ತಪ್ಪಾಯ್ತು ತಿದ್ಕೋತೀವಿ
ಮಂಡ್ಯ ಜಿಲ್ಲೆ ಪಾಂಡವಪುರದಿಂದ ಗಾನಾಸುಮಾ ಅವರು ಬರೆಯುತ್ತಾರೆ- 'ಅ.2 ರ ಪತ್ರಿಕೆಯ ಮಂಡ್ಯ ಸುದ್ದಿ ವಿಭಾಗದ 3 ನೇ ಪುಟವನ್ನು ಸ್ವಲ್ಪ ತೆರೆದು ನೋಡಿ ಭಟ್ರೆ. ನಿಜಕ್ಕೂ ನಿಮ್ಮ ಮಂಡ್ಯ ವರದಿಗಾರರು ಈ ಜನ್ಮದಲಿ ಬುದ್ದಿ ಕಲಿಯೋ ಹಾಗೆ ಕಾಣ್ತಿಲ್ಲ. ತಪ್ಪಿನ ಮೇಲೆ ತಪ್ಪು ಮಾಡ್ತನೇ ಇರ್ತಾರೆ. ನಾವು ಕೂಡ ಬರೆದು ಈ ಅಂಕಣದಲ್ಲಿ ತಮಗೆ ಬಿನ್ನವತ್ತಳೆ ಕೊಡ್ತಾನೇ ಇರ್ತೀವಿ.'
"ಶ್ರೀರಂಗಪಟ್ಟಣದಲ್ಲಿ ದಸರಾ ಸಿದ್ಧತೆ' ಎಂಬ ತಲೆ ಬರಹದಡಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವಿವರದಲ್ಲಿ 5 ದಿನಗಳ ಕಾರ್ಯಕ್ರಮದ ಪಟ್ಟಿ ನೀಡಿದ್ದಾರೆ. ಮೊದಲ ದಿನದ ವಿವರದಲ್ಲಿ ಅ.7 ರಂದು ಎಂದು ಬರೆದು ಉಳಿದ 4 ದಿನಗಳ ಕಾರ್ಯಕ್ರಮದ ವಿವರದಲ್ಲಿ ಸೆಪ್ಟೆಂಬರ್ 8,9,10,11ರ ವಿವರ ನೀಡಿರುವುದು ಎಷ್ಟು ಸರಿ?'
'ದಸರಾ ಉತ್ಸವ ಸಾಮಾನ್ಯ ವಾಗಿ ಅಕ್ಟೋಬರ್ನಲ್ಲಿ ನಡೆದರೆ, ನಿಮ್ಮ ವರದಿಗಾರ ಮಹಾಶಯರಿಗೆ ಸೆಪ್ಟೆಂಬರ್ನಲ್ಲೇ ಆಚರಿಸೋ ಆತುರ ಯಾಕೆ ಸ್ವಾಮಿ? ಒಟ್ಟಿನಲ್ಲಿ 'ತಪ್ಪಾಯ್ತು ತಿದ್ಕೋತೀವಿ' ಅಂಕಣಕ್ಕೆ ಆಹಾರವಾಗೋ ಮಹದಾಸೆಯೇ ಈ ತಪ್ಪಿಗೆ ಕಾರಣವಿರಬಹುದೇನೊ' ಎಂದಿದ್ದಾರೆ.
ಯಾವ ವರದಿಗಾರರೂ 'ತಪ್ಪಾಯ್ತು ತಿದ್ಕೋತೀವಿ'ಯಲ್ಲಿ ಹೆಸರು ಬರಲಿ ಅಥವಾ ನಾನು ಬರೆದ ವರದಿ ಪ್ರಸ್ತಾಪವಾಗಲಿ ಎಂದು ಬಯಸುವುದಿಲ್ಲ. ಒಂದಿಡೀ ತಿಂಗಳು ಅದನ್ನೇ ಬರೆದು ಬರೆದು ರೂಢಿ ಆಗಿರುವುದರಿಂದ, ಹೊಸ ತಿಂಗಳ ಆರಂಭದಲ್ಲಿ ಈ ರೀತಿ ತಪ್ಪಾಗುವುದನ್ನು ಸಾಮಾನ್ಯವಾಗಿ ಕಾಣಬಹುದು. ಇನ್ನು ತಪ್ಪಾಗಿದೆ ಎಂದು ಓದುಗರು ಪತ್ರ ಬರೆಯುವುದಕ್ಕೆ ನಾವಂತೂ ಬೇಸರಿಸುವುದಿಲ್ಲ. ಸಾಧ್ಯವಾದಷ್ಟೂ ತಪ್ಪುಗಳನ್ನು ತಿದ್ದಿಕೊಂಡಿದ್ದೇವೆ ಕೂಡ.
