ಮನೆಪಾಠದ ಒಣಪ್ರತಿಷ್ಠೆ
'ಮನೆ ಪಾಠ: ಪಿಡುಗು ತೊಲಗಲಿ' (ಕ.ಪ್ರ. 27/9) ಸಂಪಾದಕೀಯ ಒಂದು ಮಾತನ್ನು ಸ್ಪಷ್ಟಪಡಿಸುತ್ತದೆ. ಮನೆ ಪಾಠ ಅವಶ್ಯಕತೆಯೋ, ಅನಿವಾರ್ಯವೋ ಅಥವಾ ಸ್ಟೆಟಸ್ ಸಿಂಬಲ್ಲೋ? ಮನೆ ಪಾಠ ಎನ್ನುವುದು ಕೇವಲ ಉನ್ನತ ಶಿಕ್ಷಣಗಳಿಗಷ್ಟೇ ಸೀಮಿತವಾಗಿರದೆ, ಒಂದನೆಯ ತರಗತಿಯ ಪುಟ್ಟ-ಪುಟ್ಟ ಬಾಲಕರನ್ನೂ ಪೀಡಿಸುತ್ತಿರುವುದು ಮರುಕ ಹುಟ್ಟಿಸುತ್ತದೆ. ಇನ್ನು ಬೋರ್ಡ್ ಪರೀಕ್ಷೆಗಳಿಗೆ ಹೋಗುವವರೆಂದಾಕ್ಷಣವಂತೂ, ತಮ್ಮ ಮಕ್ಕಳು ಶಾಲೆಯಲ್ಲಿ ಏನು ಕಲಿಯುತ್ತಿದ್ದಾರೆ ಎಂದು ತಿಳಿಯುವುದಕ್ಕಿಂತ 2-3 ವರ್ಷ ಮೊದಲೇ ಯಾವ ಟ್ಯೂಷನ್ ಕ್ಲಾಸಿಗೆ ತಮ್ಮ ಮಗುವನ್ನು ಕಳುಹಿಸುವುದು ಎಂಬುದೇ ಪಾಲಕರ ಬಹುದೊಡ್ಡ ಚಿಂತೆ. ಪ್ರತಿಷ್ಠಿತ, ಊರಲ್ಲಿ ಹೆಸರು ಪಡೆದ ಮನೆ ಪಾಠಕ್ಕೆಂದು ಸಾವಿರಾರು ರೂಪಾಯಿ ಮುಂಗಡವಾಗಿ ಕಟ್ಟಿ ಏನೋ ಅದ್ಭುತ ಸಾಧನೆಗೈದವರಂತೆ ಬೀಗುವ ಪಾಲಕರಿಗೇನನೂ ಕೊರತೆಯಿಲ್ಲ. ಈ ರೀತಿ ಹೆಸರು ಪಡೆದ ವ್ಯಕ್ತಿ ಇನ್ನಾರೂ ಆಗಿರದೆ ಯಾವುದೇ ಶಾಲೆ/ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವವರೇ. ಸೋಜಿಗದ ಸಂಗತಿಯೆಂದರೆ ಅಂಥ ಶಿಕ್ಷಕರ ಶಿಕ್ಷಕರ ಕ್ಷಮತೆ, ಕೌಶಲ್ಯ, ವಿದ್ವತ್ ಮನೆ ಪಾಠದಲ್ಲಷ್ಟೇ ಪ್ರದರ್ಶಿಸಲ್ಪಡುವುದು. ಕೈ ತುಂಬ ಸಂಬಳ ಕೊಟ್ಟು ನೇಮಿಸಿಕೊಂಡ ಶಾಲೆಗೆ ಅಂಥವರ ಜ್ಞಾನ ಉಪಯೋಗಕ್ಕೆ ಬಾರದಿರುವುದು ಚಿಂತೆಯ ವಿಷಯ.
