ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನಿಂದ ಜಯಕೃಷ್ಣ ಅವರು ಬರೆಯುತ್ತಾರೆ- 'ನಿಮ್ಮ ಪತ್ರಿಕೆಯ 'ಪದಯಾತ್ರೆ'ಯನ್ನು ಗಮನಿಸುತ್ತಿದ್ದೇನೆ. ಪದರಂಗ ಅಥವಾ ಯಾತ್ರೆ ಅಂತ ನೀವು ಅಂದುಕೊಂಡಿರುವ ಅಂಕಣದ ಉದ್ದೇಶ ಓದುಗರಲ್ಲಿ ಸರಿಯಾದ ಪದ ಜ್ಞಾನ ಉಂಟು ಮಾಡುವುದಾಗಿರಬೇಕು. ಬರೀ ತಪ್ಪು ತಪ್ಪು ಅರ್ಥ ಕೊಟ್ಟು, ಸರಿ ಉತ್ತರದಲ್ಲೂ ಅದನ್ನೇ ಪ್ರತಿಪಾದಿಸುವುದು ಎಷ್ಟು ಸರಿ?'
'ಪದಯಾತ್ರೆ 280ರಲ್ಲಿ, ಮೇಲಿಂದ ಕೆಳಕ್ಕೆ ಚೌಕ7ರಲ್ಲಿ ಬೆಲೆ ಬಾಳುವ ಕಂಬಳಿಯಲ್ಲಿ ವಜ್ರ ಎಂಬ ಸೂಚನೆ ಕೊಟ್ಟು ಸರಿ ಉತ್ತರದಲ್ಲಿ (23.9.13) ರತ್ನಗಂಬಳಿ ಅಂತ ಕೊಟ್ಟಿದ್ದೀರಿ. ಇದರ ಅರ್ಥ, ರತ್ನಕೋಶದಂತೆ ಚಿತ್ರವನ್ನು ನೇಯ್ದಿರುವ ಬೆಲೆಬಾಳುವ ಕಂಬಳಿ. ವಜ್ರ ಎಲ್ಲಿಂದ ಬಂತು? ಇನ್ನೊಂದು ತಪ್ಪು ಇದರಲ್ಲೇ ಆಗಿದೆ. ಈ ಉತ್ತರದ 3ನೇ ಅಕ್ಷರದಿಂದ ಎಡದಿಂದ ಬಲಕ್ಕೆ (ಚೌಕ 9) ಸರಿ ಉತ್ತರ ಗರುಡಗಂಭ. 'ಗಂ' ಹೋಗಿ 'ಗ' ಮಾತ್ರ ಎಲ್ಲಿಂದ ಬಂತು? ಇಂಥ ತಪ್ಪು ತಪ್ಪು ಪದಯಾತ್ರೆಯಿಂದ ಸುಮ್ಮನೆ ಸಮಯ ವ್ಯರ್ಥವಲ್ಲವೇ?' ಎಂದಿದ್ದಾರೆ.
ಪದಬಂಧ ತುಂಬುವುದೇ ಅದರಲ್ಲಿರುವ ಸವಾಲನ್ನು ಎದುರಿಸುವ ಉದ್ದೇಶದಿಂದ. ಹೀಗಿರುವಾಗ ಅದರಲ್ಲಿ ತಪ್ಪಾದರೆ ಓದುಗರು ತಲೆ ಹಾಳಾಗುವುದು ಸಹಜ. ಕೆಲವು ಸಮಯದ ಹಿಂದೆ ಪದಬಂಧದಲ್ಲಿ ತಪ್ಪಾಗುತ್ತಿರುವ ಕುರಿತು ದೂರುಗಳು ಬಂದಿದ್ದವು. ಅದರ ನಂತರ ಸಾಕಷ್ಟು ಸಮಯ ಯಾವುದೇ ದೂರುಗಳು ಇರಲಿಲ್ಲ. ಪದಬಂಧವನ್ನು ಸಾಧ್ಯವಾದಷ್ಟೂ ಸರಿಯಾಗಿ ಪ್ರಕಟಿಸಲು ಖಂಡಿತ ಪ್ರಯತ್ನಿಸುತ್ತೇವೆ.
ಶಿವಮೊಗ್ಗದಿಂದ ಎಲ್.ಎಂ. ಮಾಧವಶಾಸ್ತ್ರಿ ಅವರು ಬರೆಯುತ್ತಾರೆ- 'ಸೆ.7ರಂದು ಎಚ್.ಎಸ್. ಬಲರಾಮ್ ಅವರ ಲೇಖನದಲ್ಲಿ (ಪುಟ6) 3 ತಪ್ಪುಗಳಿವೆ.
1. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಮೇಶ್ವರ್ರನ್ನು ಮುಖ್ಯಮಂತ್ರಿಯಾಗಿ, ಸಿದ್ದರಾಮಯ್ಯನವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುತ್ತದೆ ಎಂದಿರಬೇಕಾದ್ದು ಉಲ್ಟಾ ಆಗಿದೆ.
2. ಅನಿತಾ ಕುಮಾರಸ್ವಾಮಿ ಬದಲು ಕುಮಾರಸ್ವಾಮಿ ಸ್ಪರ್ಧಿಸಿದಂತೆ ಬರೆಯಲಾಗಿದೆ.
3. ಜೆಡಿಎಸ್ ಮತ್ತು ಬಿಜೆಪಿಗೆ ಪಾಠ ಕಲಿಸಿದ ಮತದಾರರು ಎಂಬಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಎಂದಿದೆ. ಲೇಖನ ಅರೆ ನಿದ್ರೆಯಲ್ಲಿ ರಚಿಸಲಾಗಿದೆಯೇ?' ಎಂದು ಪ್ರಶ್ನಿಸಿದ್ದಾರೆ.
ಖಂಡಿತ ಲೇಖನವನ್ನು ಅರೆನಿದ್ರೆಯಲ್ಲಿ ಬರೆಯಲಾಗಿಲ್ಲ. ಎಚ್.ಎಸ್. ಬಲರಾಮ್ ಅವರು ಇಂಗ್ಲಿಷ್ನಲ್ಲಿ ಲೇಖನ ಬರೆದು ಕಳುಹಿಸುತ್ತಾರೆ. ಅದನ್ನು ಕನ್ನಡಕ್ಕೆ ತರ್ಜುಮೆ ಮಾಡಿ, ಕಂಪ್ಯೂಟರಿಗೆ ಅಳವಡಿಸುವ ಸಂದರ್ಭದಲ್ಲಿ ಈ ತಪ್ಪಾಗಿದೆ. ಸಾಮಾನ್ಯವಾಗಿ ಈ ರೀತಿ ತಪ್ಪಾಗುವುದಿಲ್ಲ. ಇನ್ನು ಮುಂದೆ ಇಂತಹ ತಪ್ಪಾಗದಂತೆ ಎಚ್ಚರ ವಹಿಸಲಾಗುವುದು.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

