ತಪ್ಪಾಯ್ತು ತಿದ್ಕೋತೀವಿ
ಮೈಸೂರಿನಿಂದ ಕೊ.ಸು. ನರಸಿಂಹಮೂರ್ತಿ ಅವರು ಕೊಂಚ ಗರಂ ಆಗಿಯೇ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ- 'ಯಾಕೋ ಇದು ಸ್ವಲ್ಪ ಅತಿಯಾಯ್ತು ಅನ್ಸುತ್ತೆ. ಏನ್ ಬರೆದ್ರೂ ಓದ್ತಾರೆ ಅಂತ ನೀವು ಲೀಡ್ ನ್ಯೂಸ್ ಹೆಡ್ಡಿಂಗ್ ಕೊಡ್ತೀರಂತ ಕಾಣಿಸುತ್ತೆ.'
'ಅ.23ರ ಇದು ಕಣ್ಣೀರುಳ್ಳಿ ಎಂದು ಹಾಕಿದ್ದೀರಲ್ಲ. ಇದು ಯಾವ ಹೊಸ ತರಕಾರಿಯ ಅಥವಾ ಹೊಸ ವ್ಯಾಕರಣ ಪ್ರಯೋಗವಾ? ಕಣ್ಣೀರುಈರುಳ್ಳಿ- ಕಣ್ಣೀರೀರುಳ್ಳಿ ಎಂದು ಬರೆದಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಅಭಿಪ್ರಾಯ' ಎಂದಿದ್ದಾರೆ.
ವ್ಯಾಕರಣ ಬದ್ಧವಾಗಿ ಕೊ.ಸು. ನರಸಿಂಹಮೂರ್ತಿ ಅವರ ಅಭಿಪ್ರಾಯ ಸರಿ. ಆದರೆ 'ಏನ್ ಬರೆದ್ರೂ ಓದ್ತಾರೆ' ಎಂದು ನಾವು ಶೀರ್ಷಿಕೆ ನೀಡುತ್ತೇವೆ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಏನ್ ಬರೆದ್ರೂ ಓದ್ತಾರೆ ಅಂತಿದ್ರೆ ತಣ್ಣಗೆ 'ಕೈಗೆಟುಕದ ಈರುಳ್ಳಿ', 'ಕಣ್ಣೀರು ತರಿಸುವ ಈರುಳ್ಳಿ ದರ' ಅಂತ ಏನೋ ಒಂದು ಶೀರ್ಷಿಕೆ ನೀಡಿ ಸುಮ್ಮನಾಗುತ್ತಿದ್ದೆವು.
ಆದರೆ ನಾವು ಹಾಗೆ ಮಾಡಿಲ್ಲ. ಓದುಗರು ಏನು ಕೊಟ್ಟರೂ ಓದಲ್ಲ ಎಂಬುದರ ಅರಿವಿದ್ದೇ ಇಂತಹ ಪ್ರಯೋಗಗಳನ್ನು, ಹೊಸತನದ ಪ್ರಯತ್ನಗಳನ್ನು ಮಾಡುತ್ತಿರುತ್ತೇವೆ. 'ಕಣ್ಣೀರುಳ್ಳಿ' ಎಂಬ ಪದ ಸುಲಭವಾಗಿ ಯಾರಿಗೆ ಬೇಕಾದರೂ ಅರ್ಥವಾಗುವಂತಿದೆ. ಬೇರೆ ಯಾವುದೇ ದ್ವಂದ್ವಾರ್ಥಗಳನ್ನು ಧ್ವನಿಸುವುದಿಲ್ಲ. ಹಾಗಿರುವಾಗ ಈ ಶಬ್ದವನ್ನು ಅದನ್ನು ಒಪ್ಪಿಕೊಳ್ಳಲು ಯಾವ ತೊಂದರೆಯೂ ಕಾಣುತ್ತಿಲ್ಲ.
ನಾವು 'ಹತ್ಯಾಚಾರ' ಶಬ್ದ ಪ್ರಯೋಗ ಮಾಡಿದಾಗಲೂ ಕೆಲವರು ತಕರಾರು ತೆಗೆದಿದ್ದರು. ಆದರೆ ಆ ಶಬ್ದವನ್ನು ಸ್ವೀಕರಿಸಿದ ಓದುಗರೂ ದೊಡ್ಡ ಸಂಖ್ಯೆಯಲ್ಲಿದ್ದರು. ಎಲ್ಲರೂ ಹೊಸತನವನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೆಯೇ ಎಲ್ಲರೂ ಹೊಸತನವನ್ನು ತಿರಸ್ಕರಿಸುವುದೂ ಇಲ್ಲ ಎಂಬುದರ ಅರಿವು ನಮಗಿದೆ. ಹಾಗೆಯೇ ಏನು ಕೊಟ್ಟರೂ ಓದುತ್ತಾರೆ ಎಂದು ಒಂದು ದಿನವೂ ಭಾವಿಸಿಲ್ಲ.
ಆದಿಪ್ರಿಯ ಅವರು ಬರೆಯುತ್ತಾರೆ- 'ಕೋರ್ಟ್ ಬೀಟ್ ವಿಚಾರಗಳನ್ನು ಪ್ರತಿ ಬಾರಿಯೂ 'ಕನ್ನಡಪ್ರಭ'ವು ಓದುಗರಿಗೆ ಸರಳವಾಗಿ ಮಾಹಿತಿಗಳನ್ನು ನೀಡುತ್ತಾ ಬಂದಿದೆ. ಆದರೆ ಅ.23,24 ಮತ್ತು 25ರಂದು ಮೂರು ಬಾರಿ ತಪ್ಪು ಮಾಹಿತಿ ನೀಡಿರುವುದು ಅಸಮಾಧಾನದ ಸಂಗತಿ.'
'ಅ.23ರಂದು 'ಹೈಗೆ ಐವರು ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕ (ಪುಟ 13), ಅ.24ರಂದು ಪುಟ 10ರಲ್ಲಿ '5 ನ್ಯಾಯಾಧೀಶರ ಪ್ರಮಾಣ ಇಂದು' ಮತ್ತು ಅ.25ರಂದು ಪುಟ 2ರಲ್ಲಿ 'ನ್ಯಾಯಪ್ರಮಾಣ' ಶೀರ್ಷಿಕೆಗಳಡಿಯಲ್ಲಿ ಪ್ರಕಟವಾದ ರಾಜ್ಯ ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಇಂದ್ರಕಲಾ ಎಂಬವರ ಹೆಸರು ಪ್ರಕಟಿಸಿದ್ದೀರಿ. ಆದರೆ ಆ ಗೌರವಾನ್ವಿತ ನ್ಯಾಯಮೂರ್ತಿಗಳ ಹೆಸರು 'ರತ್ನಕಲಾ' ಎಂದಾಗಿರುತ್ತದೆ. ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸಿ' ಎಂದಿದ್ದಾರೆ.
ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

