆನ್ನುವುದು ನಿಜ. ಆದರೆ ಆತ್ಮಹತ್ಯೆಗೆ ಮುಂದಾಗುವವರು, ಅದನ್ನೆಲ್ಲ ಯೋಚಿಸಿ ತಮ್ಮ ನಿರ್ಧಾರವನ್ನು ಕೈಗೊಳ್ಳುವವರಲ್ಲ. ಸರ್ಕಾರ ಕಬ್ಬಿಗೆ 150 ರುಪಾಯಿಗಳಷ್ಟು ಬೆಲೆ ಹೆಚ್ಚಿಸಿರುವುದನ್ನು ಅನಂತರ ಪ್ರಕಟಿಸಿದೆ. ಆ ಪ್ರಕಟಣೆ ಮೊದಲೇ ಹೊರಬಿದ್ದಿದ್ದರೆ, ಈ ಘಟನೆ ತಪ್ಪುತ್ತಿತ್ತೋ ಏನೋ ಗೊತ್ತಿಲ್ಲ.
ಸರ್ಕಾರವೇನೋ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ ಅಪರೂಪದಲ್ಲಿ ಅಪರೂಪ ಎನ್ನುವಂತೆ 10 ಲಕ್ಷ ರುಪಾಯಿಗಳ ಪರಿಹಾರವನ್ನು ಪ್ರಕಟಿಸಿದ್ದು ಬುಧವಾರದ ವಿಶೇಷ ಸನ್ನಿವೇಶದಲ್ಲಿ ತಪ್ಪು ಎನಿಸಲಾರದು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನದ ಸತ್ಯಾಗ್ರಹದ ಸ್ಥಾನದಲ್ಲಿ ಭೂಮಿ ಹಿಡಿದು ಕೂತು ಧರಣಿ ನಡೆಸುವುದನ್ನು ನಿಲ್ಲಿಸುವುದಕ್ಕೆ ಬೇರೆ ಕ್ರಮಗಳಿಂದ ಸಾಧ್ಯವಾಗದೇ ಹೋದಾಗ, ಆತ್ಮಹತ್ಯೆ ಪ್ರಕರಣವೇ ಆ ಕೆಲಸ ಮಾಡಿತು ಎನ್ನುವುದು ವಿಪರ್ಯಾಸವೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

