ಸಂಪಾದಕೀಯ

ಹೈಕೋರ್ಟ್ ಮಹತ್ವದ ತೀರ್ಪು

Published On :

ಕಳೆದ ಸುಮಾರು ನಲವತ್ಮೂರು ವರ್ಷಗಳಿಂದಲೂ ನ್ಯಾಯಾಂಗದ ವಿವಾದದಲ್ಲಿ ಸಿಕ್ಕಿ ಬಿದ್ದಿದ್ದ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಒಡೆತನ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನದ್ದೇ ಎಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಶುಕ್ರವಾರ ನೀಡಿದ ತೀರ್ಪು ನಿಜವಾಗಲೂ ಮಹತ್ವದ್ದು.
ನಿಜ. ಇದೇನೂ ಹೈಕೋರ್ಟಿನ ಮೂಲ ತೀರ್ಪಲ್ಲ. 2005ರಲ್ಲಿ ಬೆಂಗಳೂರಿನ ಸಿವಿಲ್ ನ್ಯಾಯಾಲಯ ನೀಡಿದ್ದ ತೀರ್ಪು ಸರಿಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ ಈಗ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡಿರುವ ಜಾತ್ಯತೀತ ಜನತಾದಳ, ಕೋರ್ಟ್ ಶುಲ್ಕವನ್ನು ಕೊಡಬೇಕೆಂದು ನ್ಯಾಯಾಲಯ ಆದೇಶ ನೀಡಿದ್ದರ ಹಿಂದಿರುವುದು ತೀರ್ಪಿನ ವಿಚಾರದಲ್ಲಿರುವ ವಿಶ್ವಾಸವನ್ನು ಸೂಚಿಸಿದೆ. ಜಾತ್ಯತೀತ ಜನತಾದಳ, ಈ ಕಟ್ಟಡದ ಮೇಲೆ ಅಧಿಕಾರವನ್ನು ಪಡೆದಿದ್ದು ಜನತಾದಳ ಹೋಳಾಗಿ ಪಕ್ಷದ ಒಂದು ಹೋಳಿನ ಪ್ರಮುಖರು ಈ ಕಟ್ಟಡದಲ್ಲಿದ್ದ ಒಂದೇ ಕಾರಣಕ್ಕೆ.
1950ರ ದಶಕದಲ್ಲೇ ಆ ನಿವೇಶನ ಅಂದಿನ ಬೆಂಗಳೂರು ಕಾಂಗ್ರೆಸ್ಸಿಗೆ ದಾನಪತ್ರದ ಮೂಲಕ ದಕ್ಕಿತ್ತು. ಅಲ್ಲಿ 1960ರ ವೇಳೆಗೆ ಈಗಿನ ಕಲ್ಲು ಕಟ್ಟಡ ನಿರ್ಮಾಣವಾಗಿದ್ದು  ಕಾಂಗ್ರೆಸ್ಸಿನ ಹೆಸರಿನಲ್ಲೇ. ಕಾಂಗ್ರೆಸ್ ಭವನದ ಹೆಸರನ್ನು ಅಲ್ಲಿ ಮಹಾದ್ವಾರದಲ್ಲೇ ಕಲ್ಲಿನಲ್ಲಿ ಕೆತ್ತಲಾಗಿದೆ. ಅದರ ಮೇಲೆ ಜನತಾ ಭವನ ಎನ್ನುವ ಬರಹವೂ ಇದೆ.
ಈ ಐತಿಹಾಸಿಕ ಕಟ್ಟಡದ ನಿರ್ಮಾಣದ ಕಾಲದಲ್ಲಿ ಪಕ್ಷದ ನಾಯಕರಾಗಿದ್ದವರು ಯಾರೂ ಈಗ ಇಲ್ಲ. ನಿಜಲಿಂಗಪ್ಪ, ವೀರಣ್ಣ ಗೌಡರು, ಸಾಹುಕಾರ್ ಚೆನ್ನಯ್ಯ ಅವರೆಲ್ಲ ಈ ಕಾರ್ಯಾಲಯದಿಂದಲೇ ಕೆಲಸ ಮಾಡಿದ್ದು. 1950ರ ದಶಕದ ಕೊನೆಯ ಭಾಗದಲ್ಲಿ ಇಲ್ಲಿ ವಿರೇಂದ್ರ ಪಾಟೀಲ, ರಾಮಕೃಷ್ಣ ಹೆಗಡೆ ಅವರು ಯಾವಾಗಲೂ ಕಾಣಲಿಕ್ಕೆ ಸಿಗುತ್ತಿದ್ದರು. ಕಾಂಗ್ರೆಸ್ ಭವನದ ಒಡೆತನ ವಿವಾದಕ್ಕೆ ಸಿಕ್ಕಿ ಬಿದ್ದಿದ್ದು 1969-70-71ರ ಸಮಯದಲ್ಲಿ ಕಾಂಗ್ರೆಸ್ ಹೋಳಾದಾಗ. ಆಗ ಆಳುವ ಕಾಂಗ್ರೆಸ್ ಸಂಸ್ಥಾ ಕಾಂಗ್ರೆಸ್ಸಿನ ನಡುವೆ ಜಗಳವಿತ್ತು. ನ್ಯಾಯಾಲಯದ ಆದೇಶದಂತೆ ವರ್ಷಗಳ ಕಾಲ ಬೀಗ ಮುದ್ರೆ ಇತ್ತು. ಅನಂತರ ನ್ಯಾಯಾಲಯದ ತೀರ್ಪಿನಂತೆ ಒಡೆತನ ಸಂಸ್ಥಾ ಕಾಂಗ್ರೆಸ್ಸಿನದ್ದಾಯಿತು.
