ಮಂತ್ರಿ ಕೆಲಸ ಹೋಂ ವರ್ಕ್ ಅಲ್ಲ
ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಮಂತ್ರಿಗಳು ತಮ್ಮ ಇಲಾಖೆಗಳ ಮೇಲೆ ನಿಯಂತ್ರಣ ಹೊಂದಿದ್ದು, ಇಲಾಖೆಗೆ ಸಂಬಂಧಿಸಿದ ಕಡತಗಳ ವಿಲೇವಾರಿಯ ಅಧಿಕಾರವನ್ನು ಹೊಂದಿದ್ದರೂ, ಅವರು ಆಡಳಿತ ಸೇವಾ ವ್ಯವಸ್ಥೆಯ ನಿಯಮಗಳ ಚೌಕಟ್ಟಿನಿಂದ ಹೊರಗೇ ಇರುವವರು. ಅವರಿಗೆ ಕಾರ್ಯಾಲಯಕ್ಕೆ ಹಾಜರಿಯಾಗುವ ವಿಚಾರದಲ್ಲಿ ಯಾವ ನಿಯಮಗಳೂ ಇಲ್ಲ - ವೇಳಾಪಟ್ಟಿಯೂ ಇಲ್ಲ. ರಜಾ ಸೌಲಭ್ಯದ ಪ್ರಸ್ತಾಪವೂ ಇಲ್ಲ. ಆದರೆ ಅವರ ಕಾರ್ಯಾಲಯ, ಸಿಬ್ಬಂದಿ ಕೆಲಸ ಮಾಡುವ ಸ್ಥಳ ಎಲ್ಲವೂ ಇರುವುದು ವಿಧಾನ ಸೌಧದಲ್ಲೇ. ವಿಧಾನಸೌಧದಲ್ಲೇ ಕೆಲಸ ಮಾಡುವ ಪದ್ಧತಿಯಿಂದ ಸಂದರ್ಶಕರಿಗೂ ಅನುಕೂಲ, ಸರ್ಕಾರಿ ಸಿಬ್ಬಂದಿಗೂ ಅನುಕೂಲ, ಕೆಲಸವೂ ಸುಸೂತ್ರ. ಆದರೆ ಮಂತ್ರಿಗಳಿಗೆ ಪ್ರವಾಸದ ಕೆಲಸವೂ ಜಾಸ್ತಿ.
ಇದನ್ನು ಗಮನಿಸಿ, ಅನೇಕ ಬಾರಿ ಮುಖ್ಯಮಂತ್ರಿಗಳು ಸುತ್ತೋಲೆಯನ್ನು ಕಳುಹಿಸಿ, ಬೆಂಗಳೂರಿನಲ್ಲಿರುವಾಗ, ಮಂತ್ರಿಗಳು ಕೆಲಸದ ದಿನಗಳಲ್ಲಿ, ಕೆಲಸದ ವೇಳೆಯಲ್ಲಿ ವಿಧಾನಸೌಧ, ವಿಕಾಸ ಸೌಧಗಳಲ್ಲಿನ ಕಾರ್ಯಾಲಯಗಳಲ್ಲೇ ಕೆಲಸ ಮಾಡುವುದು ಜನತಾಂತ್ರಿಕ ವ್ಯವಸ್ಥೆ ಹಾಗೂ ಜನಸಂಪರ್ಕದ ದೃಷ್ಟಿಯಿಂದ ಸರಿಯಾದ ಕ್ರಮ ಎಂದು ಹೇಳಿದರೂ, ಪ್ರಕಟಿತ ವರದಿಗಳನ್ನು ಗಮನಿಸಿದರೆ, ಸಾರ್ವಜನಿಕರ ಅನುಭವವನ್ನು ತಿಳಿಯಲು ಪ್ರಯತ್ನಿಸಿದರೆ, ಅನೇಕ ಮಂತ್ರಿಗಳು ತಮ್ಮ ಕಾರ್ಯಾಲಯಗಳಿಗೇ ಬರುವುದು ಅಪರೂಪ ಎನ್ನುವುದರ ಅರಿವಾಗುತ್ತಿದೆ. ಇದು ಒಳ್ಳೆಯ ಸಂಪ್ರದಾಯವಲ್ಲ. ವಿಧಾನ ಸೌಧದಲ್ಲಿ ಹೆಬ್ಬಾಗಿಲಲ್ಲೇ ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಬರಹ ಇದೆ. ಸರ್ಕಾರದ ಕೆಲಸ ದೇವರ ಕೆಲಸ ಹೌದೋ, ಅಲ್ಲವೋ ಗೊತ್ತಿಲ್ಲ. ಆದರೆ ಖಂಡಿತವಾಗಲೂ ಅದು ಹೋಮ್ ವರ್ಕ್ ಅಲ್ಲ. ವಿಧಾನ ಸೌಧಕ್ಕೆ ಮಂತ್ರಿಗಳೇ ಬರುವುದಿಲ್ಲ ಎನ್ನುವುದಾದರೆ, ಆ ಕಟ್ಟಡದ ಪ್ರವೇಶಕ್ಕೆ ವಿಪರೀತ ಕಟ್ಟುಪಾಡಿನ ನಿಯಮಗಳೇಕೆ, ಭದ್ರತೆಯ ವ್ಯವಸ್ಥೆಯಾದರೂ ಯಾಕೆ ಬೇಕು ?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

