ತಪ್ಪಾಯ್ತು ತಿದ್ಕೋತೀವಿ
ಕತಾರ್ನ ದೋಹಾದಿಂದ ಶ್ರೀಹರ್ಷ ಹೆಗಡೆ ಅವರು ಬರೆಯುತ್ತಾರೆ- 'ಸೆ.13ರ 'ಕನ್ನಡಪ್ರಭ' ಪತ್ರಿಕೆಯಲ್ಲಿ ಪ್ರಕಟವಾದ ಈ ತಲೆಬರಹವೊಂದು ಓದುಗರಲ್ಲಿ ಗೊಂದಲಕ್ಕೀಡು ಮಾಡುವಂತಿದೆ. 'ಎಲ್.ಕೆ. ಆಡ್ವಾಣಿ ಹತ್ಯೆ ಸಂಚಿನಲ್ಲಿ ಮಲ್ಲೇಶ್ವರ ಸ್ಫೋಟ ಬಂಧಿತರು' ಎಂದಿದೆ. ಈ ತಲೆಬರಹ ಎಲ್.ಕೆ. ಆಡ್ವಾಣಿಯವರ ಹತ್ಯೆ ಯಾವಾಗಾಯಿತು ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಅಂತ ನನ್ನ ಅನಿಸಿಕೆ. ಬಹುಶಃ ಎಲ್.ಕೆ. ಆಡ್ವಾಣಿ ಹತ್ಯೆ ಮಾಡುವ ಸಂಚಿನಲ್ಲಿ ಮಲ್ಲೇಶ್ವರ ಸ್ಫೋಟ ಬಂಧಿತರು' ಎಂದಿದ್ದರೆ ಸರಿಹೋಗುತ್ತಿತ್ತೇನೋ ಅನಿಸುತ್ತದೆ. ಅಲ್ಲವೇ?' ಎಂದಿದ್ದಾರೆ.
ನನ್ನ ಪ್ರಕಾರ ಎರಡೂ ಸರಿಯಿಲ್ಲ. ಯಾಕೆಂದರೆ ಬೆಂಗಳೂರಿನ ಮಲ್ಲೇಶ್ವರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪೊಲೀಸರು ಯಾರನ್ನೂ ಬಂಧಿಸಿಲ್ಲ. ಬದಲಾಗಿ ತಮಿಳುನಾಡಿನಲ್ಲಿ ನಡೆದ ಬಿಜೆಪಿ ಮುಖಂಡರ ಹತ್ಯೆ ಪ್ರಕರಣವೊಂದರಲ್ಲಿ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ. ಅವರು ಎಲ್.ಕೆ. ಆಡ್ವಾಣಿ ಹತ್ಯೆ ಸಂಚಿನಲ್ಲೂ ಭಾಗಿಗಳು ಎಂದು ತಿಳಿದುಬಂದಿದೆ. ಅವರು ಮಲ್ಲೇಶ್ವರ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳೂ ಹೌದು ಎಂದು ತಿಳಿದುಬಂದಿದೆ.
