ರಾಜಕೀಯ ಪಕ್ಷಗಳ ಪಾರದರ್ಶಕತೆ
ಮೇನಲ್ಲಿ ನಡೆಯ ಬೇಕಾಗಿರುವ ಲೋಕಸಭೆ ಚುನಾವಣೆಗೆ ಆಡಳಿತದ ಸಿಬ್ಬಂದಿ ಭರದಿಂದ ಸಿದ್ಧತೆಗಳನ್ನು ನಡೆಸುತ್ತಿರುವ ಸನ್ನಿವೇಶದಲ್ಲೇ ರಾಜಕೀಯ ಪಕ್ಷಗಳ ವ್ಯವಹಾರಗಳ ಪಾರದರ್ಶಕತೆಯ ಪ್ರಶ್ನೆ ಪ್ರಮುಖವಾಗಿ ಪ್ರಸ್ತಾಪವಾಗುತ್ತಿದೆ.
ಈ ವಿಚಾರದಲ್ಲಿ ಕೇಂದ್ರ ಮಾಹಿತಿ ಆಯುಕ್ತರು ಜೂನ್ ನಲ್ಲಿ ನೀಡಿದ ಆದೇಶದಂತೆ, ರಾಜಕೀಯ ಪಕ್ಷಗಳೂ, ಇತರ ಸಾರ್ವಜನಿಕ ಸಂಸ್ಥೆಗಳಂತೆ ಮಾಹಿತಿ ಹಕ್ಕಿನ ಕಾಯಿದೆಯ ವ್ಯಾಪ್ತಿಯಲ್ಲಿ ಸೇರಿಕೊಂಡು ಸಾರ್ವಜನಿಕರು ಅಪೇಕ್ಷಿಸುವ ಮಾಹಿತಿಯನ್ನು ಕಡ್ಡಾಯವಾಗಿ ಒದಗಿಸಲೇ ಬೇಕು.
ಈ ಆದೇಶ ಪ್ರಕಟವಾದ ಕೂಡಲೇ ರಾಜಕೀಯ ವಲಯಗಳಲ್ಲಿ ಕಂಪನವೇ ಉಂಟಾಯಿತು. ಕಾಂಗ್ರೆಸ್ಸಿನಿಂದ ಹಿಡಿದು ಮ್ಯಾರ್ಕ್ಸ್ವಾದಿ ಕಮ್ಯುನಿಸ್ಟ್ ಪಕ್ಷದ ವರೆಗೆ ಎಲ್ಲ ಪಕ್ಷಗಳೂ ಆಯೋಗದ ತೀರ್ಪನ್ನು ವಿರೋಧಿಸಿ ಸರ್ಕಾರಕ್ಕೆ ಮೊರೆ ಇಟ್ಟವು.
ಯಾವ ರಾಜಕೀಯ ಪಕ್ಷವೂ ಆಯೋಗದ ತೀರ್ಪನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಎಲ್ಲ ರಾಜಕೀಯ ಪಕ್ಷಗಳ ಅಭಿಪ್ರಾಯವೂ ಒಂದೇ ಆಗಿದ್ದರಿಂದ ಸರ್ಕಾರವೇ ಆಯೋಗದ ತೀರ್ಪಿನ ಪರಿಣಾಮವನ್ನು ಅಳಿಸಿ ಹಾಕುವ ರೀತಿಯಲ್ಲಿ ಒಂದು ವಿಶೇಷ ಕಾಯಿದೆಯನ್ನೇ ರಚಿಸಲು ಮುಂದಾಯಿತು. ಆಗಲೂ ಸಾರ್ವಜನಿಕವಾಗಿ ಈ ವಿಚಾರದಲ್ಲಿ ವ್ಯಾಪಕ ಚರ್ಚೆ ಆಗಲಿಲ್ಲ.
ಸರ್ಕಾರ ಕರಡು ವಿಧೇಯಕವನ್ನು ತಯಾರಿಸಿ, ಅದನ್ನು ಸಂಸತ್ತಿಗೆ ರವಾನಿಸಿದ ಅನಂತರ ಆ ಕರಡು ವಿಧೇಯಕವನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಲಾಯಿತು. ಈಗ ಆ ಸ್ಥಾಯಿ ಸಮಿತಿ ಎಲ್ಲ ಆಸಕ್ತ ಹಿತಗಳ ಅಭಿಪ್ರಾಯವನ್ನು ತಿಳಿಯುವ ಉದ್ದೇಶವನ್ನು ವ್ಯಕ್ತಪಡಿಸಿದೆ.
