ಸಂಪಾದಕೀಯ

ಕೋರ್ಟ್ ತೀರ್ಪೇ ಅಂತಿಮ

Published On :

ಮೇವು ಹಗರಣಕ್ಕೆ ಸಂಬಂಧಿಸಿದಂತೆ ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಬಂಧಿತರಾಗಿದ್ದಾರೆ. ಆದರೆ ಕೋರ್ಟ್ ತೀರ್ಪೇ ಅಂತಿಮವಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹೇಳಿದ್ದಾರಂತೆ! ಇದು ಸಾಮಾನ್ಯ ಜ್ಞಾನವಿರುವ ಜನಸಾಮಾನ್ಯನಿಗೂ ಗೊತ್ತಿರುವ ವಿಷಯ. ಆದರೆ ಭಾರತವನ್ನಾಳಿದ್ದ ಮಾಜಿ ಪ್ರಧಾನಿಗೆ ಈ ಜ್ಞಾನವಿಲ್ಲದಿರುವುದು ವಿಪರ್ಯಾಸ.
ಲಾಲು ಮೇಲ್ಮನವಿ ಸಲ್ಲಿಸಬಹುದು ಎಂದಿದ್ದಾರೆ ಗೌಡರು. ಮೇಲ್ಮನವಿ ಸಲ್ಲಿಸುವುದು ನ್ಯಾಯಾಲಯದಲ್ಲೇ ಅಲ್ಲವೇ? ಪಿಡಬ್ಲೂಡಿ ಕಛೇರಿಯಲ್ಲಿ ಮೇಲ್ಮನವಿ ಸಲ್ಲಿಸಲಾಗುವುದೇ? ಮಾಜಿ ಪ್ರಧಾನಿಯ ಅಮಾಯಕತೆ ಅನುಮಾನ ಮೂಡಿಸುತ್ತದೆ. ಪಾಪ!
ಮೇವು ಹಗರಣದಲ್ಲಿ ಲಾಲು ಕುರಿತಂತೆ ಪ್ರಾಮಾಣಿಕವಾದ ತನಿಖೆಯ ಅಗತ್ಯವಿದೆಯೆಂದಿದ್ದಾರೆ ದೇವೇಗೌಡರು. ಇಡೀ ಪ್ರಕರಣದ ಸತ್ಯಾಸತ್ಯತೆ ತನಗೆ ಗೊತ್ತಿದೆಯೆಂದು ಮಾಜಿ ಪ್ರಧಾನಿಗಳು ಹೇಳಿರುವುದನ್ನು ನೋಡಿದರೆ ದೇವೇಗೌಡರು ಈ ಹಗರಣದ ಪ್ರಮುಖ ಸಾಕ್ಷಿಯಾಗಿ ಸಾಕ್ಷ್ಯ ನುಡಿಯಬಹುದು. ನ್ಯಾಯಾಲಯ ದೇವೇಗೌಡರ ವಿಚಾರಣೆ ಮಾಡಿದರೆ ಲಾಲೂಗೆ ಇನ್ನೂ ಹೆಚ್ಚಿನ ಶಿಕ್ಷೆ ದೊರಕಬಹುದು. ಹಿಂದೆ ಜೈಲಿನಲ್ಲಿದ್ದಾಗ ಲಾಲೂ ಅವರನ್ನು ತಾನು ಭೇಟಿಯಾಗಿದ್ದೇನೆಂದೂ, ಅವರೊಂದಿಗೆ ಚರ್ಚಿಸಿದ್ದೇನೆಂದೂ ದೇವೇಗೌಡರು ತಿಳಿಸಿದ್ದಾರೆ. ದೇವೇಗೌಡರೇ ಲಾಲೂ ಪರ ವಕಾಲತ್ತು ವಹಿಸಿ ಪ್ರಕರಣ ನಡೆಸಿದ್ದರೆ ಲಾಲು ನಿರಪರಾಧಿಯೆಂದು ಸಾಬೀತು ಪಡಿಸುತ್ತಿದ್ದರೋ ಏನೋ! ಹಾಗಾಗಲಿಲ್ಲ. ಇದು ಲಾಲೂ ದೌರ್ಭಾಗ್ಯ.  ಅಧಿಕಾರಿಯೊಬ್ಬರು ನಡೆಸಿದ ತನಿಖೆಯನ್ನಾಧರಿಸಿ ತೀರ್ಪು ನೀಡಲಾಗಿದೆ ಎನ್ನುವ ಮೂಲಕ ದೇವೇಗೌಡರು ನ್ಯಾಯಾಲಯದ ತೀರ್ಪನ್ನೇ ಅನುಮಾನಿಸಿದ್ದಾರೆ, ನಿಂದಿಸಿದ್ದಾರೆ. ಇದು ಅಕ್ಷ್ಯಮ್ಯ ಅಪರಾಧ! ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಯನ್ನು ಅಲಂಕರಿಸಿದ್ದ ದೇವೇಗೌಡರಂತಹವರೇ ನ್ಯಾಯಾಂಗದ ಮೇಲೆ ಅನುಮಾನ-ಅಪಮಾನವಾಗುವಂತಹ ರೀತಿಯಲ್ಲಿ ನಡೆದುಕೊಂಡರೆ, ನ್ಯಾಯಾಂಗದ ಘನತೆಗೆ ಧಕ್ಕೆ ಆಗುವುದಿಲ್ಲವೇ? ಇದು ನ್ಯಾಯಾಂಗ ನಿಂದನೆಯಲ್ಲವೇ? ಇದು ಅಪರಾಧವಲ್ಲವೇ? ಈ ಅಪರಾಧಕ್ಕೆ ಶಿಕ್ಷೆಯಿಲ್ಲವೇ? ಹೌದು! ನ್ಯಾಯಾಲಯವು ಈ ಬಗ್ಗೆ ಕ್ರಮಕೈಗೊಂಡು ತನ್ನ ಘನತೆಯನ್ನು ತಾನೇ ಕಾಪಾಡಿಕೊಳ್ಳಬಹುದೆಂಬ ಆಶಯದೊಂದಿಗೆ ಜನತೆ ನಿಟ್ಟುಸಿರು ಬಿಡಬೇಕಾಗಿದೆ.
- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು

ಉಡುಗೊರೆ ಪರ್ವ
ದೇಶದೆಲ್ಲೆಡೆ ಈಗ ಉಡುಗೊರೆ ಪರ್ವ ಆರಂಭವಾಗಿದೆ. ರಾಜ್ಯಗಳೂ ಮಾತ್ರವಲ್ಲದೇ ಕೇಂದ್ರದಲ್ಲೂ ಇದರದೇ ಭರಾಟೆ. ಯಾವುದೇ ಅಯಾಚಿತ ಉಡುಗೊರೆಗಳು ಭವಿಷ್ಯದಲ್ಲಿ ಅದನ್ನು ಪಡೆಯುವವನ ಹಕ್ಕಾಗಿ ಪರಿಣಮಿಸುತ್ತದೆ. ಮುಂದೆ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ, ಅದನ್ನು ಬಲವಂತವಾಗಿ, ಅನಿವಾರ್ಯವಾಗಿ ಮುಂದುವರೆಸಿಕೊಂಡು ಹೋಗುವ ಬದ್ಧತೆ ಉದ್ಭವವಾಗುತ್ತದೆ. ಆಗ ಆಡಳಿತಗಾರರ ಆದ್ಯತೆ ದೇಶದ ಅಭಿವೃದ್ಧಿಗಿಂತಲೂ ಜನತೆಗೆ ಉಡುಗೊರೆ ಪ್ರದಾನ ಮಾಡುವತ್ತಲೇ ಇರುತ್ತದೆ. ಖಜಾನೆಯ ಹೆಚ್ಚಿನಂಶ ಉಡುಗೊರೆಗೇ ವ್ಯಯವಾಗಿ, ಇನ್ನಿತರ ಆರ್ಥಿಕ ಸಬಲೀಕರಣ ಯೋಜನೆಗಳು ಹಣದ ಕೊರತೆಯಿಂದ ಕುಂಠಿತವಾಗುತ್ತವೆ. ಪ್ರಜಾತಂತ್ರ ವ್ಯವಸ್ಥೆಗೆ ಈ ಉಡುಗೊರೆ ಸಂಸ್ಕೃತಿ ಮಾರಕವಾಗಿದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮಾರಕವಾದ ಈ ಉಡುಗೊರೆ ಪದ್ಧತಿಯನ್ನು ನಿಗ್ರಹಿಸುವುದೇ ಕ್ಷೇಮ.
- ಎನ್.ಡಿ. ಕಾರಂತ, ಮೈಸೂರು


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.