ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ರಮೇಶ್ ಹೊಸಮನಿ ಅವರು ಬರೆಯುತ್ತಾರೆ- 'ಸೆ.19ರಂದು 'ಕನ್ನಡಪ್ರಭ' ದಿನಪತ್ರಿಕೆಯ 2ನೇ ಪುಟದಲ್ಲಿ 'ಹಫ್ತಾ ವಸೂಲಿ: 7 ರೌಡಿಗಳ ಸೆರೆ' ಶೀರ್ಷಿಕೆಯಲ್ಲಿ ಪ್ರಕಟವಾದ ಸುದ್ದಿಯ 3ನೇ ಪ್ಯಾರಾದಲ್ಲಿ, 'ಅಲ್ಲದೇ ದಾರಿಹೋಕರನ್ನು ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದರು. ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಆರೋಪಿಗಳನ್ನು ಕಂಡು ಪರಾರಿಯಾಗಲು ಯತ್ನಿಸಿದರು ಎಂದು ಬರೆದಿದ್ದೀರಿ. ಇದು ಸರಿಯೇ? ಸರಿಯಾಗಿ ಪ್ಯಾರಾ ಓದಿದ ಮೇಲೆ ಇದು ನನ್ನ ಗಮನಕ್ಕೆ ಬಂದಿದೆ' ಎಂದಿದ್ದಾರೆ.
ಗಸ್ತಿನಲ್ಲಿದ್ದ ಪೊಲೀಸರನ್ನು ನೋಡಿದ ಆರೋಪಿಗಳು ಪರಾರಿಯಾಗಿದ್ದಾರೆ ಎಂದಾಗಬೇಕಿತ್ತು. ಬರೆಯುವಾಗ ವಾಕ್ಯ ರಚನೆಯ ಬಗ್ಗೆ ಗಮನ ಕಡಿಮೆಯಾಗಿದ್ದರಿಂದ ಹೀಗಾಗಿದೆ.
ಮೈಸೂರಿನ ಶಾರದಾದೇವಿ ನಗರದಿಂದ ಎನ್.ಡಿ. ಕಾರಂತ ಅವರು ಬರೆಯುತ್ತಾರೆ- 'ಸೆ.26ರಂದು 'ಕನ್ನಡಪ್ರಭ'ದಲ್ಲಿನ ವಿಶ್ವೇಶ್ವರಭಟ್ಟರ ಲೇಖನ 'ಸಿದ್ದರಾಮಯ್ಯನವರೇ ನಮಗಾಗಿ...'ದಲ್ಲಿನ ವಾಕ್ಯ ಒಂದರಲ್ಲಿ ಹೀಗಿದೆ 'ನಾವು ಭೋಂಗು ಬಿಡುತ್ತಿದ್ದೇವೆ ಅಂತ ಗೇಲಿ ಮಾಡುತ್ತಿದ್ದರು."
'ಇಲ್ಲಿ ಭೋಂಗು ಪದದ ಅರ್ಥ ವ್ಯಾಪ್ತಿ ಏನು? ನನಗೆ ತಿಳಿದಂತೆ ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲ್ತಿ ಇರುವಂಥ ಪದ. ಲೇಖಕರು ಬರೆದಂತೆ ಒಂದು ಗೇಲಿಯ ಪದ. ಆದರೆ ಪೋಲಿ ಪದವೂ ಹೌದು. ಹೆಚ್ಚು ಕಮ್ಮಿ ಇದೊಂದು ದ್ವಂದ್ವಾರ್ಥ ನೀಡುವ ಪದ. ಆದ್ದರಿಂದಲೇ ಈ ಶಬ್ದವನ್ನು ಸಭ್ಯತೆಗೆ ಮೀರಿದ ಪದ ಎಂದು ಪರಿಗಣಿಸಲಾಗುತ್ತದೆ.'
