ಸಂಪಾದಕೀಯ

ತನಿಖೆಗೆ ಮುನ್ನ ಪರವಾನಗಿ

Published On :

ಸಾರ್ವಜನಿಕ ಸೇವಕರ ಮೇಲೆ ಖಾಸಗಿ ದೂರುಗಳು ಬಂದಾಗ, ನ್ಯಾಯಾಲಯಗಳು ತನಿಖೆಗೆ ಆದೇಶ ನೀಡುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ತನಿಖೆಗೆ ಒಪ್ಪಿಗೆ ಕೊಟ್ಟಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕೆಂದು ಸುಪ್ರೀಮ್ ಕೋರ್ಟ್ ಈಚೆಗೆ ಆದೇಶ ನೀಡಿರುವುದು ಸೂಕ್ತವಾಗಿಯೇ ಇದೆ.
ಇದೇನೂ ಹೊಸ ನಿಯಮವಲ್ಲ. ಆದರೂ ಹಲವಾರು ಕಡೆಗಳಲ್ಲಿ ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಪರವಾನಗಿ ಇಲ್ಲದೇನೇ ತನಿಖೆಗೆ ಆದೇಶ ನೀಡಿದ ಪ್ರಕರಣಗಳಿವೆ. ತನಿಖೆಯ ಮುನ್ನ ಪೂರ್ವಾನುಮತಿಯ ಅಗತ್ಯ ಬೇಕಾಗಿಲ್ಲ ಎಂದರೆ, ಸಾರ್ವಜನಿಕ ಅಧಿಕಾರಿಗಳನ್ನು ಬಗೆ ಬಗೆಯ ಆರೋಪಗಳ ಮೇಲಿನ ತನಿಖೆಗೆ ಗುರಿಪಡಿಸುವ ಚಾಳಿಗೆ ಅವಕಾಶ ಮಾಡಿಕೊಟ್ಟಂತೆಯೇ  ಆಗುತ್ತದೆ.
ಅಂತಹ ಕಿರುಕುಳದಿಂದ ಸಾರ್ವಜನಿಕ ಸೇವಕರನ್ನು ರಕ್ಷಿಸಬೇಕಾದ್ದು ಪ್ರಭುತ್ವದ ಕರ್ತವ್ಯ. ಹಾಗೆಂದ ಮಾತ್ರಕ್ಕೇ ಸಾರ್ವಜನಿಕ ಸೇವಕರ ವಿರುದ್ಧದ ಆರೋಪಗಳ ತನಿಖೆಗೆ ಅವಕಾಶವೇ ಇಲ್ಲ ಎಂದೇನೂ ಅಲ್ಲ. ಅದಕ್ಕೆ ಅನುಮತಿ ಬೇಕು ಎನ್ನುವುದಷ್ಟೇ ಸುಪ್ರೀಮ್ ಕೋರ್ಟ್‌ನ ತೀರ್ಪಿನ ಆಶಯ.
ಆದರೆ ಸಾಮಾನ್ಯ ಜನ ಅಧಿಕಾರಿಗಳ ವಿರುದ್ಧ ದೂರು ನೀಡಿ, ಮುಂದಿನ ನ್ಯಾಯಾಲಯದ ಕ್ರಮಕ್ಕೆ ಅನುಮತಿ ಕೇಳಿದಾಗ ಸಂಬಂಧಪಟ್ಟ ಅಧಿಕಾರಿ ಅದನ್ನು ಕಡೆಗಾಣಿಸಬಾರದು. ದೂರು ಬಂದ ಇಂತಿಷ್ಟು ಅವಧಿಯಲ್ಲಿ (ಮೂರು ತಿಂಗಳು) ಅನುಮತಿಯನ್ನು ಕೊಡುವ ಅಥವಾ ತಿರಸ್ಕರಿಸುವ ಆದೇಶವನ್ನು ನೀಡಬೇಕೆನ್ನುವ ನಿಯಮವೂ ಜಾರಿಗೆ ಬರಬೇಕು.
ಒಂದು ವೇಳೆ ಹಿರಿಯ ಅಧಿಕಾರಿ ಅನುಮತಿಯನ್ನು ನಿರಾಕರಿಸಿದರೆ, ದೂರುದಾರರಿಗೆ ಬೇರೆ ಮಾರ್ಗಗಳಿವೆ. ಆದರೆ ಆ ಅಧಿಕಾರಿ ಏನೂ ಹೇಳದೇ ಇದ್ದರೆ ಆಗ ಸಾಮಾನ್ಯ ಪ್ರಜೆ ಅಸಹಾಯಕ. ಆ ಪರಿಸ್ಥಿತಿಗೆ  ಜನರನ್ನು ದೂಡಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.