ಮಂಗಳವಾರ ಅಟಾರ್ನಿ ಜನರಲ್ ವಾಹನ್ವತಿ ಅವರು ತಮ್ಮ ಸ್ವಂತ ಅಭಿಪ್ರಾಯವನ್ನು ಸಮಿತಿಗೆ ತಿಳಿಸಿದ್ದಾರೆ. ಅವರು ಏನು ಹೇಳಿದ್ದಾರೆ ಎನ್ನುವುದು ಖಚಿತವಾಗಿ ಗೊತ್ತಾಗಿಲ್ಲವಾದರೂ, ರಾಜಕೀಯ ಪಕ್ಷಗಳು ಇತರ ಎಲ್ಲ ಸಂಸ್ಥೆಗಳಲ್ಲೂ ಪಾರದರ್ಶಕತೆಯನ್ನು ನಿರೀಕ್ಷಿಸುವಂತೆಯೇ, ತಾವೂ ಆ ಸಿದ್ಧಾಂತವನ್ನು ಒಪ್ಪುವುದು ಒಳಿತು ಎನ್ನುವ ಅಭಿಪ್ರಾಯ ನೀಡಿದ್ದಾರೆಂದು ಬಲ್ಲ ಮೂಲಗಳ ಆಧಾರಿತ, ನಂಬಲರ್ಹವಾದ ವರದಿಗಳು ತಿಳಿಸಿವೆ.
ರಾಜಕೀಯ ಪಕ್ಷಗಳು ಮಾಹಿತಿ ಆಯೋಗದ ಆದೇಶವನ್ನು ವಿರೋಧಿಸುತ್ತಿರುವುದಕ್ಕೆ ಇದುವರೆಗೆ ಪ್ರಕಟಿಸಿರುವ ಕಾರಣಗಳು ದುರ್ಬಲವಾಗಿವೆ. ಇದರ ನಡುವೆಯೇ ಕೆಲವು ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಬದಲಾಯಿಸಿದಂತೆ ಕಂಡು ಬರುತ್ತಿದೆ. ಅದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ನಡೆದಿರುವ ಜನಪರ ಆಂದೋಲನಗಳು. ಅರವಿಂದ ಕೇಜ್ರಿವಾಲ ಅವರ ನೇತೃತ್ವದ ಆಮ್ ಆದ್ಮಿ ಪಾರ್ಟಿ ಹಾಗೂ ಇತರ ಕೆಲವು ಸಂಸ್ಥೆಗಳು ಇತರ ಎಲ್ಲ ಸಂಸ್ಥೆಗಳಂತೆಯೇ ರಾಜಕೀಯ ಪಕ್ಷಗಳೂ, ರಾಜಕಾರಣಿಗಳು ಕಾಯಿದೆಯ ಆದೇಶವನ್ನು ಒಪ್ಪಲೇಬೇಕು ಎನ್ನುವ ಆಂದೋಲನ ನಡೆಸಲು ಮುಂದಾಗಿವೆ. ದೇಶದ ಎಲ್ಲ ನಗರಗಳಲ್ಲೂ ಈಗ ಮಧ್ಯಮವರ್ಗಗಳ ಜಾಗೃತ ಸಮಿತಿಗಳನ್ನು ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಇದೆಲ್ಲವನ್ನು ವಿರೋಧಿಸಿ ನಿಂತರೆ, ಎಚ್ಚೆತ್ತ ಜನ ವರ್ಗಗಳ ಬೆಂಬಲವನ್ನು ಕಳೆದು ಕೊಳ್ಳುವ ಸಂಭವ ಹೆಚ್ಚು.
ಎಲ್ಲ ಪ್ರಮುಖ ರಾಜಕೀಯ ಪಕ್ಷಗಳಿಗೂ ಸರ್ಕಾರ ಗಮನಾರ್ಹ ಪ್ರಮಾಣದಲ್ಲಿ ಪರೋಕ್ಷವಾಗಿ ಹಣ ನೀಡಿರುವುದರಿಂದ (ಕಾರ್ಯಾಲಯಕ್ಕೆ ನಿವೇಶನ, ಅಧೀನ ಸಂಸ್ಥೆಗಳಿಗೆ ನೆರವು) ಪಾರದರ್ಶಕತೆ ನಿಯಮದಿಂದ ವಿನಾಯಿತಿ ಕೇಳುವ ಹಕ್ಕು ರಾಜಕೀಯ ಪಕ್ಷಗಳಿಗೆ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