'ಭೋಂಗು ಪದಕ್ಕೆ ಲೊಟ್ಟೆ ಬಿಡು, ಗಪ್ಳಾಸ್, ರೈಲ್ ಬಿಡುವುದು, ಗುಡ್ಡಾಮ್ ಎಂಬ ಸಮಾನಾರ್ಥ ಪದಗಳೂ ಇವೆ. ಮೊಳಕೆ ಬರಲು ಸನ್ನಿಹಿತವಾದ ತೆಂಗಿನಕಾಯಿ ಒಡೆದಾಗ ಅದರೊಳಗೆ ಸಿಗುವ ಸಿಹಿಯಾದ ವಸ್ತು ರಚನೆಗೂ ಭೋಂಗು ಎನ್ನಲಾಗುತ್ತದೆ. ಇವೆಲ್ಲಕ್ಕಿಂತ ಭಿನ್ನವಾಗಿ ಯೋನಿ ಎಂಬ ಅರ್ಥವೂ ಇದೆ. ಬೈಗುಳ ಪದವಾಗಿಯೂ ಇದನ್ನು ಪ್ರಯೋಗಿಸುವುದೂ ಇದೆ. ಲೇಖಕರು ಈ ಬಗ್ಗೆ ಸ್ಪಷ್ಟೀಕರಣವನ್ನಿತ್ತರೆ ಸಮಯೋಚಿತವಾಗಿರುತ್ತದೆ. ದ್ವಂದ್ವ ನಿವಾರಣೆಯಾಗುತ್ತದೆ' ಎಂದಿದ್ದಾರೆ.
ಕಾಲ, ವಾಕ್ಯ ಮತ್ತು ಪ್ರದೇಶಗಳನ್ನು ಅವಲಂಭಿಸಿ ಬಹುತೇಕ ಪದಗಳಿಗೆ ಒಂದಕ್ಕಿಂತ ಹೆಚ್ಚು ಅರ್ಥಗಳಿವೆ. ಎಲ್ಲ ಅರ್ಥವನ್ನೂ ಒಂದೇ ಕಡೆ ಗ್ರಹಿಸಲು ಸಾಧ್ಯವಿಲ್ಲ. ಅದು ಸಾಧುವೂ ಅಲ್ಲ. 'ಭೋಂಗು' ಎಂಬುದಕ್ಕೆ ಎನ್.ಡಿ. ಕಾರಂತ ಅವರೂ ಹೇಳಿರುವಂತೆ ಲೊಟ್ಟೆಬಿಡು, ರೈಲು ಬಿಡುವುದು, ಪೊಕಳೆ ಬಿಡುವುದು ಮುಂತಾದ ಅರ್ಥಗಳಿವೆ. ನಾನು ಇದೇ ಅರ್ಥದಲ್ಲಿ ಬಳಸಿದ್ದು ಎಂಬುದು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗುವಂತಿದೆ.
ವಾಕ್ಯದಲ್ಲಾಗಲಿ, ಲೇಖನದಲ್ಲಾಗಲಿ ಎಲ್ಲೂ ದ್ವಂದಾರ್ಥ ಬರುವಂತೆ ಈ ಶಬ್ದವನ್ನು ಬಳಸಲಾಗಿಲ್ಲ. ಅಂತಹ ವಾಕ್ಯಗಳೂ ಇಲ್ಲ. ಕಾರಂತರು ಹೇಳಿದ ನಂತರವೇ ದ್ವಂದ್ವ ಅರ್ಥ ಟಿಸಿಲೊಡೆದಿದ್ದು. ಆದರೂ ಎನ್.ಡಿ. ಕಾರಂತರಿಗೆ ದ್ವಂದಾರ್ಥದ 'ಭೋಂಗು' ಯಾಕೆ ನೆನಪಾಯಿತೋ ಗೊತ್ತಾಗಲಿಲ್ಲ. ವಾಕ್ಯ ರಚನೆಯನ್ನು ಗಮನಿಸಿದರೆ ಪದದ ಅರ್ಥ ಸ್ಪಷ್ಟವಾಗಿ ಗೋಚರಿಸುವಂತಿದೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