ಮನೆ ಪಾಠ ಎಂಬುದು ಅವಶ್ಯಕತೆಗಿಂತ ಹೆಚ್ಚಾಗಿ ಗೌರವದ ಪ್ರತೀಕದಂತೆಯೂ ಅನಿಸುತ್ತಿದೆ. ತಮ್ಮ ಮಕ್ಕಳನ್ನು ಟ್ಯೂಷನ್ಗೆ ಕಳಿಸದಿದ್ದರೆ ಜನ ಏನೆಂದಾರು ಎಂಬುದೇ ಚರ್ಚೆಯ ವಿಷಯ. ಹೆಚ್ಚು ಹಣ ಕೊಟ್ಟು ಹೆಸರು ಗಳಿಸಿದವರಲ್ಲಿ ಟ್ಯೂಷನ್ಗೆ ಕಳಿಸಿದರೆ ತಮ್ಮ ಪ್ರತಿಷ್ಠೆಯ/ಶ್ರೀಮಂತಿಕೆಯ ಪ್ರತೀಕವೆಂತಲೂ ತಿಳಿಯುವವರಿದ್ದಾರೆ. ಈಗಿತ್ತಲಾಗಿ ಇದೊಂದು ಫ್ಯಾಷನ್ ರೂಪವನ್ನು ತಾಳುತ್ತಿದೆ. ಕೆಲವೊಮ್ಮೆ ಫ್ಯಾಡ್ ಅಂತಲೂ ಅನಿಸುತ್ತಿದೆ. ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪಾಲಕರು ಅನುಸರಿಸುವ ದಾರಿ ಅಂತಲೂ ಅನ್ನಬಹುದೇನೋ? ಈ ಮನೆ ಪಾಠ ನಮ್ಮ ಶಿಕ್ಷಣ ವ್ಯವಸ್ಥೆಯ ಅಂಗವೋ ಅಥವಾ ಶಿಕ್ಷಣದ ಅವ್ಯವಸ್ಥೆಯ ಪ್ರತಿರೂಪವೋ ತಿಳಿಯದು. ಒಬ್ಬ ವಿದ್ಯಾರ್ಥಿಯ ಕಲಿಕೆಗೆ ಅನುಕೂಲವಾಗುವಂಥ ವಾತಾವರಣವನ್ನು ಕಲ್ಪಿಸುವುದು ಸಂಸ್ಥೆಯ/ ಸರ್ಕಾರದ ಜವಾಬ್ದಾರಿಯಲ್ಲವೇ? ಹಣ ಸಂಪಾದಿಸುವ ತರಾತುರಿಯಲ್ಲಿ, ತಾವು ಪಾಠ ಮಾಡುವ ಶಾಲೆಯಲ್ಲೇ ಮನೆ-ಪಾಠದ ಚರ್ಚೆ ಮಾಡುವ ಶಿಕ್ಷಕರಿಗೇನೆನ್ನಬೇಕು? ಈ ಪಿಡುಗು ತೊಲಗಬೇಕೆಂದರೆ ನಿರ್ದಾಕ್ಷಿಣ್ಯ ಕಾನೂನು ಹಾಗೂ ಜಾರಿಗೊಳಿಸುವಿಕೆ. ಜತೆಗೆ ಪಾಲಕರ ಮನಸ್ಥಿತಿಯ ಬದಲಾವಣೆ. ಮನೆಪಾಠ ಒಂದು ಸಮಾನಾಂತರ ಶಿಕ್ಷಣ ಸಂಸ್ಥೆಯಂತೆ ಕಾರ್ಯ ನಡೆಸಲು ಬಿಡದಿರುವುದು? ಒಂದು ವೇಳೆ ಈ ನಿಟ್ಟಿನಲ್ಲಿ ಕಡಿವಾಣ ಬೀಳದಿದ್ದರೆ ಅಧಿಕೃತ ಶಿಕ್ಷಣ ಸಂಸ್ಥೆಗಳನ್ನೇ ಮುಚ್ಚುವ ಪ್ರಸಂಗ ಬಂದರೂ ಆಶ್ಚರ್ಯಪಡಬೇಕಾಗಿಲ್ಲ. ಕೇವಲ ಶೋಷಣೆ, ವಿಚಾರ ಸಂಕಿರಣಗಳಲ್ಲೇ ಕಾಲ ಹರಣ ಮಾಡದೆ ಸರ್ಕಾರ ಎಚ್ಚೆತ್ತು ಸ್ಪಷ್ಟ ಹಾಗೂ ಕಟ್ಟು ನಿಟ್ಟು ಕಾಯಿದೆ ರೂಪಿಸದಿದ್ದಲ್ಲಿ ಪರಿಸ್ಥಿತಿ ಅತಿ ಶೀಘ್ರ ಕೈ ಮೀರಿ ಹೋಗುವುದರಲ್ಲಿ ಸಂಶಯವೇ ಇಲ್ಲ!