ಇಸ್ರೇಲ್ನಿಂದ ಹೇಮಂತ ಅವರು ಬರೆಯುತ್ತಾರೆ- 'ಇದನ್ನು ಬೇಕಾದರೆ 'ತಪ್ಪಾಯ್ತು ತಿದ್ಕೋತಿವಿ ಅಂಕಣಕ್ಕೆ ಇಟ್ಕೋಳಿ. ಪತ್ರಿಕೆಗಳಲ್ಲಿ ಅತ್ಯಾಚಾರ ಕುರಿತಾದ ವರದಿಗಳನ್ನು ಪ್ರಕಟಿಸುವಾಗ ಆ ನತದೃಷ್ಟ ಮಹಿಳೆ-ಬಾಲಕಿಯ ಹೆಸರನ್ನು ಬದಲಾಯಿಸಿ ಪ್ರಕಟಿಸುತ್ತೀರಿ. ಒಳ್ಳೆಯದು. ಆದರೆ ಅವರ ಊರು, ವಯಸ್ಸು, ಪೋಷಕರ ವಿವರ ಸರಿಯಾಗಿ ನಮೂದಿಸುತ್ತೀರಿ. ಇಷ್ಟು ವಿವರ ಕೊಟ್ಟ ಮೇಲೆ ಕೇವಲ ಅವರ ಹೆಸರು ಮಾತ್ರ ಬದಲಿಸಿ ನೀವು ಯಾವ ಗೌಪ್ಯ ಕಾಪಾಡಿದಂತಾಯಿತು?' ಎಂದಿದ್ದಾರೆ.
ಅವರು ಎತ್ತಿರುವ ಪ್ರಶ್ನೆ ಉತ್ತಮವಾದದ್ದೇ. ಊರಿನ ಹೆಸರು ಹಾಕುತ್ತೇವೆ. ಆದರೆ ತಂದೆ-ತಾಯಂದಿರ ಹೆಸರು ಪ್ರಕಟಿಸುವುದಿಲ್ಲ. ಊರಿನ ಹೆಸರು ಹಾಕುವುದರಿಂದ ಗೊತ್ತಾಗುತ್ತದೆ ಎಂಬುದು ಸಮರ್ಥನೀಯವಲ್ಲ. ಅತ್ಯಾಚಾರದಂತಹ ದೊಡ್ಡ ಘಟನೆ ನಡೆದಾಗ ಸಹಜವಾಗಿ ಆ ಊರಿನವರಿಗೆ ಘಟನೆಗೆ ತುತ್ತಾದವರು ಯಾರು ಎಂಬುದು ಪತ್ರಿಕೆಯಲ್ಲಿ ಹೆಸರು ಹಾಕದಿದ್ದರೂ ಗೊತ್ತಿರುತ್ತದೆ. ಇನ್ನು ಹೊರಗಿನವರಿಗೆ ಹೆಸರು ಹಾಕಿದರೂ ಗೊತ್ತಾಗುವುದಿಲ್ಲ.
ಆದರೂ ಅತ್ಯಾಚಾರದಂತಹ ಪ್ರಕರಣಗಳು ನಡೆದಾಗ ಆಕೆಯ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಚಿತ್ರ, ಹೆಸರನ್ನು ಪ್ರಕಟಿಸುವುದಿಲ್ಲ ಎಂಬುದು ಅಲಿಖಿತ ನಿಯಮ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