ಸಂಸ್ಥಾ ಕಾಂಗ್ರೆಸ್ ಜನತಾಪಕ್ಷದಲ್ಲಿ ವಿಲೀನವಾದ ಸಮಯದಲ್ಲಿ ಕಟ್ಟಡಕ್ಕೆ ದೇವೇಗೌಡರ ಪ್ರವೇಶವಾಯಿತು. ಅವರು ಸಂಸ್ಥಾ ಕಾಂಗ್ರೆಸ್ ಮೂಲಕ ಜನತಾ ಪರಿವಾರಕ್ಕೆ ಬಂದವರು. ಮುಂದೆ ಜನತಾಪಕ್ಷ ಜನತಾದಳವಾಗಿ ಪರಿವರ್ತನೆಯಾಗಿ, ಅನಂತರ ಜನತಾದಳ ಹೋಳಾದಾಗ, ಕಟ್ಟಡ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳದ ವಶವಾಯಿತು. ಆ ವೇಳೆಗೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.
2005ರಲ್ಲಿ ಸಿವಿಲ್ ನ್ಯಾಯಾಲಯ ಒಂದು ತೀರ್ಪಿನಲ್ಲಿ ಕಟ್ಟಡ ಒಡೆತನ ನಿಸ್ಸಂದೇಹವಾಗಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನದ್ದೇ ಎಂದು ತೀರ್ಪು ನೀಡಿದ್ದನ್ನು ಶುಕ್ರವಾರ ಹೈಕೋರ್ಟ್ ಪುರಸ್ಕರಿಸಿರುವುದು ಜಾತ್ಯತೀತ ಜನತಾದಳಕ್ಕೆ ಭಾರಿ ಹೊಡೆತವೇ.
ರಾಜಕೀಯವಾಗಿ ಕಾಂಗ್ರೆಸ್ಸಿಗೂ ಜನತಾ ಪರಿವಾರಕ್ಕೂ ಸಂಬಂಧವೇ ಇಲ್ಲ. ಜಾತ್ಯತೀತ ಜನತಾದಳವಂತೂ ಯಾವ ದೃಷ್ಟಿಯಿಂದಲೂ ಕಾಂಗ್ರೆಸ್ಸಿನ ರಾಜಕೀಯ ಉತ್ತರಾಧಿಕಾರಿಯಾಗುವುದು ಅಸಾಧ್ಯದ ಮಾತು. ಈಗಂತೂ ಜಾತ್ಯತೀತ ಜನತಾದಳದ ಹೆಸರಿನಲ್ಲಿ ರಾಷ್ಟ್ರೀಯ, ಭಾರತ ಪದಗಳಿಲ್ಲ. ತೀರ್ಪನ್ನು ಜಾತ್ಯತೀತ ಜನತಾದಳದ ನಾಯಕರು ಹೈಕೋರ್ಟ್‌ನ ವಿಭಾಗೀಯ ಪೀಠದ ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಬಹುದು. ಕಾಯಿದೆಯಂತೆ ಆ ಅಧಿಕಾರ ಅವರಿಗೆ ಇದೆ. ಸದ್ಯಕ್ಕೆ ಕಾಂಗ್ರೆಸ್ಸಿಗೆ ನಷ್ಟವೇನೂ ಆಗಲಿಕ್ಕಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ಸಿಗೆ ಈಗ ಬೇರೆ ಭವ್ಯ ಕಾರ್ಯಾಲಯವಿದೆ.
ರಾಜಕೀಯ ಪಕ್ಷಗಳ ಆಸ್ತಿ-ಪಾಸ್ತಿಯ ಒಡೆತನ ಕುರಿತಂತೆ ಯಾವ ಪ್ರತ್ಯೇಕ ಕಾಯಿದೆಯೂ ಇಲ್ಲ. ರಾಜಕೀಯ ಆಸ್ತಿಯನ್ನು ನಿಗದಿಪಡಿಸುವ ಕಾಯಿದೆಯ ಅಗತ್ಯವಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.