ಆದ್ದರಿಂದ ಇದು 'ಎಲ್.ಕೆ. ಆಡ್ವಾಣಿ ಹತ್ಯೆ ಸಂಚಿನಲ್ಲಿ ಮಲ್ಲೇಶ್ವರ ಸ್ಫೋಟ ಆರೋಪಿಗಳು' ಎಂದಾಗಬೇಕಿತ್ತು. ಇನ್ನು 'ಎಲ್.ಕೆ. ಆಡ್ವಾಣಿ ಹತ್ಯೆ ಸಂಚಿನಲ್ಲಿ' ಎಂದು ಬರೆದಿರುವುದರಲ್ಲಿ ಯಾವುದೇ ತಪ್ಪಿಲ್ಲ. 'ಹತ್ಯೆ ಸಂಚು' ಎಂದರೆ ಹತ್ಯೆಯಾಗಿಲ್ಲ ಎಂದೇ ಅರ್ಥ. ಹತ್ಯೆ ಆಗಿದ್ದರೆ ಆಗ 'ಆಡ್ವಾಣಿ ಹತ್ಯೆ ಪ್ರಕರಣ' ಎಂದಾಗಿಬಿಡುತ್ತದೆ. 'ಹತ್ಯೆ ಸಂಚು' ಎಂಬುದಕ್ಕೂ 'ಹತ್ಯೆ ಮಾಡುವ ಸಂಚು' ಎಂಬುದಕ್ಕೂ ಪತ್ರಿಕಾ ಭಾಷೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- 'ಸೆ.25ರ ಸಂಚಿಕೆಯಲ್ಲಿ ನುಸುಳಿದ 'ಕದಂಬಬಾಹು' ಎಂಬ ತಪ್ಪು ಬಳಕೆಯ ಬಗೆಗೆ ಅ.2ರ 'ತಪ್ಪಾಯ್ತು ತಿದ್ಕೋತೀವಿ'ಯಲ್ಲಿ ಮಾಗಡಿ ಶ್ರೀನಿವಾಸ ಅವರು ಬೆಳಕು ಹರಿಸಿ, ತಿದ್ದಿಕೊಳ್ಳಲು ಮಾರ್ಗದರ್ಶನ ಮಾಡಿದ್ದಾರೆ. ಆದರೆ ಅದರಲ್ಲಿ 'ಕಬಂಧ'ನನ್ನು 'ಕಭಂದ'ನೆಂದು ಮತ್ತೆ ಮತ್ತೆ ಬಳಸಲಾಗಿದೆ.'
'ಸ್ಥೂಲಶಿರನೆಂಬ ಮುನಿಯಿಂದ ಶಾಪಪಡೆದು ರಾಕ್ಷಸನಾದ ಅವನನ್ನು 'ಕಬಂಧ'ನೆಂದು ಕರೆಯುತ್ತಿದ್ದರು. ಕಬಂಧನು ದೇವೇಂದ್ರನೊಡನೆ ಯುದ್ಧಕ್ಕಿಳಿದಾಗ ಇಂದ್ರನ ವಜ್ರಾಯುಧದ ಹೊಡೆತದಿಂದ ತಲೆ ಹಾಗೂ ಮೊಳಕಾಲುಗಳು ದೇಹದೊಳಗೇ ಹುದುಗಿಹೋದವು. ಬ್ರಹ್ಮನಿಂದ ಚಿರಂಜೀವಿತ್ವವನ್ನು ಪಡೆದರೂ ತಲೆಯೇ ಇಲ್ಲದೆ ಆಹಾರ ಸಂಪಾದನೆ ಹೇಗೆಂದು ಪ್ರಶ್ನೆಬಂದಾಗ, ದೇವೇಂದ್ರನಲ್ಲೇ ತನ್ನ ಸಮಸ್ಯೆಯನ್ನು ಮುಂದಿಟ್ಟನು.'
'ಒಂದು ಯೋಜನ ಉದ್ದದ ಭುಜಗಳನ್ನು ಕರುಣಿಸಿ, ಹೊಟ್ಟೆಯ ಮೇಲೆ ಶಿರವನ್ನು ಕಲ್ಪಿಸಿ, ಒಂದು ಯೋಜನ ಸುತ್ತಳತೆಯಲ್ಲಿ ಸುಳಿದಾಡುವ ಪ್ರಾಣಿಗಳು ನಿನ್ನ ಆಹಾರ. ಅವನ್ನು ನಿನ್ನ ಬಾಹು (ತೋಳು)ಗಳಿಂದ ಬಂಧಿಸಿ ಆಹಾರವನ್ನಾಗಿ ಸ್ವೀಕರಿಸು ಎಂದನು. ಕಬಂಧನ ಬಾಹುಗಳಿಗೆ ಬಲಿಬಿದ್ದವರು ತಪ್ಪಿಸಿಕೊಳ್ಳುವಂತಿಲ್ಲವೆಂಬಂತೆ ಸಲಹೆ ನೀಡಿದನು.'
'ಕಬಂಧ ಎಂದರೆ ತಲೆಯನ್ನು ಕಳೆದುಕೊಂಡು ಇರುವವನೆಂದು ಅರ್ಥ. ರಾಹುವಿಗೆ ತಲೆ ಇಲ್ಲದ ಕಾರಣ ರಾಹುವಿಗೂ 'ಕಬಂಧ'ನೆಂಬ ಹೆಸರು ಬಳಕೆಯಲ್ಲಿದೆ' ಎಂದಿದ್ದಾರೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