-ಶಂಕರನಾರಾಯಣಭಟ್, ಹೊನ್ನಾವರ
ಆರೋಗ್ಯ ಸಚಿವರೇ.. ಉತ್ತರಿಸಿ
ಇತ್ತೀಚೆಗೆ ಮುಖ್ಯಮಂತ್ರಿಯವರ ದ.ಕ. ಜಿಲ್ಲಾ ಭೇಟಿಯ ಸಂದರ್ಭದಲ್ಲಿ ಕರಾವಳಿಯ ನಾಲ್ವರು ಸಚಿವರಿದ್ದರೂ, ಶಾಸಕ ವಸಂತ ಬಂಗೇರರನ್ನು ಬಿಟ್ಟು ಯಾರೊಬ್ಬರೂ ಜಿಲ್ಲೆಯ ಸಮಸ್ಯೆಗಳನ್ನು ಬಲವಾಗಿ ಪ್ರಸ್ತಾಪಿಸದೇ ಇರುವುದು ವಿಷಾದನೀಯ ಸಂಗತಿಯಾಗಿದೆ. ಅದರಲ್ಲೂ ಆರೋಗ್ಯ ಸಚಿವರಾದ ಯು.ಟಿ. ಖಾದರ್ ಅವರಿಗೆ ಎಂಡೋಸಲ್ಫಾನ್ನಂತಹ ಭೀಕರ ಸಮಸ್ಯೆಯನ್ನು ನಿಭಾಯಿಸಲು ಮಹತ್ತರವಾದ ಜವಾಬ್ದಾರಿಗಳಿದ್ದವು. ವಿಪರ್ಯಾಸವೆಂದರೆ ಸ್ವತಃ ಮುಖ್ಯಮಂತ್ರಿಗಳ ಕಾರ್ಯಕ್ರಮಗಳ ಪಟ್ಟಿಯಲ್ಲಿದ್ದ ಎಂಡೋ ಪಾಲನ ಕೇಂದ್ರ ಭೇಟಿ ಕಾರಣವಿಲ್ಲದೆ ರದ್ದಾಗಿರುವುದು. ಆರೋಗ್ಯ ಸಚಿವರು ಈ ಕುರಿತು ತೀವ್ರ ಕಾಳಜಿ ವಹಿಸಬೇಕಾಗಿತ್ತು. ದೇಶಕ್ಕೆ ಮಾದರಿಯಾಗುವ ಪ್ಯಾಕೇಜ್ ರೂಪಿಸುವ ಯೋಚನೆಯಲ್ಲಿರುವ ಸಚಿವರು ಈ ಕುರಿತು ಸ್ಪಷ್ಟನೆಯನ್ನಾದರೂ ನೀಡಬೇಕಿತ್ತು. ಸಂತ್ರಸ್ತರು ಈಗ ಕೊನೆಯ ಆಯ್ಕೆಯಾಗಿರುವ ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದಾರೆ. ಆರೋಗ್ಯ ಸಚಿವರು ಇನ್ನಾದರೂ ಎಂಡೋಪೀಡಿತರ ಬಗ್ಗೆ ಕಾಳಜಿ ವಹಿಸಬೇಕು.
-ಜನಾರ್ದನ ಸುರ್ಯ, ಉಜಿರೆ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

